ಮೈಸೂರು:
ಉದ್ದಿಮೆಗಳ ಬೇಡಿಕೆಯನ್ನು ಪೂರೈಸುವುದಕ್ಕಾಗಿ ರಾಜ್ಯದಲ್ಲಿ 30,000 ಅಭ್ಯರ್ಥಿಗಳು ಅಪ್ರೆಂಟಿಸ್ ಷಿಪ್ ನಲ್ಲಿ ತೊಡಗುವಂತೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಕೌಶಲಾಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.
ಭಾರತದ ತರಬೇತಿ ಮಹಾನಿರ್ದೇಶನಾಲಯದ (ಡಿಒಟಿ) ನೇತೃತ್ವದಲ್ಲಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ವತಿಯಿಂದ ಎಸ್ಸೆಸ್ಸೆಲ್ಸಿ/ಐಟಿಐ ಪಾಸಾದ ಆಕಾಂಕ್ಷಿಗಳಿಗಾಗಿ ಸೋಮವಾರ ಏರ್ಪಡಿಸಿದ್ದ ‘ಅಪ್ರೆಂಟಿಷ್ ಷಿಪ್ ಮೇಳ (ಶಿಶಿಕ್ಷು ಮೇಳ)ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
2020-21ನೇ ಸಾಲಿನಲ್ಲಿ ಒಟ್ಟು 249 ಉದ್ದಿಮೆಗಳಲ್ಲಿ (ಸರ್ಕಾರಿ ಸ್ವಾಮ್ಯದ 56+ ಖಾಸಗಿ ಉದ್ದಿಮೆಗಳು 193) 7,091 ಅಭ್ಯರ್ಥಿಗಳು ಅಪ್ರೆಂಟಿಷ್ ಷಿಪ್ ತರಬೇತಿ ಪಡೆಯುತ್ತಿದ್ದಾರೆ. 2021-22ನೇ ಸಾಲಿಗೆ ಸೆ.30ರ ಅಂಕಿ-ಅಂಶದ ಪ್ರಕಾರ 6,856 ಅಭ್ಯರ್ಥಿಗಳು ಮತ್ತು 383 ಉದ್ದಿಮೆಗಳು ನೋಂದಣಿ ಮಾಡಿಸಿಕೊಂಡಿವೆ. ಹೀಗಾಗಿ, ಅಪ್ರೆಂಟಿಸ್ ಪಿಷ್ ಗಳ ಸಂಖ್ಯೆ ಇನ್ನೂ ಸಾಕಷ್ಟು ಹೆಚ್ಚಬೇಕೆಂಬುದು ಗೊತ್ತಾಗುತ್ತದೆ ಎಂದು ವಿವರಿಸಿದರು.
ದಕ್ಷಿಣ ಕೊರಿಯಾದಲ್ಲಿ ಕೌಶಲ್ಯ ಹೊಂದಿದವರ ಸಂಖ್ಯೆ ಶೇ 96ರಷ್ಟಿದ್ದರೆ, ಜರ್ಮನಿ, ಜಪಾನ್ ನಲ್ಲಿ ಶೇ 80ಕ್ಕಿಂತ ಹೆಚ್ಚು, ಅಮೆರಿಕಾದಲ್ಲಿ ಶೇ 56ರಷ್ಟು ಹಾಗೂ ಯೂರೋಪ್ ನಲ್ಲಿ ಶೇ 60ರಷ್ಟಿದೆ. ಆದರೆ ಭಾರತದಲ್ಲಿ ಇದು ಶೇ 5ರಷ್ಟು ಮಾತ್ರ ಇದೆ. ಭಾರತವು ಜಗತ್ತಿನ ಉತ್ಪಾದನಾ ನೆಲೆ ಆಗಬೇಕೆಂಬ ಗುರಿ ಸಾಧಿಸಬೇಕಾದರೆ ಕೌಶಲ ಹೊಂದಿದವರ ಸಂಖ್ಯೆ ಸಾಕಷ್ಟು ಹೆಚ್ಚಾಗಬೇಕು ಎಂದು ಅಶ್ವತ್ಥ ನಾರಾಯಣ ಹೇಳಿದರು.
ಅಪ್ರೆಂಟಿಷ್ ಷಿಪ್ ಮೇಳವು ಕಿರಿಯ ವಯಸ್ಸಿನಲ್ಲಿ ಹೆಚ್ಚು ಕೌಶಲ್ಯ ಪಡೆಯಲು ಸಹಕಾರಿ. ಇದು ಅಭ್ಯರ್ಥಿಗಳಿಗೆ ಆಧುನಿಕ ಯಂತ್ರೋಪಕರಣಗಳ ಬಗ್ಗೆ ನೇರವಾಗಿ ಪರಿಚಯ ಮಾಡಿಕೊಡುತ್ತದೆ. ಅಪ್ರೆಂಟಿಸ್ ಷಿಪ್ ನಿಂದಾಗಿ ಕೇಂದ್ರ ಹಾಗೂ ಸರ್ಕಾರಿ ಸ್ವಾಮ್ಯದ ಉದ್ಯಮಗಳಲ್ಲಿ ಮತ್ತು ಖಾಸಗಿ ವಲಯಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚುತ್ತವೆ ಎಂದರು.
ಇದರಿಂದ ಉದ್ದಿಮೆಗಳಿಗೂ ಆಧುನಿಕ ತಂತ್ರಜ್ಞಾನದ ಬಗ್ಗೆ ತಿಳಿವಳಿಕೆಯುಳ್ಳ ಮಾನವ ಸಂಪನ್ಮೂಲವನ್ನು ಪಡೆಯಲು ಸಾಧ್ಯವಾಗುತ್ತದೆ. ಜೊತೆಗೆ ಉತ್ಪಾದಕತೆ ಹೆಚ್ಚಿಸಲು ಇದು ಸಹಕಾರಿ. ರಾಷ್ಟ್ರೀಯ ಅಪ್ರೆಂಟಿಷ್ ಷಿಪ್ ಉತ್ತೇಜನಾ ಕಾರ್ಯಕ್ರಮ (ಎನ್.ಎ.ಪಿ.ಎಸ್.) ಮತ್ತು ಕರ್ನಾಟಕ ಅಪ್ರೆಂಟಿಷ್ ಷಿಪ್ ತರಬೇತಿ ಕಾರ್ಯಕ್ರಮ (ಕೆ.ಎ.ಟಿ.ಎಸ್.) ತಲಾ 1,500 ರೂಪಾಯಿಯಂತೆ ಒಟ್ಟು 3,000 ರೂಪಾಯಿ ಸ್ಟೈಪೆಂಡ್ ಕೊಡಲಾಗುತ್ತದೆ. ಇದರ ಪ್ರಯೋಜವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು.