ಬೆಂಗಳೂರು, (www.thenewzmirror.com) :
ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ಬಿಬಿಎಂಪಿ ಬೆಂಗಳೂರು ಜನರ ಕಿವಿಗೆ ಹೂ ಇಡುವ ಕೆಲಸವನ್ನ ಮಾಡುತ್ತಿದೆಯಾ ಎನ್ನುವ ಅನುಮಾನ ಮೂಡುತ್ತಿದೆ. ಇದಕ್ಕೆ ಕಾರಣ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕೊಟ್ಟಿರುವ ಒಂದು ಹೇಳಿಕೆ.
ಜೂನ್ 6 ನೇ ತಾರೀಖಿನ ಒಳಗೆ ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಕ್ತ ಮಾಡುತ್ತೀವಿ ಎಂದು ಹೇಳಿಕೆ ಕೊಟ್ಟಿರುವುದು ಹಾಸ್ಯಕ್ಕೆ ಎಡೆಮಾಡಿಕೊಡುತ್ತಿದೆ. ಯಾಕಂದರೆ ಈಗಾಗಲೇ ಅದೆಷ್ಟೋ ಎಚ್ಚರಿಕೆ.., ಅದೆಷ್ಟೋ ಡೆಡ್ ಲೈನ್ ಗಳನ್ನ ಕೊಟ್ಟಿದ್ದರೂ ಬಿಬಿಎಂಪಿಯ ಆಡಳಿತ ವ್ಯವಸ್ಥೆ ಸುಧಾರಣೆ ಮಾತ್ರ ಆಗಿಲ್ಲ.. ಇಂಥದರಲ್ಲಿ ರಸ್ತೆಗಳು ಇನ್ನು ನಾಲ್ಕೈದು ದಿನಗಳಲ್ಲಿ ಗುಂಡಿ ಮುಕ್ತವಾಗುತ್ತಾವಾ ಎನ್ನುವ ಅನುಮಾನ ಮೂಡುತ್ತಿದೆ.
ಎಲ್ಲರಿಗೂ ಗೊತ್ತಿರುವಂತೆ ಬೆಂಗಳೂರಿಗೆ ಕಳಂಕ ತಂದೊಡ್ಡಿರೋದ್ರಲ್ಲಿ ರಸ್ತೆ ಗುಂಡಿಗಳದ್ದೇ ಸಿಂಹಪಾಲು.., ಗುಂಡಿಗಳನ್ನ ಸಂಪೂರ್ಣ ಮುಚ್ತೀವಿ ಅಂತ ಬಿಬಿಎಂಪಿ ಅಧಿಕಾರಿಗಳು ಬೆಳಿಗ್ಗೆಯಾದ್ರೆ ಸುಳ್ಳು ಹೇಳ್ತಾ ಕಾಲ ಕಳೆಯುತ್ತಿದ್ದಾರೆ.. ಪಾಲಿಕೆ ಅಧಿಕಾರಿಗಳ ನಡೆಗೆ ರೋಸಿಹೋದ ಕೋರ್ಟ್ ಪದೆಪದೇ ಛಾಟಿ ಬೀಸ್ತಾನೇ ಇದೆ. ಇದ್ರ ಬೆನ್ನಲ್ಲೇ ಇದೀಗ ಮತ್ತೆ ಎಚ್ಚೆತ್ತುಕೊಂಡ ಬಿಬಿಎಂಪಿ ಇದೀಗ ಗುಂಡಿ ಮುಚ್ಚೋದಕ್ಕೆ ತನಗೆ ತಾನೇ ಡೆಡ್ ಲೈನ್ ಅನ್ನ ಹಾಕಿಕೊಂಡಿದೆ.
ಹೈ ಕೋರ್ಟ್ ನಲ್ಲಿ ರಸ್ತೆ ಗುಂಡಿ ವಿಚಾರವಾಗಿ ನಡೆದ ವಿಚಾರಣೆಯಲ್ಲಿ ಬಿಬಿಎಂಪಿಯನ್ನ ತರಾಟೆಗೆ ತೆಗೆದುಕೊಂಡಿದೆ.., ಇದ್ರಿಂದ ಎಚ್ಚೆತ್ತ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಗೆ ಡೆಡ್ ಲೈನ್ ಒಂದನ್ನ ಕೊಟ್ಟಿದ್ದಾರೆ. ಸದ್ಯ ನಗರದಲ್ಲಿ ಹತ್ರತ್ರ 11 ಸಾವಿರ ರಸ್ತೆ ಗುಂಡಿಗಳಿದ್ದು, ಇದ್ರಲ್ಲಿ ಶೇಕಡಾ 50 ರಷ್ಟು ಮುಚ್ಚಲಾಗಿದೆ. ಉಳಿದ ಗುಂಡಿಗಳನ್ನ ಇನ್ನೈದು ಅಂದ್ರೆ ಜೂನ್ 6 ರೊಳಗೆ ಮುಚ್ಚಬೇಕು ಅಂತ ಸೂಚನೆ ಕೊಟ್ಟಿದ್ದಾರೆ.
ಹಾಗಂಥ ಬಿಬಿಎಂಪಿ ಈ ಹಿಂದೆನೂ ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ತನ್ನಷ್ಟಕ್ಕೆ ತಾನೇ ಡೆಡ್ ಲೈನ್ ಅನ್ನ ಹಾಕಿಕೊಂಡಿತ್ತು. ಆದರೆ ಅದ್ಯಾವುದನ್ನೂ ಪೂರ್ಣಗೊಳಿಸಿರಲಿಲ್ಲ. ಬದಲಿಗೆ ಸರ್ಕಾರ, ಸಾರ್ವಜನಿಕರು, ಅಷ್ಟೇ ಏಕೆ ಹೈ ಕೋರ್ಟ್ ನಿಂದಲೂ ಛೀಮಾರಿಹಾಕಿಸಿಕೊಂಡಿತ್ತು.
ಈಗಾಗಲೇ ನಗರದಕ್ಕೆ ಮುಂಗಾರು ಎಂಟ್ರಿಕೊಟ್ಟಾಗಿದೆ. ದಿನಬಿಟ್ಟು ದಿನ ಮಳೆನೂ ಬರ್ತಿದೆ.., ಹೀಗಿರುವಾಗ ಇನ್ನೈದು ದಿನಗಳಲ್ಲಿ ನಗರದ ರಸ್ತೆಗಳು ಗುಂಡಿ ಮುಕ್ತವಾಗ್ತಾವಾ ಅನ್ನೋದು ಕಾದುನೋಡ್ಬೇಕು. ಹಾಗೆನೇ ಇದೇ ತಿಂಗಳ 6 ರಂದು ನಡೆಯಲಿರೋ ಕೋರ್ಟ್ ವಿಚಾರಣೆಯಲ್ಲಿ ಯಾವ ರೀತಿ ಉತ್ತರ ಕೊಡುತ್ತೆ ಅನ್ನೋದೇ ಯಕ್ಷ ಪ್ರಶ್ನೆ.