ಬೆಂಗಳೂರು, (www.thenewzmirror.com):
ಝೀ ಟಿವಿಯ ಸರಿಗಮಪ ರಿಯಾಲಿಟಿ ಶೋನ ಕಳೆದ ವಾರದ ಎಪಿಸೋಡ್ ನಲ್ಲಿ ಹಂಸಲೇಖ ಗೈರಾಗಿದ್ದರು. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಪೇಜಾವರ ಶ್ರೀಗಳ ಬಗ್ಗೆ ಹೇಳಿಕೆ ನೀಡಿದ ಕಾರಣ ಹಂಸಲೇಖ ಇನ್ನು ಮುಂದೆ ಸರಿಗಮಪದಲ್ಲಿ ಪಾಲ್ಗೊಳ್ಳುವುದಿಲ್ವಾ ಅನ್ನೋ ಸುದ್ದಿಯೆಲ್ಲಾ ಪ್ರಸಾರವಾಗತೊಡಗಿತ್ತು. ಮತ್ತೊಂದ್ಕಡೆ ಅವ್ರ ಆರೋಗ್ಯದಲ್ಲಿ ಏರುಪೇರಾಗಿದೆ ಅಂತಾನೂ ಸುದ್ದಿ ಹರಿದಾಡುತ್ತಿತ್ತು.
ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿರೋ ಹಂಸಲೇಖ, ಝೀ ವಾಹಿನಿ ಬಿಜಿನೆಸ್ ಹೆಡ್ ರಾಘವೇಂದ್ರ ಹುಣಸೂರು ಅವರಿಗೆ ಬರೆದಿದ್ದಾರೆ ಎನ್ನಲಾದ ಪತ್ರವೊಂದು ವೈರಲ್ ಆಗ್ತಿದೆ.., ಆ ಪತ್ರದಲ್ಲಿ ಆದಷ್ಟು ಬೇಗ ಸರಿಗಮಪಗೆ ಬಂದು ಸೇರಿಕೊಳ್ಳುತ್ತೇನೆ ಎಂದಿದ್ದಾರೆ.
ಪತ್ರದ ಸಾರಾಂಶ
ಪ್ರೀತಿಯ ರಾಘು, ನನ್ನ ಆರೋಗ್ಯ ಸ್ಥಿರವಾಗಿದೆ. ಸರಿಗಮಪ ನನ್ನ ಪ್ರೀತಿಯ ಭೂಮಿಕೆ. ಅದು ಮನಸ್ಸು ಮನಸ್ಸುಗಳನ್ನು ನೇಯುವ ವೇದಿಕೆ. ಸುಧಾರಣೆಗಳ ಸುಂದರ ಕಥೆಗಳನ್ನು ಓದಿಕೊಳ್ಳುತ್ತಿದ್ದೇನೆ. ಬೇಗ ಬಂದು ಸೇರಿಕೊಳ್ಳುತ್ತೇನೆ ಎಂದಿದ್ದಾರೆ.
‘ನಮಸ್ಕಾರ, ನಾನು ಆರೋಗ್ಯವಾಗಿದ್ದೀನಿ. ನನಗೆ ಆರೋಗ್ಯ ತಪ್ಪಿದೆ ಅಂತ ಇಡೀ ಕರ್ನಾಟಕದಿಂದ ಕರೆಗಳು ಬಂದಿದೆ. ಎಲ್ಲರೂ ನನ್ನ ಆರೋಗ್ಯ ವಿಚಾರಿಸುತ್ತಿದ್ದಾರೆ. ನನಗೆ ಗೊತ್ತಾಗಿದೆ ನಿಮ್ಮ ಪ್ರೀತಿ ಎಷ್ಟು ವಿಶಾಲವಾಗಿದೆ ಎಂದು. ಈ ಪ್ರೀತಿ ಪಡೆಯೋಕೆ ನಾನು ತುಂಬಾನೆ ಸವೆದಿದ್ದೀನಿ, ಸಹಿಸಿದ್ದೀನಿ. ಅದರ ಸುಖ ಇವತ್ತು ಅನುಭವಿಸುತ್ತಿದ್ದೀನಿ. ನಾನು ಕೇಳದೆ ನನ್ನ ಮನೆಗೆ ಸರ್ಕಾರ ಭದ್ರತೆ ಕೊಟ್ಟಿದೆ’ ಎಂದಿದ್ದರು ಹಂಸಲೇಖ.
‘ನಾನು ಕೇಳದೆ ಇಡೀ ಕರ್ನಾಟಕದಲ್ಲಿ ಲಕ್ಷಾಂತರ ಜನ ಅಭಿಮಾನಿಗಳು ನನ್ನ ಪರ ಮಾತನಾಡುತ್ತಿದ್ದಾರೆ. ನನ್ನ ಉದ್ಯಮದ ಆತ್ಮೀಯರು ನನಗೆ ಧೈರ್ಯ ತೋರಿದ್ದಾರೆ. ಈಗ ಇಡೀ ಕರ್ನಾಟಕವೇ ನನ್ನನ್ನು ಪ್ರೀತಿಯಲ್ಲಿ ಮುಳುಗಿಸಿ ಅಭಿಮಾನದಲ್ಲಿ ತೇಲಿಸುತ್ತಿದ್ದಾರೆ. ಅಭಿಮಾನ ಆವೇಶವಾಗಬಾರದು. ಆವೇಶ ಅವಘಡಗಳಿಗೆ ಕಾರಣವಾಗಬಾರದು. ಅಭಿಮಾನ ಹಾಡಿನಂತೆ ಇರಬೇಕು, ಹಾಡು ಕೇಳಿಸುತ್ತದೆ. ಮುಟ್ಟಿಸುತ್ತದೆ. ನಿಮ್ಮ ಪ್ರೀತಿ ನನಗೆ ತಲುಪಿದೆ. ನಿಮ್ಮ ಪ್ರೀತಿಗೆ ನನ್ನ ಹೃದಯ ತುಂಬಿದ ನಮಸ್ಕಾರಗಳು.
ಇಂತಿ
ನಿಮ್ಮ ಹಂಸಲೇಖ