ನವದೆಹಲಿ, (www.thenewzmirror.com) ;
ದೇಶದಲ್ಲಿ ಜಾರಿಯಾಗಿರುವ ಮೂರು ಹೊಸ ಕ್ರಿಮಿನಲ್ ಕಾನೂನುಗಳು ಬ್ರಿಟಿಷ್ ಕಾನೂನುಗಳ ಯುಗವನ್ನು ಕೊನೆಗೊಳಿಸಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿಪ್ರಾಯ ಪಟ್ಟಿದ್ದಾರೆ.
ಹೊಸದಾಗಿ ಜಾರಿಯಾಗಿರುವ ಕಾನೂನುಗಳು ಅಪರಾಧ ಮತ್ತು ನ್ಯಾಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ವದೇಶಿ ಆಗಿ ಪರಿವರ್ತಿಸಿವೆ. ಈ ಕಾನೂನುಗಳು ಸಂವಿಧಾನ ಆಶಯಕ್ಕೆ ಅನುಗುಣವಾಗಿ ಕೆಲಸ ಮಾಡುತ್ತವೆ ಅಷ್ಟೇ ಅಲ್ದೆ ಮೂರು ಹೊಸ ಕಾನೂನುಗಳ ಜಾರಿ ಕುರಿತು ಸ್ಪಷ್ಟನೆ ನೀಡಿದ ಶಾ, ಸ್ವಾತಂತ್ರ್ಯ ಬಂದ ನಂತರ 77 ವರ್ಷಗಳ ಬಳಿಕ ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಸಂಪೂರ್ಣವಾಗಿ ಸ್ವದೇಶಿ ಆಗಿದೆ. ಇದನ್ನು ಸಾಧ್ಯವಾಗಿಸಲು ಸಹಕಾರ ನೀಡಿದ ದೇಶದ ಜನರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಅನೇಕ ಸಮುದಾಯಗಳಿಗೆ ಹೊಸ ಕಾನೂನು ಪ್ರಯೋಜನ ಒದಗಿಸುತ್ತದೆ. ದಂಡ ಕಟ್ಟಿ ತಪ್ಪಿಸಿಕೊಳ್ಳುತ್ತಿದ್ದವರಿಗೆ ಶಿಕ್ಷೆಯಾಗಲಿದೆ, ತ್ವರಿತ ವಿಚಾರಣೆಯೊಂದಿಗೆ ಜನರಿಗೆ ತ್ವರಿತವಾಗಿ ನ್ಯಾಯ ಸಿಗಲಿದೆ. ಮೊದಲು ಪೊಲೀಸರ ಹಕ್ಕುಗಳನ್ನು ರಕ್ಷಿಸಲಾಗುತ್ತಿತ್ತು. ಈಗ ಸಂತ್ರಸ್ತರು ಹಾಗೂ ದೂರುದಾರರ ಹಕ್ಕುಗಳನ್ನು ಸಹ ರಕ್ಷಿಸಲಾಗುತ್ತದೆ. ಹೊಸ ಕಾನೂನಿನಲ್ಲಿ ಸಂವಿಧಾನ ಆಶಯಕ್ಕೆ ಅನುಗುಣವಾಗಿ ಹಲವು ವಿಭಾಗಗಳು ಮತ್ತು ಅಧ್ಯಾಯಗಳನ್ನು ವರ್ಗೀಕರಿಸಿದ್ದೇವೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಹೊಸ ಕಾನೂನುಗಳು ಸಂತ್ರಸ್ತರನ್ನು ಹೆಚ್ಚಾಗಿ ಕೇಂದ್ರೀಕರಿಸುತ್ತದೆ. ಹಿಂದೆಲ್ಲಾ ಪೊಲೀಸರು ಯಾರನ್ನಾದರೂ ಬಂಧಿಸಿದರೆ ಕುಟುಂಬಸ್ಥರು ಕೋರ್ಟ್‌ಗೆ ಹೋಗಬೇಕಿತ್ತು. ಆದ್ರೆ ಈಗ ಪ್ರತಿ ಠಾಣೆಯಲ್ಲೂ ರಿಜಿಸ್ಟರ್ ಮತ್ತು ಇ-ರಿಜಿಸ್ಟರ್ ನಿರ್ವಹಿಸುವುದನ್ನು ಕಡ್ಡಾಯಗೊಳಿಸಿದ್ದೇವೆ. ಹಾಗಾಗಿ ಪೊಲೀಸರು ವಶದಲ್ಲಿರುವ ಆರೋಪಿಗಳನ್ನು ಮತ್ತು ಅಪರಾಧಿಗಳನ್ನು ಪಟ್ಟಿ ಮಾಡಬೇಕಾಗುತ್ತದೆ. ಜೊತೆಗೆ ಕುಟುಂಬಸ್ಥರಿಗೆ ಮಾಹಿತಿ ನೀಡಬೇಕಾಗುತ್ತದೆ. ಇದರಿಂದ ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.