ತುಮಕೂರು,(www.thenewzmirror.com):
ರಸ್ತೆ ಗುಂಡಿ ವಿಚಾರದಲ್ಲಿ ಪದೇ ಪದೇ ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಳ್ಳುತ್ತಿರುವ ಸರ್ಕಾರ ಹಾಗೂ ಬಿಬಿಎಂಪಿ ನಿದ್ದೆಯಿಂದ ಎದ್ದಂತೆ ಕಾಣುತ್ತಿಲ್ಲ… ಇದ್ರ ನಡುವೆನೇ ಗುಂಡಿ ಮುಚ್ಚುವ ವಿಚಾರದಲ್ಲಿ ಬಾಲಕಿಯೊಬ್ಬಳು ಸಿಎಂ ಬೊಮ್ಮಾಯಿಗೆ ವಿನೂತನವಾಗಿ ಮನವಿ ಮಾಡಿದ್ದಾಳೆ.
ರಸ್ತೆ ಗುಂಡಿಯನ್ನ ತಕ್ಷಣದಲ್ಲೇ ಮುಚ್ಚಿ ಅದಕ್ಕೆ ಅಗತ್ಯವಿರುವ ಹಣವನ್ನ ನಾನು ಚಾಕಲೇಟ್ ತೆಗೆದುಕೊಳ್ಳಲು ಇಟ್ಟುಕೊಂಡಿದ್ದ ಹಣವನ್ನ ಕೊಡ್ತೀನಿ ಅಂತ ಹೇಳಿದ್ದಾಳೆ.
ತಿಪಟೂರು ನಗರದ 8 ವರ್ಷದ ಬಾಲಕಿ ಎನ್.ಧವನಿ ಈ ರೀತಿ ಮನವಿ ಮಾಡಿದ್ದು, ರಸ್ತೆಗಳ ಗುಂಡಿ ಮುಚ್ಚಿಸಿ, ಜನರ ಜೀವ ಉಳಿಸುವಂತೆ ಮನವಿ ಮಾಡಿದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
‘ರಸ್ತೆಗಳ ಗುಂಡಿ ನೋಡಿದರೆ ಭಯವಾಗುತ್ತದೆ. ಹಲವರು ಬಿದ್ದು ಸತ್ತು ಹೋಗಿದ್ದಾರೆ. ಇಂತಹ ರಸ್ತೆಗಳಲ್ಲಿ ಅಪ್ಪ ಮನೆಗೆ ಹೇಗೆ ಬರುತ್ತಾರೆ ಎಂದು ಭಯ ವಾಗುತ್ತದೆ’ ಎಂದು ಬಾಲಕಿ ವಿಡಿಯೊದಲ್ಲಿ ಆತಂಕ ತೋಡಿಕೊಂಡಿದ್ದಾರೆ.
‘ನಿಮ್ಮ ಬಳಿ ಹಣ ಇಲ್ಲದಿದ್ದರೆ, ನಾನು ಕೊಡುತ್ತೇನೆ. ಚಾಕೋಲೆಟ್‌ಗೆ ಅಪ್ಪ ಕೊಟ್ಟಿದ್ದ ಹಣ ನನ್ನ ಬಳಿ ಇದೆ. ಅದನ್ನೇ ಕೊಡುತ್ತೇನೆ. ಮೊದಲು ಗುಂಡಿ ಮುಚ್ಚಿಸಿ, ಜನರ ಪ್ರಾಣ ಕಾಪಾಡಿ’ ಎಂದು ಕೇಳಿಕೊಂಡಿದ್ದಾರೆ.