ಬೆಂಗಳೂರು,(www.thenewzmirror.com):
ತಮ್ಮನ್ನು ಹತ್ಯೆ ಮಾಡಲು ಸಂಚು ರೂಪಿಸಿರುವ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಹತ್ಯೆ ಸಂಚಿನ ವಿಚಾರ ಬಹಿರಂಗವಾದ ಹಿನ್ನೆಲೆಯಲ್ಲಿ ಮಾತನಾಡಿದ ಅವ್ರು, ಸ್ಥಳೀಯ ಮುಖಂಡನಾಗಿರುವ ಗೋಪಾಲಕೃಷ್ಣ ಈ ಹಿಂದೆ ನನ್ನ ವಿರುದ್ಧ ಎರಡು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಮೂರನೇ ಸ್ಥಾನ ಪಡೆದು ಸೋಲನುಭವಿಸಿದ್ದರು. ರಾಜಕೀಯ ದ್ವೇಷದಿಂದ ನನ್ನ ಕೊಲೆಗೆ ಸಂಚು ರೂಪಿಸಿರಬೇಕು ಎಂದರು.
ಮಂಗಳವಾರ ಸಂಜೆ ಯಲಹಂಕದಲ್ಲಿರುವ ನನ್ನ ಗೃಹ ಕಚೇರಿಗೆ ಒಂದು ಪತ್ರ ಬಂದಿತ್ತು. ಅದು ಕುಳ್ಳ ದೇವರಾಜ್ ಬರೆದಿದ್ದ ಕ್ಷಮಾಪಣ ಪತ್ರವಾಗಿತ್ತು. ಯಲಹಂಕ ಶಾಸಕ ವಿಶ್ವನಾಥ್ ಅವರನ್ನು ಕೊಲೆ ಮಾಡದಿದ್ದರೆ ನಿನ್ನನ್ನು ಮತ್ತು ವಿಶ್ವನಾಥ್ ಅವರನ್ನು ಕೊಲೆ ಮಾಡುವುದಾಗಿ ಗೋಪಾಲಕೃಷ್ಣ ಬೆದರಿಕೆ ಹಾಕಿದ್ದಾರೆ. ನಾನು ಆರ್ಥಿಕ ಮುಗ್ಗಟ್ಟಿನಿಂದ ಗೋಪಾಲಕೃಷ್ಣ ಜೊತೆ ಕೈಜೋಡಿಸಿದ್ದು ತಪ್ಪಾಗಿದೆ. ದಯಮಾಡಿ ನನ್ನನ್ನು ಕ್ಷಮಿಸಿ ಎಂದು ಮುಖ್ಯಮಂತ್ರಿಗಳು, ಗೃಹ ಸಚಿವರು ಮತ್ತು ಪೊಲೀಸ್ ಆಯುಕ್ತರಿಗೆ ಬರೆದಿರುವ ಪತ್ರದ ಪ್ರತಿಗಳನ್ನು ಅಪರಿಚಿತರ ಮೂಲಕ ನನ್ನ ಕಚೇರಿಗೆ ತಲುಪಿಸಿದ್ದ ಎಂದು ಹೇಳಿದರು.
ನಾನು ಸದಾ ಒಬ್ಬಂಟಿಯಾಗಿಯೇ ಓಡಾಡುತ್ತೇನೆ. ಪ್ರವಾಸ ಮಾಡುತ್ತಿರುತ್ತೇನೆ. ನನ್ನ ವಾಹನ ಚಾಲಕ ಮತ್ತು ಅಂಗರಕ್ಷಕನೊಬ್ಬನ್ನನ್ನು ಬಿಟ್ಟರೆ ನನಗೆ ಯಾವುದೇ ಭದ್ರತೆ ಇಲ್ಲ. ಧೈರ್ಯವಾಗಿ ಓಡಾಡುತ್ತಿರುತ್ತೇನೆ. ಇಂತಹ ಸಂದರ್ಭದಲ್ಲಿ ನನ್ನ ವಿರುದ್ಧ ಏನೋ ಷಡ್ಯಂತ್ರ ನಡೆಯುತ್ತಿದೆ ಎಂಬ ಅನುಮಾನ ಹಲವು ದಿನಗಳ ಹಿಂದೆಯೇ ಬಂದಿತ್ತು. ಆದರೆ, ನನ್ನ ಕೊಲೆಗೇ ಸಂಚು ನಡೆಯುತ್ತಿದೆ ಎಂಬುದು ಮಾತ್ರ ತಿಳಿದಿರಲಿಲ್ಲ. ಹಾಗೊಂದು ವೇಳೆ ಇದ್ದಿದ್ದರೆ ನಾವು ಎಚ್ಚೆತ್ತುಕೊಳ್ಳುತ್ತಿದ್ದೆ ಎಂದರು.
ಆಂಧ್ರದ ಹಂತಕರಿಗೆ ಸುಪಾರಿ
ಕಡಪ ಮತ್ತು ಆಂಧ್ರ ಪ್ರದೇಶದಿಂದ ಕೊಲೆಗಡುಕರಿಗೆ ಸುಪಾರಿ ನೀಡಿ ವಿಶ್ವನಾಥ್ ಅವರನ್ನು ಕೊಲೆ ಮಾಡಿಸುವುದಾಗಿ ಗೋಪಾಲಕೃಷ್ಣ ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ದೇವರಾಜ್ ತಪ್ಪೊಪ್ಪಿಗೆ ಪತ್ರದಲ್ಲಿ ಹೇಳಿಕೊಂಡಿದ್ದಾರೆ ಎಂದು ವಿಶ್ವನಾಥ್ ತಿಳಿಸಿದರು.