ಬೆಂಗಳೂರು, (www.thenewzmirror.com):
ಸರ್ಕಾರಿ ಆಸ್ಪತ್ರೆ ವೈದ್ಯನೊಬ್ಬ ತನ್ನ ಕಾಮ ತೃಷೆಗಾಗಿ ಮಹಿಳಾ ಸಿಬ್ಬಂದಿಯ ಪೀಡಕನಾಗಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕಾಮುಕ ಹೇಳಿದಂತೆ ಕೇಳದ ಮಹಿಳಾ ಸಿಬ್ಬಂದಿಗೆ ಬೆದರಿಕೆ ಹಾಕುತ್ತಿದ್ದ ಎಂದು ನೊಂದ ಸಿಬ್ಬಂದು ಅಳಲು ತೋಡಿಕೊಂಡಿದ್ದಾರೆ.
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿ ಡಾ.ರತ್ನಾಕರ್ ಹಾಡಹಗಲೇ ಕಚೇರಿಯಲ್ಲಿ ಬಹಿರಂಗವಾಗಿ ಮಹಿಳಾ ಸಿಬ್ಬಂದಿ ಜೊತೆಗೆ ಚೆಲ್ಲಾಟ ಆಡುತ್ತಿರುವ ದೃಶ್ಯಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಆಸ್ಪತ್ರೆಯಲ್ಲಿರುವ 9 ಮಂದಿ ಮಹಿಳಾ ಸಿಬ್ಬಂದಿ ಜೊತೆಗೆ ರತ್ನಾಕರ್ ಅಸಭ್ಯವಾಗಿ ವರ್ತಿಸಿದ್ದಾನೆ. ತನ್ನ ತೊಡೆಯ ಮೇಲೆ ಓರ್ವ ಮಹಿಳೆಯನ್ನು ಕೂರಿಸಿಕೊಂಡಿದ್ದಾನೆ. ಮತ್ತೊಬ್ಬ ಮಹಿಳಾ ಸಿಬ್ಬಂದಿ ಮೂಲಕ ರತ್ನಾಕರ್ ಪಾದ ಸೇವೆ ಮಾಡಿಕೊಂಡಿದ್ದಾನೆ. ಇಬ್ಬಿಬ್ಬರು ಮಹಿಳಾ ಸಿಬ್ಬಂದಿಯನ್ನು ಕೂರಿಸಿಕೊಂಡು ರತ್ನಾಕರ್ ಆಸ್ಪತ್ರೆಯಲ್ಲಿಯೇ ರಂಗಿನಾಟ ಆಡಿದ್ದಾನೆ.
ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿ ಡಾ.ರತ್ನಾಕರ್ ಎಂಬ ಕಾಮುಕನ ಕಾಮಪುರಾಣ ಸದ್ಯ ಬಯಲಾಗಿದ್ದು, ಈ ಮಹಿಳಾ ಪೀಡಕನ ಕಿರುಕುಳದಿಂದ ಪಾರುಮಾಡುವಂತೆ ಸಿಬ್ಬಂದಿ ಇಲಾಖೆ ಸಚಿವರಿಗೆ ಮನವಿ ಮಾಡುತ್ತಿದ್ದಾರೆ.
ಒಂದು ವೇಳೆ ರತ್ನಾಕರ್ ಜೊತೆಗೆ ಸಿಬ್ಬಂದಿ ಸಹಕರಿಸದಿದ್ದರೆ ಆ ಸಿಬ್ಬಂದಿಯನ್ನು ಕೆಲಸದಿಂದ ತೆಗೆಸುವ ಅಥವಾ ವರ್ಗಾವಣೆ ಮಾಡಿಸುಸುವುದು ಸೇರಿದಂತೆ ಹಲವಾರು ರೀತಿಯ ಕಿರುಕುಳ ನೀಡುತ್ತಿದ್ದ ಎಂದು ಆರೋಪ ಕೇಳಿ ಬಂದಿದೆ. ಇನ್ನು ಈ ಭಯಕ್ಕೆ ಮಹಿಳಾ ಸಿಬ್ಬಂದಿ ಆತ ಹೇಳಿದಂತೆ ಕೇಳುತ್ತಿದ್ದರು ಎನ್ನಲಾಗಿದೆ.
ಈ ರತ್ನಾಕರ್ ಮಹಿಳಾ ಸಿಬ್ಬಂದಿ ಜೊತೆ ಆಗಾಗ ಟ್ರಿಪ್ ಹೋಗುತ್ತಿದ್ದ. ಈ ಸಂದರ್ಭದಲ್ಲೂ ಅಸಭ್ಯವಾಗಿ ವರ್ತಿಸುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ರತ್ನಾಕರ್ ಕಿರುಕುಳದಿಂದ ನೊಂದ ಮಹಿಳೆಯರು ಆರೋಪಿ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.