ಬೆಂಗಳೂರು,(www.thenewzmirror.com):
ಸದಾ ಒಂದಿಲ್ಲೊಂದು ಸಮಸ್ಯೆಗಳ ಮೂಲಕ ಕಷ್ಟಗಳನ್ನ ಎದುರಿಸುತ್ತಿದ್ದ ಸಾರಿಗೆ ನೌಕರರ ಸಂಕಷ್ಟಗಳಿಗೆ ಶೀಘ್ರವೇ ಮುಕ್ತಿ ಬೀಳಲಿದೆ. ಈ ಕುರಿತ ಮಹತ್ವವಾದ ನಿರ್ಧಾರವನ್ನ ರಾಜ್ಯ ಕೈಗೊಂಡಿದ್ದು, ಅತೀ ಶೀಘ್ರದಲ್ಲೇ ಈ ಕುರಿತ ಆದೇಶ ಹೊರ ಬೀಳುವ ಸಾಧ್ಯತೆಯಿದೆ.
ರಾಜ್ಯದ ನಾಲ್ಕು ನಿಗಮಗಳು ಸದ್ಯ ನಷ್ಟದಲ್ಲಿವೆ.., ಹೀಗಾಗಿ ನೌಕರರಿಗೆ ಸೂಕ್ತ ಸಮಯದಲ್ಲಿ ವೇತನ ನೀಡೋಕೆ ಆಗ್ತಾ ಇಲ್ಲ.., ಜತೆಗೆ ನೌಕರರ ಪಿಎಫ್, ನೀಡೋಕೂ ಆಗ್ತಿಲ್ಲ.., ಇದೆಲ್ಲದ್ರ ನಡುವೆ ಸಾಲದ ಹೊರೆಯೂ ಹೆಚ್ಚಾಗ್ತಾ ಹೋಗ್ತಿದೆ. ಇದಕ್ಕೆಲ್ಲಾ ಬ್ರೇಕ್ ಹಾಕೋ ನಿಟ್ಟಿನಲ್ಲಿ ಮುಂದಾಗಿರೋ ರಾಜ್ಯ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ವಸ್ತು ಸ್ಥಿತಿ ತಿಳಿಯಲು ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸ ಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದೆ.
ಇನ್ನು ಸರ್ಕಾರ ರಚನೆ ಮಾಡಿರೋ ಸಮಿತಿ ಸಮಗ್ರ ಅಧ್ಯಯನ ನಡೆಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆಯೂ ಸೂಚನೆ ನೀಡಲಾಗಿದೆ.
KSRTC, BMTC, ವಾಯುವ್ಯ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ನಿಗಮಗಳಲ್ಲಿ ಆರ್ಥಿಕ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೋಢೀಕರಣಗಳ ಕುರಿತಾಗಿ ಮೂರು ತಿಂಗಳೊಳಗೆ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ಸೂಚಿಸಲಾಗಿದೆ.
ನಷ್ಟದಲ್ಲಿ ಸಾಗುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ಸಾರಿಗೆ ನಿಗಮ ಮತ್ತು ಈಶಾನ್ಯ ಕರ್ನಾಟಕ ಸಾರಿಗೆ ನಿಗಮಗಳ ಪುನರ್ ನಿರ್ಮಾಣಕ್ಕೆ ಹಲವು ಸುಧಾರಣೆಗಳನ್ನು ತರಲು ಸಮಿತಿ ರಚಿಸಲಾಗಿದೆ. ಇನ್ನು ಸಮಿತಿಗೆ ಅಗತ್ಯವಿರೋ ಎಲ್ಲಾ ಸೌಲಭ್ಯಗಳನ್ನ ನೀಡಬೇಕೆಂದು ಎಲ್ಲಾ ನಿಗಮಗಳ ಎಂಡಿಗಳಿಗೆ ಸರ್ಕಾರ ಆದೇಶ ನೀಡಿದೆ. ಜತೆಗೆ ಸಮಿತಿ ಕೇಳುವ ಎಲ್ಲ ಮಾಹಿತಿಯನ್ನು ನೀಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.