ಬೆಂಗಳೂರು, (www.thenewzmirror.com):
ಬಿಬಿಎಂಪಿ ಚುನಾವಣೆ ಹತ್ರ ಬರ್ತಿದೆ.., ನಿರೀಕ್ಷೆಯಂತೆ ಆಡಳಿತ ನಡೆಸ್ತಿರೋ ಬಿಜೆಪಿ ಭರ್ಜರಿ ಕೊಡುಗಡೆ ನೀಡೋಕೆ ಮುಂದಾಗಿದೆ. ಇನ್ನು ವಿಪಕ್ಷ ಶತಾಯ ಗತಾಯ ಅಧಿಕಾರದ ಗುದ್ದುಗೆ ಏರಬೇಕು ಅನ್ನೋ ನಿಟ್ಟಿನಲ್ಲಿ ಸರ್ಕಾರದ ಹುಳುಕುಗಳನ್ನ ರಾಜ್ಯದ ಜನತೆಗೆ ತೋರಿಸೋ ಪ್ರಯತ್ನ ಮಾಡ್ತಿದೆ.., ಇದಕ್ಕೆ ಆಸ್ಪದ ನೀಡದ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ ಭರ್ಜರಿ ಘೋಷಣೆಗಳನ್ನ ಮಾಡಿದ್ದು, ಟೀಕಿಸುವವರ ಬಾಯಿಗೆ ಬೀಗ ಹಾಕಿದೆ.
ಬೆಂಗಳೂರು ನಗರದ ಅತೀ ಹೆಚ್ಚಿನ ವಾಹನ ಸಂಚಾರ ದಟ್ಟಣೆಯಿರುವ ಹೆಬ್ಬಾಳ ಜಂಕ್ಷನ್ ನ ಸಮಸ್ಯೆಯನ್ನು ತಗ್ಗಿಸುವ ಯೋಜನೆಯೊಂದಿಗೆ, ನಗರದ ಮೂಲಭೂತಸೌಕರ್ಯಗಳನ್ನು ಹೆಚ್ಚಿಸಲು ಬರೋಬ್ಬರಿ ರೂ.೬,೦೦೦ ಕೋಟಿಗಳನ್ನು ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಜೂರು ಮಾಡಿದೆ.
ಮುಂದಿನ ಮೂರು ವರ್ಷಗಳಲ್ಲಿ ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಯೋಜನೆಯಡಿ ಬೆಂಗಳೂರು ನಗರಕ್ಕೆ ವಾರ್ಷಿಕ ರೂ.೨,೦೦೦ ಕೋಟಿ ಅನುದಾನದಂತೆ ಒಟ್ಟು ೬,೦೦೦ ಕೋಟಿ ಸಿಗಲಿದೆ ಎಂದು ಕಾನೂನು ಸಚಿವರು ಮಾಹಿತಿ ನೀಡಿದ್ದಾರೆ.
ವಿಮಾನ ನಿಲ್ದಾಣದ ದಾರಿಯಲ್ಲಿ ಬರುವಂತಹ ಅತ್ಯಂತ ಹೆಚ್ಚಿನ ವಾಹನ ಸಂಚಾರ ದಟ್ಟಣೆ ಇರೋ ಹೆಬ್ಬಾಳ ಜಂಕ್ಷನ್ ನಲ್ಲಿ ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡೋ ನಿಟ್ಟಿನಲ್ಲಿ ಈ ನಿರ್ಧಾರ ಅಂತ ಸರಕಾರ ಒತ್ತಿ ಒತ್ತಿ ಹೇಳ್ತಿದೆ.., ಬಿಎಂಆರ್‌ಸಿಎಲ್, ೨೦೫೧ರವರೆಗಿನ ಸಂಭವನೀಯ ವಾಹನ ಸಂಚಾರ ದಟ್ಟಣೆ ಗಮನದಲ್ಲಿಟ್ಟುಕೊಂಡು ಸಮಗ್ರ ಆಧ್ಯಯನ ನಡೆಸಿದೆ. ಇದರ ಮುಂದುವರೆದ ಭಾಗ ಇದು ಅಂತ ಕಾನೂನು ಸಚಿವ ಮಾಧುಸ್ವಾಮಿ ಮಾಹಿತಿ ನೀಡಿದ್ರು.