ಬೆಂಗಳೂರು(www.thenewzmirror.com): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಮಹಿಳಾ ಉಚಿತ ಪ್ರಯಾಣದ ‘ಶಕ್ತಿ ಯೋಜನೆ’ಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ನಿರ್ವಾಹಕನೊಬ್ಬನ ಕಳ್ಳಾಟ ಸಾರ್ವಜನಿಕವಾಗಿ ಬಯಲಾಗಿದೆ. ನಾಗರಬಾವಿಯಿಂದ ಕತ್ರಿಗುಪ್ಪೆ ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್‌ನಲ್ಲಿ ಈ ಅಕ್ರಮ ನಡೆದಿದ್ದು, ಸಾರ್ವಜನಿಕರು ಇದರ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ.
ಬಸ್‌ನಲ್ಲಿ ಮಹಿಳಾ ಪ್ರಯಾಣಿಕರು ಇಲ್ಲದಿದ್ದರೂ ಸಹ ಕುಳಿತ ಜಾಗದಲ್ಲೇ ಎಲೆಕ್ಟ್ರಾನಿಕ್ ಟಿಕೆಟಿಂಗ್ ಮಿಷನ್ (ETM) ಮೂಲಕ ಸರಣಿ ಶಕ್ತಿ ಟಿಕೆಟ್‌ಗಳನ್ನು ಪ್ರಿಂಟ್ ಮಾಡಿ, ಅವುಗಳನ್ನು ಹೊರಗೆ ಹರಿದು ಬಿಸಾಕುತ್ತಿದ್ದ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಿರ್ವಾಹಕನು ನಿಯಮಬಾಹಿರವಾಗಿ ಸತತ ಐದು ಉಚಿತ ಶಕ್ತಿ ಟಿಕೆಟ್‌ಗಳನ್ನು ಜನರೇ ಇಲ್ಲದೆ ಸೃಷ್ಟಿಸಿರುವುದು ಸಾರ್ವಜನಿಕರ ಗಮನಕ್ಕೆ ಬಂದಿದೆ.
ಕಮಿಷನ್ ದುರಾಸೆಗೆ ಸರ್ಕಾರದ ಹಣ ಪೋಲು?
ಸಾರಿಗೆ ಸಂಸ್ಥೆಗಳಲ್ಲಿ ಶಕ್ತಿ ಯೋಜನೆಯಡಿ ಗರಿಷ್ಠ ಸಂಖ್ಯೆಯ ಟಿಕೆಟ್ ವಿತರಿಸುವ ನಿರ್ವಾಹಕರಿಗೆ ಸಿಗುವ ಆಂತರಿಕ ಪ್ರೋತ್ಸಾಹ ಧನ ಅಥವಾ ಕಮಿಷನ್ ದುರಾಸೆಗೆ ಬಿದ್ದು ಈ ಕೃತ್ಯ ಎಸಗಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ನಕಲಿ ಟಿಕೆಟ್‌ಗಳನ್ನು ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡುತ್ತಿರುವ ಇಂತಹ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಸಾರಿಗೆ ಸಚಿವರಿಗೆ ಸಾರ್ವಜನಿಕರ ನೇರ ಸವಾಲು
ಹಿಂದಿನ ಸಾರಿಗೆ ಸಚಿವರ ಅವಧಿಯಲ್ಲೂ ಸಾರಿಗೆ ಸಂಸ್ಥೆಗಳ ಒಳಗೆ ಇಂತಹ ಅಕ್ರಮಗಳ ದೂರುಗಳು ಕೇಳಿಬಂದಿದ್ದವು. ಇದೀಗ ನೂತನ ಸಾರಿಗೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಭೈರತಿ ಸುರೇಶ್ ಅವರಿಗೆ ಇಲಾಖೆಯ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ದೊಡ್ಡ ಸವಾಲಾಗಿದೆ. ಸಚಿವರ ಸ್ಥಾನಕ್ಕೆ ಕಳಂಕ ತರುವಂತೆ ಸಾರ್ವಜನಿಕ ಹಣ ಲೂಟಿ ಮಾಡುತ್ತಿರುವ ಇಂತಹ ಭ್ರಷ್ಟ ನಿರ್ವಾಹಕರನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಆಗ್ರಹ ವ್ಯಕ್ತವಾಗಿದೆ.







