ಬೆಂಗಳೂರು, (www.thenewzmirror.com ) :
ಇದು ಹೇಳಿಕೊಳ್ಳೋದಿಕ್ಕೆ ದೇಶದ ನಂಬರ್ ಸಂಸ್ಥೆ.., ಸಂಸ್ಥೆ ನಷ್ಟದಲ್ಲಿದ್ದರೂ ಪ್ರಶಸ್ತಿಗಳಿಗೇನೂ ಕೊರತೆ ಇಲ್ಲ.., ಪ್ರತಿ ವರ್ಷ ಒಂದಲ್ಲಾ ಒಂದು ಪ್ರಶಸ್ತಿ ಅರಸಿ ಈ ಸಂಸ್ಥೆಗೆ ಬರುತ್ವೆ. ಹೀಗಿದ್ರೂ ಬಸ್ ಗಳ ಪೂಜೆಗೆ ಅಂತ ಕೊಡೋಕೆ ನಿಗಮದಲ್ಲಿ ಹಣ ಇಲ್ಲ..,
ಯೆಸ್, ನಾವ್ ಹೇಳೋಕೆ ಹೊರಟಿರೋದು ಅದೇ ದೇಶದ ನಂಬರ್ ಓನ್ ಸಂಸ್ಥೆ ಅಂತ ಕರೆಸಿಕೊಳ್ತಿರೋ ಬಿಎಂಟಿಸಿ ಬಗ್ಗೆ.., ಪ್ರತಿ ವರ್ಷ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸೋ ಸಂಸ್ಥೆಯಲ್ಲಿ ಆಯುಧಪೂಜೆಗೆ ಅಂತ ಕೊಡೋಕೆ ಹಣವೇ ಇಲ್ಲವಂತೆ.. ಹೀಗಾಗಿ ಒಂದೊಂದು ಬಸ್ ಗೆ ಪೂಜೆಗೆ ಅಂತ ಬರೀ 50 ರೂಪಾಯಿ ಕೊಟ್ಟು ಕೈ ತೊಳೆದುಕೊಂಡಿದೆ ನಿಗಮ..
ಅಲ್ಲ ಸ್ವಾಮಿ ಈಗಿನ ಕಾಲದಲ್ಲಿ ಒಂದು ಚಾಕಲೇಟ್ ಬೇಕು ಅಂದ್ರೆ ಕನಿಷ್ಠ 40 ರೂಪಾಯಿ ಕೊಡ್ಬೇಕು.., ದುಬಾರಿ ದುನಿಯಾದಲ್ಲಿ ಪ್ರತಿ ದಿನ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗ್ತಾನೇ ಇದೆ ಹೀಗಿದ್ರೂ ಒಂದು ಬಸ್ ಪೂಜೆಗೆ ಅಂತ ಬರೀ 50 ರೂ ನಾ..? ಒಂದೊಂದು ಡಿಪೋಗಳಲ್ಲಿ ಲಕ್ಷಾಂತರ ರೂಪಾಯಿ ಜೇಬಿಗೆ ಇಳಿಸೋ ಅಧಿಕಾರಿಗಳಿಗೆ ಇದು ಅರ್ಥ ಆಗಲ್ವಾ ಅಂತ ನೌಕರರು ಪ್ರಶ್ನೆ ಮಾಡ್ತಿದ್ದಾರೆ..,
ನಿಗಮದ ಏಳಿಗೆಗಾಗಿ ಹಗಲಿರುಳು ಶ್ರಮಿಸೋ ಸಿಬ್ಬಂದಿ ವರ್ಗಕ್ಕೆ ನಾವು ಓಡಿಸೋ ಬಸ್ ಚೆನ್ನಾಗಿ ಕಾಣಬೇಕು.., ಇತರ ಬಸ್ ಗಿಂತಲೂ ಅಂದವಾಗಿ ಕಾಣಬೇಕು.., ಬೇರೆಯವರು ನೋಡಿದ್ರೆ ವಾವ್ಹ್ ಅಂತ ಅನ್ನಬೇಕು ಅಂತ ಆಸೆ ಇರುತ್ತೆ. ಹೀಗಾಗಿ ಹಬ್ಬ ಹರಿದಿನದಲ್ಲಿ ತಮಗೆ ಅನ್ನ ಕೊಡೋ ಸಾರಥಿಯನ್ನ ಅಂದವಾಗಿ ಕಾಣುವಂತೆ ಮಾಡಬೇಕು ಅಂತ ಆಸೆ ಇರುತ್ತೆ. ಇಷ್ಟು ಕಡಿಮೆ ದುಡ್ಡು ಕೊಟ್ಟರೆ ಅಂಥ ಆಸೆಯನ್ನ ನೀಗಿಸೋಕೆ ಸಾಧ್ಯನಾ…?
ಖಂಡಿತವಾಗ್ಲೂ ಇಲ್ಲ.., ಯಾಕಂದ್ರೆ 50 ರೂಪಾಯಿಯಲ್ಲಿ ಏನ್ ಬರುತ್ತೆ.., ಒಂದು ಮಾರು ಹೂ ಖರೀದಿ ಮಾಡಿದ್ರೆ 70 ರೂ ಕೊಡಬೇಕು ಹೀಗಿರುವಾಗ ಅಂದವಾಗಿ ಕಾಣುವಂತೆ ಮಾಡೋಕೆ ಸಾಧ್ಯಾನಾ..? ನೋ ವೇ ಚಾನ್ಸೇ ಇಲ್ಲ.., ನಿಗಮದಲ್ಲಿ ಆರ್ಥಿಕ ಸಂಕಷ್ಟ ಇದೆ ಅದನ್ನ ಒಪ್ಪಿಕೊಳ್ಳೋಣ.., ಆಯುಧ ಪೂಜೆ ಬರೋದು ವರ್ಷಕ್ಕೆ ಒಮ್ಮೆ ಮಾತ್ರ.., ಅಂಥ ಸಮಯದಲ್ಲಿ ಸ್ವಲ್ಪ ಹೆಚ್ಚು ಖರ್ಚು ಮಾಡಿದ್ರೆ ಅದರ ಲಾಭವನ್ನ ತಾಯಿ ಚಾಮುಂಡೇಶ್ವರಿ ಮತ್ತೊಂದು ರೂಪದಲ್ಲಿ ಸಂಸ್ಥೆಗ ನೀಡುತ್ತಾಳೆ ಅಲ್ವಾ..?
ಇದೆಲ್ಲಾ ಗೊತ್ತಿದ್ರೂ ಏಸಿ ರೂಮಿನಲ್ಲಿ ಕೂತು ದಿನ ಕಳೆಯೋ ಅಧಿಕಾರಿಗಳಿಗೆ ಇದ್ಯಾವುದೂ ಗೊತ್ತಿಲ್ಲ.., ಪಾಪ ನೌಕರರ ಸಂಕಷ್ಟ ಅವ್ರಿಗೆ ಹೇಗೆ ಅರ್ಥ ಆಗಬೇಕು ಹೇಳಿ..? ಪ್ರತಿ ವರ್ಷವೂ ಇದೇ ಸಮಸ್ಯೆನ್ನ ನೌಕರರು ಅನುಭವಿಸುತ್ತಿದ್ದಾರೆ.., ಸಾರ್ ಇಷ್ಟು ಕಡಿಮೆ ಹಣ ಎಲ್ಲಿ ಸಾಕಾಗುತ್ತೆ ಬರೀ 50 ರೂ ಗೆ ಎರಡು ನಿಂಬೆಹಣ್ಣೂ ಬರೋದಿಲ್ಲ.., ಹೀಗಿರಬೇಕಾದ್ರೆ ಬಸ್ ಅನ್ನ ಆಯುಧ ಪೂಜೆಗೆ ಹೇಗೆ ಅಂದವಾಗಿ ಪೂಜೆ ಮಾಡೋಕೆ ಸಾಧ್ಯ ಅಂತ ಪ್ರಶ್ನೆ ಮಾಡ್ತಿದ್ದಾರೆ. ನಿಜ ಭಕ್ತಿ ಮನಸ್ಸಿನಲ್ಲಿ ಇರಬೇಕು ಹಾಗಂತ ಅದನ್ನ ಮನಸ್ಸಿನಲ್ಲಿ ಇಟ್ಟುಕೊಂಡು ಕೂರೋಕೆ ಆಗುತ್ತಾ ಇಲ್ಲ ಅಲ್ವಾ.?
ನೌಕರರು ಹೇಳೋದೇನು..?
ಪ್ರತಿ ವರ್ಷ 50, 100 ರೂ ಅಂತ ಕೊಟ್ಟರೆ ಒಂದು ಬಸ್ ಹೇಗೆ ಪೂಜೆ ಮಾಡೋದು ಹೇಳಿ..? ಪೂಜೆ ಮಾಡಿದರೂ ಕಷ್ಟ ಮಾಡಲಿಲ್ಲ ಅಂದ್ರೂ ಕಷ್ಟ. ಪೂಜೆ ಮಾಡಲಿಲ್ಲ ಅಂದ್ರೆ ಏಯ್ ಕೊಟ್ಟಿರೋ ಹಣದಲ್ಲಿ ಯಾಕೋ ಮಾಡ್ಲಿಲ್ಲ ಅಂತ ಏಕವಚನದಲ್ಲಿ ನಿಂದನೆ ಮಾಡ್ತಾರೆ.., ಪೂಜೆ ಮಾಡೋಣ ಅಂದರೆ 50 ರೂ ನಲ್ಲಿ ಏನು ಬರುತ್ತೆ ಹೇಳಿ..?
– ಹೆಸರು ಹೇಳಲು ಇಚ್ಚಿಸದ ಸಿಬ್ಬಂದಿ
ನಿಗಮಗಳು ಪೂಜೆಗೆ ಕೊಟ್ಟಿರುವ ಹಣ ಎಷ್ಟು
ಘಟಕಗಳಲ್ಲಿನ ಪ್ರತಿ ಬಸ್ ಪೂಜೆ ಮಾಡೋಕೆ 50 ರೂ
ವಿಭಾಗೀಯ ಕಾರ್ಯಾಗಾರಕ್ಕೆ 1000 ರೂ
ಪ್ರಾದೇಶಿಕ ಕಾರ್ಯಾಗಾರಕ್ಕೆ 2000 ರೂ.
ಇಷ್ಟು ಕಡಿಮೆ ಹಣ ಕೊಟ್ಟಿದ್ದಲ್ಲದೇ ಡಿಪೋಗಳಲ್ಲಿರೋ ಯಂತ್ರಗಳಿಗೆ ಸುಣ್ಣ ಬಣ್ಣ ಬಳಿದು ಅವುಗಳಿಗೂ ಪೂಜೆ ಮಾಡಿ ಅಂತ ಬೇರೆ ಉದ್ದುದ್ದ ಸುತ್ತೋಲೆ ಕೊಡ್ತಾರೆ. ಅಲ್ಲ ಸ್ವಾಮಿ ಹೇಗೆ ಇಷ್ಟು ಕಡಿಮೆ ಹಣದಲ್ಲಿ ಇಷ್ಟೆಲ್ಲಾ ಪೂಜೆ ಮಾಡೋಕೆ ಆಗುತ್ತಾ..? ರಾಜ್ಯದ ನಾಲ್ಕೂ ನಿಗಮಗಳ ಹಿತ ಕಾಯುತ್ತೀನಿ ಅಂತ ಹೇಳುವ ಸಾರಿಗೆ ಸಚಿವರು ಇತ್ತ ಗಮನ ಹರಿಸಬೇಕಿದೆ. ಈ ವರ್ಷ ಈಗಾಗಲೇ ಅನುದಾನ ಬಿಡುಗಡೆಯಾಗಿದೆ. ಮುಂಬರೋ ವರ್ಷಗಳಲ್ಲಾದ್ರೂ ಪ್ರತಿ ಸಂಸ್ಥೆಯೂ ಹೆಚ್ಚೆಚ್ಚು ಅನುದಾನ ಬಿಡುಗಡೆ ಮಾಡುವಂತಾಗಲಿ ಅನ್ನೋದೇ ನಮ್ಮ ಆಶಯ.