ಬೆಂಗಳೂರು, (www.thenewzmirror.com):
ತೆರಿಗೆ ಕಟ್ಟಿಸಿಕೊಳ್ಳದೇ ವಾಹನಗಳ ನೋಂದಣಿ ಮಾಡಿ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟುಮಾಡುತ್ತಿದ್ದ ಜಾಲವನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಾರಿಗೆ ಇಲಾಖೆಗೆ ಸ್ಮಾರ್ಟ್ ಕಾರ್ಡ್ ಪೂರೈಕೆ ಮಾಡುತ್ತಿದ್ದ ರೋಸ್‌ಮೆರ್ಟಾ ಟೆಕ್ನಾಲಜಿಸ್ ಕಂಪನಿಯ ತಾಂತ್ರಿಕ ವಿಭಾಗದ ವ್ಯವಸ್ಥಾಪಕ ಗಿರೀಶ್ ರನ್ನ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಐಶರಾಮಿ ಕಾರುಗಳಾದ ಔಡಿ, ಬೆನ್ಜ್, ಬಿಎಂಡಬ್ಲ್ಯು, ಜಾಗ್ವಾರ್, ಲ್ಯಾಂಬೋರ್ಗಿನಿ ಸೇರಿದಂತೆ ಎಲ್ಲಾ ಮಾದರಿಯ ಐಶರಾಮಿ ಕಾರುಗಳ ನೋಂದಣಿ ಸಂದರ್ಭದಲ್ಲಿ ಆಗ್ತಿದ್ದ ಗೋಲ್ಮಾಲ್ ಇದೆ ಅನ್ನೋದು ತನಿಖೆಯಿಂದ ಬಟಾಬಯಲಾಗಿದೆ.
ಗಿರೀಶ್ ಹಾಗೂ ಇತರರು, ತೆರಿಗೆಗಿಂತ ಕಡಿಮೆ ಹಣ ಪಡೆದು ಅಕ್ರಮವಾಗಿ ಕಾರುಗಳಿಗೆ ವಾಹನ ನೋಂದಣಿ ಮಾಡಿಕೊಡುತ್ತಿದ್ದರು ಎಂದು ತಿಳಿದು ಬಂದಿದೆ.
‘ಸಾರಿಗೆ ಇಲಾಖೆ ನಿಗದಿಪಡಿಸಿರುವ ತೆರಿಗೆ ಪಾವತಿಸದಿದ್ದರೂ ಆರೋಪಿ ಗಿರೀಶ್, ತೆರಿಗೆ ತುಂಬಿರುವುದಾಗಿ ಹೇಳಿ ‘ವಾಹನ್’ ತಂತ್ರಾಂಶದಲ್ಲಿ ಮಾಹಿತಿ ನಮೂದು ಮಾಡುತ್ತಿದ್ದ. ಇದಕ್ಕಾಗಿ ಕಾರುಗಳ ಮಾಲೀಕರು, ಪ್ರತ್ಯೇಕವಾಗಿ ಹಣ ಸಂದಾಯ ಮಾಡುತ್ತಿದ್ದರು. ಆ ಹಣವನ್ನು ಆರೋಪಿಗಳು ತಮ್ಮಲ್ಲೇ ಹಂಚಿಕೊಳ್ಳುತ್ತಿದ್ದರಂತೆ.