ಬೆಂಗಳೂರು (www.thenewzmirror.com) :
ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಪ್ರಕರಣ ಅಂದರೆ ಅದು ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಪ್ತರ ಮನೆ ಮೇಲೆ ನಡೆದಿದ್ದ ಐಟಿ ದಾಳಿ.
ದಾಳಿ ನಡೆದು ಐದು ದಿನಗಳ ಬಳಿಕ ಆದಾಯ ತೆರಿಗೆ ಇಲಾಖೆ ಅಧಿಕೃತ ಮಾಹಿತಿ ನೀಡಿದ್ದು, ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಬಿಎಸ್ ವೈ ಆಪ್ತ ಉಮೇಶ್ ಹಾಗೂ ರಾಜ್ಯ ಸರ್ಕಾರದ ನೀರಾವರಿ ಮತ್ತು ಲೋಕೋಪಯೋಗಿ ಇಲಾಖೆಯ ಮೂವರು ಪ್ರಮುಖ ಗುತ್ತಿಗೆದಾರರು, ಸಂಬಂಧಿಸಿದ ವ್ಯಕ್ತಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆದಿತ್ತು. ಈ ವೇಳೆ ಸುಮಾರು 750 ಕೋಟಿ ರೂಪಾಯಿ ಮೊತ್ತದ ಅಘೋಷಿತ ಆದಾಯ ಇದೆ ಎಂದು ತಿಳಿಸಿದೆ. ಹಾಗೇನೆ 487 ಕೋಟಿ ರೂಪಾಯಿ ಅಘೋಷಿತ ಆದಾಯವೆಂದು ತಿಳಿಸಿದ್ದು ಇದನ್ನ ಸ್ವತಃ ಗುತ್ತಿಗೆದಾರರೇ ಒಪ್ಪಿಕೊಂಡಿದ್ದಾರೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ದೇ ತಿಂಗಳ ಅಕ್ಟೋಬರ್ 7 ರ ಬೆಳಗ್ಗೆ ನಗರದ ಹಲವೆಡೆ ಏಕಕಾಲಕ್ಕೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ 4.96 ಕೋಟಿ ರೂ. ಮೌಲ್ಯದ ಅಘೋಷಿತ ನಗದು, ಲೆಕ್ಕಕ್ಕೆ ಸಿಗದ 8.67 ಕೋಟಿ ಮೌಲ್ಯದ ಚಿನ್ನ, ಹಾಗೂ 29.83 ಕೋಟಿ ರೂ. ಮೌಲ್ಯದ ಬೆಳ್ಳಿ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇದರ ಜತೆಗೆ ಬೋಗಸ್ ಸಬ್ ಕಾಂಟ್ರಾಕ್ಟ್ ನೀಡಿ ಅದಕ್ಕೆ ಹಣ ವೆಚ್ಚ ಮಾಡಿರುವುದು ಸೇರಿದಂತೆ ಇತ್ಯಾದಿ ಕೃತ್ಯ ಎಸಗಿರುವುದನ್ನ ಐಟಿ ಪತ್ತೆ ಹಚ್ಚಿದೆ. 40 ವೈಯುಕ್ತಿಕ ವ್ಯಕ್ತಿಗಳ ಹೆಸರಿನಲ್ಲಿ ಬೋಗಸ್ ಸಬ್- ಕಾಂಟ್ರಾಕ್ಟ್ ವೆಚ್ಚ ತೋರಿಸಿರೋದನ್ನ ದಾಳಿ ವೇಳೆ ಸ್ವತಃ ವ್ಯಕ್ತಿಗಳು ಒಪ್ಪಿಕೊಂಡಿದ್ದಾಗಿ ಹೇಳಿದೆ.
ಬಿ.ಎಸ್.ವೈ ಕಟ್ಟಿಹಾಕಲು ಪ್ಲಾನ್…?
ಇನ್ನು ಈ ದಾಳಿಯ ಒಳಮರ್ಮವನ್ನ ಗಮನಿಸಿದಾಗ ಹಾಗೂ ರಾಜಕೀಯವಾಗಿ ವಿಶ್ಲೇಷಣೆ ಮಾಡಿದಾಗ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನ ಕಟ್ಟಿಹಾಕುವ ತಂತ್ರ ಎಂದೇ ಉಲ್ಲೇಖಿಸಲಾಗುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ಯಡಿಯೂರಪ್ಪ ಕುಟುಂಬದ ಆಪ್ತ ಹಾಗೂ ಎರವಲು ಸೇವೆ ಮೇಲೆ ಮುಖ್ಯಮಂತ್ರಿ ಸಚಿವಾಲಯದ ಸಿಬ್ಬಂದಿಯಾಗಿದ್ದ ಬಿಎಂಟಿಸಿ ಚಾಲಕ ಕಂ ನಿರ್ವಾಹಕ ಉಮೇಶ್ ಆಯನೂರು ಮನೆ ಮೇಲೆ ನಡೆದಿದ್ದ ದಾಳಿ ಇದಕ್ಕೆ ಇಂಬು ನೀಡುತ್ತಿದೆ. ಮಾಜಿ ಸಿಎಂ ಹೆ.ಚ್ ಡಿ ಕುಮಾರಸ್ವಾಮಿ ಕೂಡ ಇದನ್ನೇ ಉಲ್ಲೇಖ ಮಾಡಿದ್ದು, ಸಾಕಷ್ಟು ಚರ್ಚೆಯಾಗುತ್ತಿದೆ.