ಬೆಂಗಳೂರು, (www.thenewzmirror.com) ;
ರಾಜ್ಯ ಚುನಾವಣಾ ದಿನಾಂಕ ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳು ಮತ ಬೇಟೆಗೆ ಕಸರತ್ತನ್ನ ನಡೆಸುತ್ತಿವೆ. ಇದರ ಬೆನ್ನಲ್ಲೆ ಚುನಾವಣಾ ಚಾಣಾಕ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಹರಿಹರದ ಪಂಚಮಸಾಲಿ ಪೀಠಕ್ಕೆ ಭೇಟಿ ನೀಡಿ ಕೆಲ ಕಾಲ ಕಳೆದರು. ರಾಜಕೀಯ ವಲಯದಲ್ಲಿ ಮಠ ವಿಸಿಟ್ ನಾನಾ ಲೆಕ್ಕಾಚಾರಕ್ಕೆ ನಾಂದಿ ಹಾಡಿದೆ.
ಅಮಿತ್ ಶಾ ಭೇಟಿ ಬಳಿಕ ತಮ್ಮ ಅನುಭವ ಹಂಚಿಕೊಂಡ ಶ್ವಾಸ ಗುರೂಜಿ, ಹರಿಹರ ಪೀಠಾಧಿಪತಿ ಶ್ರೀ ವಚನಾನಂದ ಸ್ವಾಮೀಜಿ, ಅಖಂಡ ಭಾರತದ ನಿರ್ಮಾಣದಲ್ಲಿ ನಿರತವಾಗಿರುವ ಅಮಿತ್ ಶಾ., ಕೇವಲ ಚುನಾವಣಾ ಚಾಣಕ್ಯ ಮಾತ್ರವಲ್ಲದೇ, ಭಾರತದ ಮಾಣಿಕ್ಯವೆಂದು ಬಣ್ಣಿಸಿದರು.
ಶಾ ಕೇವಲ ಒಬ್ಬ ರಾಜಕಾರಣಿಯಿಲ್ಲದೆ, ಒಬ್ಬ ಅದ್ಭುತ ಜಿಜ್ಞಾಸು ಮತ್ತು ಆಳವಾದ ಆಧ್ಯಾತ್ಮಿಕ ತಳಹದಿ ಹೊಂದಿರುವ ವ್ಯಕ್ತಿ ಎಂದು ಹಾಡಿ ಹೊಗಳಿದರು.
ಆಧ್ಯಾತ್ಮಿಕ ಜಿಜ್ಞಾಸು ಅಮಿತ್ ಶಾ
ಹರಿಹರ ಪೀಠಕ್ಕೆ ಭೇಟಿ ನೀಡಿ, ಔಪಚಾರಿಕ ಗೌರವಗಳನ್ನು ಸ್ವೀಕರಿಸಿ, ಸ್ವಾಮೀಜಿಗಳಿಗೆ ವಂದನೆ ಸಲ್ಲಿಸಿದ ಅಮಿತ್ ಶಾ ಒಂದು ಕ್ಷಣ ಮೌನವಾಗಿ, ಅಲ್ಲಿದ್ದ ಶ್ರೀಚಕ್ರದ ಕಲಾಕೃತಿಯನ್ನು ಗಮನವಿಟ್ಟು ನೋಡಿ, ಅದು ಅದ್ಭುತವಾಗಿದೆ ಎಂದು ಬಣ್ಣಿಸುತ್ತಾ ಲಿಂಗಾಯತ ಧರ್ಮದಲ್ಲಿ ಕುಂಡಲನಿ ಯೋಗದ ಕುರಿತಾದ ಮಾಹಿತಿಯ ಬಗ್ಗೆ ವಿಚಾರಿಸಿದರು. ಹಾಗೆನೇ ಸ್ವಾಮೀಜಿ ಹೃಷಿಕೇಶದಲ್ಲಿ ವಿದ್ಯಾಭ್ಯಾಸ ಮಾಡಿದ್ದನ್ನು ತಿಳಿದು, ಅಲ್ಲಿನ ಸ್ವಾಮಿ ರಾಮರ ಬಗ್ಗೆ ಕೂಡ ಮಾತನಾಡಿದರು.
ಹಾಗೆ ತಾವು ಮೂರು ದಿನಗಳ ಕಾಲ ಜೋಷಿ ಮಠದಲ್ಲಿ ತಂಗಿದ್ದು, ಕೇದಾರನಾಥಕ್ಕೆ ಹೋಗಿ ಶಂಕರರ ಪ್ರತಿಮೆ ಸ್ಥಾಪನೆ ಮಾಡಿದ ಬಗ್ಗೆ ಹೇಳುತ್ತಾ ಶಂಕರಾಚಾರ್ಯರ ಸಾಧನೆಗಳನ್ನು ಕೊಂಡಾಡಿದರು. ಸುಮಾರು 800 ವರ್ಷಗಳ ಹಿಂದೆ ಶಂಕರರು ಅಲ್ಲಿನ ಹರಿಹರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದನ್ನು ತಿಳಿದುಕೊಂಡು, ತಾವು ಕೂಡ ಹರಿಹರೇಶ್ವರನ ದರ್ಶನ ಪಡೆದರು.
ಅಖಂಡ ಭಾರತ ನಿರ್ಮಾಣ ಏಕಮೇವ ಧ್ಯೇಯ
ವಚನಾನಂದ ಸ್ವಾಮೀಜಿ ಭಾರತದ ಭೂಪಟದ ಮುಂದೆ ನಿಂತ ಭಾವಚಿತ್ರವನ್ನು ನೋಡಿ, ಶಾ ಭಾವುಕರಾಗಿ ಅಶ್ರುಪೂರ್ಣರಾದರು. ಭಾರತ ವಿಶ್ವಗುರುವಾಗಬೇಕು, ಅಖಂಡ ಭಾರತ ನಿರ್ಮಾಣಕ್ಕೆ ನಿಮ್ಮಂತಹ ಸಂತ-ಮಹಂತರ ಆಶೀರ್ವಾದಗಳು ಬೇಕು’ ಎಂದು ಭಾವೋದ್ರೇಕಕ್ಕೆ ಶಾ ಒಳಗಾದರು.
ಸ್ವಾಮೀಜಿಯವರಿಂದ ಅಖಂಡ ಭಾರತದ ರಕ್ಷಣೆಗಾಗಿ ಹೋರಾಡಿದ್ದ ಕರ್ನಾಟಕದ ವೀರ ವನಿತೆಯರಾದ ಕಿತ್ತೂರು ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ರಾಣಿ ಅಬ್ಬಕ್ಕ ಮುಂತಾದವರ ಬಗ್ಗೆ ಕುತೂಹಲದಿಂದ ತಿಳಿದುಕೊಂಡರು. ಹರಿಹರದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರೂ, ಸ್ವಾಮೀಜಿಯವರ ಹತ್ತಿರ ಯಾವುದೇ ರಾಜಕಾರಣ ಬಗ್ಗೆ ಮಾತನಾಡದೇ, ಯೋಗ, ಆಧ್ಯಾತ್ಮ ಸಾಧನೆ, ಸಿದ್ದಿಗಳ ಕುರಿತಷ್ಟೇ ಮಾತನಾಡಿ, ಧರ್ಮದಲ್ಲಿ ರಾಜಕಾರಣ ಬೆರಸದೇ ಮಾದರಿ ಪ್ರವರ್ತನೆಯನ್ನು ಪ್ರದರ್ಶಿಸಿದರು. ಹಾಗೇ ಕಾಶ್ಮೀರದ ವಿಷಯ ಮಾತನಾಡುವಾಗಲೂ ಯಾವುದೇ ಧಾರ್ಮಿಕತೆ ಮತ್ತು ರಾಜಕಾರಣ ಲೇಪವಿಲ್ಲದೆ, ಅದು ನಮ್ಮದು ಎಂಬ ದೇಶಭಕ್ತಿಯ ಭಾವದಿಂದ ಮಾತನಾಡುತ್ತಾ, ಅಲ್ಲಿ ಕಲಂ 370 ತೆಗೆದುಹಾಕವುದು ಅಲ್ಲಿನ ಶಾಂತಿಗೆ ಅನಿವಾರ್ಯವಾಗಿತ್ತು ಎಂದು ಪ್ರತಿಕ್ರಿಯಿಸಿದರು.
ಅಮಿತ್ ಶಾ ಒಬ್ಬ ರಾಜಕಾರಣಿಯಾಗಿರದೇ, ಒಂದು ಸಮ್ಮೋಹಕ ಶಕ್ತಿಯನ್ನು ಹೊಂದಿರುವ, ದೈವಿಕ ಚೈತನ್ಯವಿರುವ ವ್ಯಕ್ತಿಯೆಂದು ಹೊಗಳಿದರು. ಮಗಧರ ಕಾಲದಲ್ಲಿ ದುಷ್ಟ ನಂದರನ್ನು ಸಂಹರಿಸಿ, ಇಡೀ ಸಾಮ್ರಾಜ್ಯವನ್ನು ಒಂದುಗೂಡಿಸಿ ದೇಶ ಕಟ್ಟಿದ ಚಾಣಕ್ಯನಂತೆ ಅಮಿತ್ ಶಾ ದೇಶ ವಿರೋಧಿ ಶಕ್ತಿಗಳನ್ನು ಹೆಡೆಮುರಿಕಟ್ಟುತ್ತಾ ಅಖಂಡ ಭಾರತ ನಿರ್ಮಾಣಕ್ಕೆ ತೊಡಗಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಒತ್ತಾಸೆಯಂತೆ, ಗೃಹ ಸಚಿವಾಲಯದ ಜವಾಬ್ದಾರಿ ವಹಿಸಿಕೊಂಡ ಅಮಿತ್ ಶಾ ನಂತರ ಕಾಶ್ಮೀರದಲ್ಲಿ ವಿಧಿ 370 ತೆಗೆದು ಹಾಕಿ, ಅದನ್ನು ಭಾರತದ ಅವಿಭಾಜ್ಯ ಅಂಗವಾಗಿ ಮಾಡಿದರು. ಈಶಾನ್ಯ ಭಾರತದ ಹಲವು ದಶಕಗಳ ಗಡಿ ವಿವಾದಗಳಿಗೆ ತೆರೆ ಎಳೆಯುತ್ತಾ ಸುಮಾರು ಎಂಟು ಸಾವಿರಕ್ಕೂ ಹೆಚ್ಚು ತೀವ್ರವಾದಿಗಳು ಶಸ್ತ್ರಾಸ್ತ್ರ ತೊರೆದು ಮುಖ್ಯವಾಹಿನಿಗೆ ಬರುವಂತೆ ಮಾಡಿದ್ದಾರೆ. ಹೀಗೆ ತಮ್ಮ ದೃಢ ನಿರ್ಧಾರಗಳಿಗೆ ಹೆಸರಾಗಿರುವ ಅಮಿತ್ ಶಾ ದೇಶದ ಭದ್ರತೆ ಮತ್ತು ಅಖಂಡತೆಗೆ ಬಹುಮೌಲಿಕ ಕೊಡುಗೆ ನೀಡುತ್ತಿದ್ದಾರೆ.