ಬೆಂಗಳೂರು,(www.thenewzmirror.com) ;
ಯುಗಾದಿ ಹಬ್ಬದಂದು ಪಂಚಮಸಾಲಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ಸತ್ಯಾಗ್ರಹ ನಡೆಸುತ್ತಿರುವ ಜಯಮೃತ್ಯುಂಜಯ ಸ್ವಾಮೀಜಿಗೆ ಪ್ರಧಾನಿ ಕಚೇರಿಯಿಂದ ಸಿಹಿ ಸುದ್ದಿ ಸಿಕ್ಕಿದೆ.
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಸಬೇಕೆಂಬ ಹೋರಾಟಕ್ಕೆ ಸಿಎಂ ಸ್ಪಂದನೆ ಮಾಡದಿದ್ರೂ ಚುನಾವಣಾ ಸಮಯ ಆಗಿದ್ದರಿಂದ ಪ್ರಧಾನಿ ಕಚೇರಿಯಿಂದ ಸಂದೇಶವೊಂದು ರವಾನೆಯಾಗಿದೆ.

ರಾಜ್ಯ ಸರ್ಕಾರದಿಂದ ಸಿಹಿಬದಲು ಕಹಿ ಸಿಕ್ಕಿದೆ ಅಂತ ಭಾವಿಸಿದ್ದ ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿಗೆ ಪ್ರಧಾನಿ ಕಚೇರಿಯಿಂದ ಕರೆ ಬಂದಿದ್ದು ನಿಮ್ಮ ಬೇಡಿಕೆಯನ್ನ ಪರಿಶೀಲನೆ ಮಾಡುವುದಾಗಿ ಹೇಳಿದ್ದಾರಂತೆ. ಸ್ವತಃ ಈ ವಿಚಾರವನ್ನ ಜಯಮೃತ್ಯುಂಜಯ ಸ್ವಾಮೀಜಿಯೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕಳೆದ ಎರಡು ವರ್ಷದಿಂದ ಹೊರಾಟ ನಡೆಸುತ್ತಿದ್ದರೂ ಸರ್ಕಾರದಿಂದ ಸ್ಪಷ್ಟ ಉತ್ತರ ಸಿಕ್ಕಿರಲಿಲ್ಲ. ಅಷ್ಟೇ ಅಲ್ದೆ ಸ್ವತಃ ಸಿಎಂ ಬೊಮ್ಮಾಯಿ ತಾಯಿ ಮೇಲೆ ಆಣೆ ಮಾಡಿ ಬೇಡಿಕೆ ಈಡೇರಿಸುವುದಾಗಿ ತಿಳಿಸಿದ್ರು ಅಂತ ಸ್ವಾಮೀಜಿನೂ ಹೇಳಿದ್ರು. ಕಳೆದ ಎರಡು ವರ್ಷದಿಂದ ನಡೆಯುತ್ತಿದ್ದ ಹೋರಾಟ ನಡೆಯುತ್ತಿದ್ದರೂ ತಲೆ ಕಡೆಸಿಕೊಳ್ಳದ ಪ್ರಧಾನಿ ದಿಢೀರ್ ಆಗಿ ಸ್ಪಂದನೆ ನೀಡಿದ್ದರ ಹಿಂದೆ ಹಲವು ರಾಜಕೀಯ ಲೆಕ್ಕಾಚಾರ ಇದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಇತ್ತೀಚೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿದ್ದ ಸತ್ಯಾಗ್ರಹದಲ್ಲೂ ಜಯಮೃತ್ಯುಂಜಯ ಸ್ವಾಮೀಜಿ ಪ್ರಧಾನಿ ಕಾರ್ಯಾಲಯ ಮಧ್ಯಸ್ಥಿಕೆ ವಹಿಸಿದ್ದು, ಸಮುದಾಯಕ್ಕೆ ನ್ಯಾಯ ಸಿಕ್ಕೇ ಸಿಗುತ್ತೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದು ನಿರೀಕ್ಷೆಯಂತೆಯೇ ಪಂಚಮಸಾಲಿಗಳ ಹೋರಾಟ ತಾರ್ಕಿಕ ಅಂತ್ಯ ಕಾಣುವ ಸಾಧ್ಯತೆ ಹೆಚ್ಚಾಗುತ್ತಿದೆ.