ನಂದಿ ಬೆಟ್ಟಕ್ಕೆ ರೋಪ್-ವೇ ನಿರ್ಮಾಣ ಮಾಡಲು ಸರ್ಕಾರ ಅಸ್ತು..!

ಬೆಂಗಳೂರು,(www.thenewzmirror.com) :

ಚಿಕ್ಕಬಳ್ಳಾಪುರದ ಜನಪ್ರಿಯ ಪ್ರವಾಸಿ ತಾಣ ನಂದಿ ಗಿರಿಧಾಮವನ್ನು ಪ್ರವಾಸೋದ್ಯಮ ತಾಣವಾಗಿ ಬೆಳೆಸುವ ಉದ್ದೇಶದೊಂದಿಗೆ ರೂಪಿಸಿರುವ ರೋಪ್-ವೇ ಯೋಜನೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದರಿಂದಾಗಿ ನಂದಿ ಬೆಟ್ಟ ಕೆಲವೇ ವರ್ಷಗಳಲ್ಲಿ ಅತ್ಯಂತ ಆಕರ್ಷಣೀಯ ಪ್ರವಾಸಿ ಸ್ಥಳವಾಗಿ ಅಭಿವೃದ್ಧಿಯಾಗಲಿದೆ.

RELATED POSTS

ಬೆಂಗಳೂರಿನಿಂದ 60 ಕಿ.ಮೀ. ದೂರದಲ್ಲಿರುವ ನಂದಿ ಗಿರಿಧಾಮ ಆಕರ್ಷಣೀಯ ಪ್ರವಾಸಿ ತಾಣವಾಗಿದ್ದು, ಪ್ರವಾಸಿಗರಿಗೆ ವಾರಾಂತ್ಯದಲ್ಲಿ ಭೇಟಿ ನೀಡಲು ಸೂಕ್ತ ಸ್ಥಳವಾಗಿದೆ. ಪಾರಂಪರಿಕ ಸ್ಮಾರಕ, ಕೋಟೆ, ಮನಸ್ಸಿಗೆ ಮುದ ನೀಡುವ ಪರಿಸರದಿಂದಾಗಿ ಇದು ಪ್ರವಾಸಿಗರ ಆಕರ್ಷಣೆ ಕೇಂದ್ರಬಿಂದುವಾಗಿದೆ.

ಈ ಭಾಗದಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಿದರೆ ಬೇರೆ ದೇಶಗಳಿಂದಲೂ ಪ್ರವಾಸಿಗರನ್ನು ಸೆಳೆಯಬಹುದು ಎಂಬ ಅಂಶ ಗಮನಕ್ಕೆ ಬಂದಿತ್ತು. ಈ ನಿಟ್ಟಿನಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ,’DBFOT’ ಮಾದರಿಯಲ್ಲಿ ರೋಪ್-ವೇ ನಿರ್ಮಿಸುವ ಯೋಜನೆಯನ್ನು ರೂಪಿಸಲಾಗಿತ್ತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 93.40 ಕೋಟಿ ರೂ. ವೆಚ್ಚದ ಪ್ರವಾಸೋದ್ಯಮ ಇಲಾಖೆಯ ಈ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಈ ಯೋಜನೆಯಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರ ಗಮನ ಸೆಳೆಯಲಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ.

ನಂದಿ ಬೆಟ್ಟದ ತಪ್ಪಲಿನಿಂದ ಸುಮಾರು 2.93 ಕಿ.ಮೀ. ಎತ್ತರದ ಬೆಟ್ಟ ಪ್ರದೇಶಕ್ಕೆ ರೋಪ್-ವೇ ನಿರ್ಮಿಸಿ ಪ್ರವಾಸಿಗರನ್ನು ಕರೆದೊಯ್ಯಲು ಉದ್ದೇಶಿಸಿದ್ದು, ಲ್ಯಾಂಡಿಂಗ್ ಸ್ಟೇಷನ್ (ಇಳಿಯುವ ಸ್ಥಳ) ಬೆಟ್ಟದ ತಳಭಾಗ ಹಾಗೂ ಮೇಲ್ಭಾಗದ ಎರಡೂ ಕಡೆ ಇರುವಂತೆ ಯೋಜನೆ ರೂಪಿಸಲಾಗಿದೆ. ಇದರಲ್ಲಿ ಒಟ್ಟು 18 ಟವರ್ ಗಳನ್ನು ನಿರ್ಮಿಸಲಾಗುತ್ತದೆ. ಇದರ ಜೊತೆಗೆ ರೆಸ್ಟೋರೆಂಟ್, ಕೆಫೆ, ಆಹಾರ ಮಳಿಗೆ, ಇತರೆ ಮಳಿಗೆಗಳನ್ನು ನಿರ್ಮಿಸಲು ಅವಕಾಶವಿರುತ್ತದೆ. ರೋಪ್-ವೇ ನಲ್ಲಿ 50 ಕ್ಯಾಬಿನ್ ಗಳಿರಲಿದ್ದು, ಪ್ರತಿಯೊಂದರಲ್ಲೂ 10 ಮಂದಿ ಪ್ರಯಾಣಿಸಬಹುದು. ಒಟ್ಟು 28 ನಿಮಿಷಗಳಲ್ಲಿ ಕ್ರಮಿಸಬಹುದಾಗಿದೆ.

ಈ ಯೋಜನೆಯಿಂದಾಗಿ ಚಿಕ್ಕಬಳ್ಳಾಪುರದ ಇತಿಹಾಸ, ಪರಂಪರೆ, ನಿಸರ್ಗ ರಮಣೀಯತೆ ಹೊರಜಗತ್ತಿಗೆ ತಿಳಿದುಬರಲಿದೆ. ಹೆಚ್ಚು ಪ್ರವಾಸಿಗರು ಬರುವುದರಿಂದ ಉದ್ಯೋಗ ಸೃಷ್ಟಿಯೂ ಸಾಧ್ಯವಾಗಿ, ಸ್ಥಳೀಯ ಆರ್ಥಿಕತೆ ಅಭಿವೃದ್ಧಿಯಾಗಲಿದೆ. ಸೂರ್ಯೋದಯ ಹಾಗೂ ಸೂರ್ಯಾಸ್ತಮಾನದ ಸಮಯದಲ್ಲಿ ಹೆಚ್ಚು ಜನರು ಖಾಸಗಿ ವಾಹನಗಳಲ್ಲಿ ಬಂದು ಬೆಟ್ಟಕ್ಕೆ ತೆರಳುತ್ತಾರೆ.

ರೋಪ್-ವೇ ನಿಂದಾಗಿ ಪರಿಸರ ಸ್ನೇಹಿ ವಾತಾವರಣ ಸೃಷ್ಟಿಯಾಗುವುದರೊಂದಿಗೆ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಜೊತೆಗೆ ಜನಜಂಗುಳಿಯನ್ನು ಸುಲಭವಾಗಿ ನಿರ್ವಹಣೆ ಮಾಡಬಹುದು. ರೋಪ್ -ವೇ ನಲ್ಲಿನ ಸಂಚಾರದ ವೇಳೆ ಪ್ರವಾಸಿಗರು ವಿಹಂಗಮ ನೋಟವನ್ನೂ ಕಣ್ತುಂಬಿಕೊಳ್ಳಬಹುದು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist