ಬೆಂಗಳೂರು,(www.thenewzmirror.com):
ಬಿಬಿಎಂಪಿಯಲ್ಲಿ ಮತ್ತೊಂದು ಬೃಹತ್ ಹಗರಣ ಬೆಳಕಿಗೆ ಬಂದಿದೆ. ಪಾಲಿಕೆಯ ಭ್ರಷ್ಟ ಅಧಿಕಾರಿಗಳ ತಪ್ಪನ್ನ ಎತ್ತಿ ಹಿಡಿಯುತ್ತಿರುವ ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ ಅಧ್ಯಕ್ಷ ಎನ್.ಆರ್. ರಮೇಶ್ ಈ ಕುರಿತ ದಾಖಲೆ ಬಿಡುಗಡೆ ಮಾಡಿದ್ದಾರೆ.
ಬೆಂಗಳೂರು ಮಹಾನಗರದ ವ್ಯಾಪ್ತಿಯಲ್ಲಿರುವ 04 ಕಣಿವೆಗಳಿಗೆ (ಚಲ್ಲಘಟ್ಟ, ವೃಷಭಾವತಿ, ಕೋರಮಂಗಲ ಮತ್ತು ಹೆಬ್ಬಾಳ) ಸಂಬಂಧಿಸಿದ ರಾಜಕಾಲುವೆಗಳ ಅಭಿವೃದ್ಧಿ ಕಾಮಗಾರಿಗಳನ್ನು JNURM ಅಡಿಯಲ್ಲಿ ಒಟ್ಟು ₹. 496.90 ಕೋಟಿ ಮೊತ್ತದ ಅನುದಾನದಲ್ಲಿ 15 ಪ್ಯಾಕೇಜ್ ಗಳ ಮೂಲಕ ರಾಜಕಾಲುವೆಗಳ ಮರು ನಿರ್ಮಾಣ, ಪ್ರವಾಹ ನಿರ್ವಹಣೆ ಮತ್ತು ಕೊಳಚೆ ನೀರು ಮಾರ್ಗ ಬದಲಾವಣೆ”ಎಂಬ ಹೆಸರಿನಲ್ಲಿ ಈ 15 ಪ್ಯಾಕೇಜ್ ಗಳ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು.
ಒಟ್ಟು ₹. 496.90 ಕೋಟಿ ಮೊತ್ತದ ಕಾಮಗಾರಿಗಳಿಗೆ ಸಂಬಂಧಿಸಿದಂತೆ – “ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು” – “ಬೆಂಗಳೂರು ನಗರ ಪ್ರದೇಶದಲ್ಲಿ ಮಳೆ ನೀರು ನಿರ್ವಹಣೆಯ ಮೇಲಿನ ಕಾರ್ಯ ನಿರ್ವಹಣಾ ಲೆಕ್ಕ ಪರಿಶೋಧನೆ ವರದಿ” ಯನ್ನು 2021 ರಲ್ಲಿ ಸಲ್ಲಿಸಿದ್ದರು.
ಅದರಲ್ಲಿ ರಾಜರಾಜೇಶ್ವರಿ ನಗರ ವಲಯ, ಬೊಮ್ಮನಹಳ್ಳಿ ವಲಯ ಮತ್ತು ಬ್ಯಾಟರಾಯನಪುರ ವಲಯಗಳ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳ ಪೈಕಿ, ನಿರ್ವಹಣೆಯನ್ನೇ ಮಾಡದೆ 14 ಕಾಮಗಾರಿಗಳಿಗೆ ಸುಮಾರು ₹. 62.86 ಕೋಟಿಗಳಷ್ಟು ಬೃಹತ್ ಮೊತ್ತವನ್ನು 2014-2016 ರ ಅವಧಿಯಲ್ಲಿ ಮೆ|| ಪ್ರೀತಿ ಕ್ವಾಡ್ ಕನ್ಸಲ್ಟೆಂಟ್ಸ್ ಮತ್ತು ಮೆ|| ಸ್ಟುಪ್ ಕನ್ಸಲ್ಟೆಂಟ್ಸ್ ಸೇರಿದಂತೆ ಹಲವು ಗುತ್ತಿಗೆದಾರ ಸಂಸ್ಥೆಗಳಿಗೆ ಪಾವತಿ ಮಾಡಿರುವ ಆಘಾತಕಾರಿ ಸತ್ಯಾಂಶಗಳು ಕಂಡುಬರುತ್ತವೆ ಎಂದು ಉಲ್ಲೇಖಿಸಲಾಗಿತ್ತು.
ರಾಜರಾಜೇಶ್ವರಿ ನಗರ ವಲಯ, ಬೊಮ್ಮನಹಳ್ಳಿ ವಲಯ ಮತ್ತು ಬ್ಯಾಟರಾಯನಪುರ ವಲಯಗಳ 14 ಕಾಮಗಾರಿಗಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ಪಾವತಿ ಮಾಡಲಾದ ₹. 62.86 ಕೋಟಿ ರೂಪಾಯಿಗಳಿಗೆ ಸಂಬಂಧಿಸಿದಂತೆ ಮಹಾ ಲೆಕ್ಕಪಾಲರು ಅತ್ಯಂತ ಆಘಾತಕಾರಿಯಾದ ವಿಷಯಗಳನ್ನು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.
ಮೆ|| ಸ್ಟುಪ್ ಕನ್ಸಲ್ಟೆಂಟ್ಸ್ ಸಂಸ್ಥೆಯವರು ಸಲ್ಲಿಸಿದ್ಧ ನಕಲು ದಾಖಲೆಗಳ ಆಧಾರದಲ್ಲಿ, ಸದರಿ ಸಂಸ್ಥೆಗೆ ಒಟ್ಟು ₹. 94.93 ಲಕ್ಷಗಳನ್ನು ಪಾವತಿಸಲು 2018-19 ರಲ್ಲಿ “ಬೃಹತ್ ನೀರುಗಾಲುವೆ ಇಲಾಖೆ”ಯ ಮುಖ್ಯ ಅಭಿಯಂತರರು “ಅನುಮೋದನೆ”ನೀಡುವ ಮೂಲಕ ಮತ್ತೊಂದು ಅಕ್ರಮ ಕಾರ್ಯವನ್ನೆಸಗಿದ್ದರು !!!
ಈ ಎಲ್ಲವುಗಳ ಬಗ್ಗೆ ಅತ್ಯಂತ ಸ್ಪಷ್ಟವಾಗಿ ತಮ್ಮ ವರದಿಯಲ್ಲಿ ಅತ್ಯಂತ ಸ್ಪಷ್ಟವಾಗಿ ತಿಳಿಸಿರುವ ಮಹಾ ಲೆಕ್ಕಪಾಲರು – ಸದರಿ ಬೃಹತ್ ಹಗರಣಕ್ಕೆ ಸಂಬಂಧಿಸಿದಂತೆ, “ನಕಲಿ ದಾಖಲೆಗಳ ಆಧಾರದಲ್ಲಿ ಕಡತಗಳನ್ನು ಮರು ಸೃಷ್ಟಿ ಮಾಡಲಾಗಿದೆ” ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಅಲ್ಲದೇ “ಎರಡು ವಿಭಿನ್ನವಾದ ಕಾಮಗಾರಿಗಳನ್ನು ಒಂದುಗೂಡಿಸಿ, ಗುತ್ತಿಗೆದಾರರಿಗೆ ಹಣ ಪಾವತಿಸಲಾಗಿದೆ”ಎಂಬ ವಿಷಯವನ್ನೂ ಸಹ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.
ಬೃಹತ್ ನೀರುಗಾಲುವೆ ಇಲಾಖೆ”ಯಲ್ಲಿ 2014-2016 ರ ಅವಧಿಯಲ್ಲಿ ಬೊಮ್ಮನಹಳ್ಳಿ ವಲಯ ಮತ್ತು ರಾಜರಾಜೇಶ್ವರಿ ನಗರ ವಲಯಗಳಲ್ಲಿ ಕಾರ್ಯಪಾಲಕ ಅಭಿಯಂತರರಾಗಿ, ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ, ಸಹಾಯಕ ಅಭಿಯಂತರರಾಗಿ ಕಾರ್ಯ ನಿರ್ವಹಿಸಿರುವವರ ವಿರುದ್ಧ ಮತ್ತು ಇದೇ ಅವಧಿಯಲ್ಲಿ “ರಾಜಕಾಲುವೆ ವಿಭಾಗ”ದ ಮುಖ್ಯ ಅಭಿಯಂತರರಾಗಿದ್ದವರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮಾನ್ಯ ಮುಖ್ಯಮಂತ್ರಿಗಳನ್ನು ಹಾಗೂ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳನ್ನ ರಮೇಶ್ ಒತ್ತಾಯಿಸಿದ್ದಾರೆ.
ನಕಲು ದಾಖಲೆಗಳ ಆಧಾರದಲ್ಲಿ “ಮೆ|| ಸ್ಟುಪ್ ಕನ್ಸಲ್ಟೆಂಟ್ಸ್” ಸಂಸ್ಥೆಗೆ ₹. 94.93 ಲಕ್ಷ ರೂಪಾಯಿಗಳ ಬಾಕಿ ಮೊತ್ತ ಪಾವತಿಸಲು ಅನುಮೋದನೆ ನೀಡಿರುವ 2018-19 ರ ಅವಧಿಯಲ್ಲಿ ರಾಜಕಾಲುವೆ ವಿಭಾಗದ ಮುಖ್ಯ ಅಭಿಯಂತರರಾಗಿದ್ದವರ ವಿರುದ್ಧವೂ ಕಾನೂನು ರೀತ್ಯಾ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಮಾನ್ಯ ಮುಖ್ಯಮಂತ್ರಿಗಳನ್ನು ಹಾಗೂ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳನ್ನು ಆಗ್ರಹಿಸಲಾಗಿದೆ.
ಅಲ್ಲದೇ, ಈ “ಮಹಾ ವಂಚನೆ ಹಗರಣ” ದಲ್ಲಿ ಪ್ರಮುಖ ಪಾಲುದಾರರಾಗಿರುವ ಎಲ್ಲ “ಗುತ್ತಿಗೆದಾರ”ರ ವಿರುದ್ಧವೂ ಸಹ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮಾನ್ಯ ಮುಖ್ಯಮಂತ್ರಿಗಳನ್ನು ಹಾಗೂ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳನ್ನು ಆಗ್ರಹಿಸಲಾಗಿದೆ.
ಈ ಮಹಾ ವಂಚನೆಯ ಬೃಹತ್ ಹಗರಣಕ್ಕೆ ಸಂಬಂಧಿಸಿದಂತೆ, ACB ಮತ್ತು BMTF ನಲ್ಲಿ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ “ಭ್ರಷ್ಟಾಚಾರ”, “ವಂಚನೆ”, “ಅಧಿಕಾರ ದುರುಪಯೋಗ” ಮತ್ತು “ನಕಲಿ ದಾಖಲೆ ತಯಾರಿಕೆ” ಪ್ರಕರಣಗಳನ್ನು ದಾಖಲಿಸಿಕೊಳ್ಳುವಂತೆ ರಮೇಶ್ ಮನವಿ ಮಾಡಿದ್ದಾರೆ.