ಬೆಂಗಳೂರು, (www.thenewzmirror.com) :
58ನೇ ಬೆಂಗಳೂರು ವಿಶ್ವವಿದ್ಯಾಲಯದಿಂದ ಇಸ್ರೋ ಅಧ್ಯಕ್ಷ ಸೋಮನಾಥ್ ಗೆ ಗೌರವ ಡಾಕ್ಟರೇಟ್ ಘೋಷಣೆ ಮಾಡಲಾಗಿತ್ತು. ಇಂತಹ ಗೌರವ ಡಾಕ್ಟರೇಟ್ ಅನ್ನು ಇಂದು ಅವರಿಗೆ ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರದಾನ ಮಾಡಿದ್ದಾರೆ.
ಅಂದು ಪದವಿ ಪ್ರಮಾಣಪತ್ರ, ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿತ್ತು. ಆದರೆ ಬೆಂಗಳೂರು ವಿವಿಯ ಘಟಿಕೋತ್ಸವದಲ್ಲಿ ಇಸ್ರೋ ಅಧ್ಯಕ್ಷ ಸೋಮನಾಥ್ ಅವರು ಭಾಗಿಯಾಗಿ ಗೌರವ ಡಾಕ್ಟರೇಟ್ ಅನ್ನು ಸ್ವೀಕರಿಸೋದಕ್ಕೆ ಸಾಧ್ಯವಾಗಿರಲಿಲ್ಲ.
ಹೀಗಾಗಿ ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಸ್ರೋ ಅಧ್ಯಕ್ಷ ಸೋಮನಾಥ್ ಅವರಿಗೆ ಗೌರವ ಡಾಕ್ಟರೇಟ್ ಅನ್ನು ಪ್ರದಾನ ಮಾಡಿದರು.
ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ ಬಳಿಕ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಮಾತನಾಡಿ, ಈ ಡಾಕ್ಟರೇಟ್ ಗೌರವ ನನಗಲ್ಲ,ಇಸ್ರೋ ಸಂಸ್ಥೆಗೆ ಸಲ್ಲಬೇಕು.ಇಸ್ರೋ ಸಂಸ್ಥೆ ಪ್ರತಿನಿಧಿಸುತ್ತಿರುವುದಕ್ಕೆ ಹೆಮ್ಮೆ ಇದೆ. ಚಂದ್ರಯಾನದ ಯಶಸ್ಸು, ಸಾಧನೆ ನನ್ನೊಬ್ಬನದಲ್ಲ,ಇಡೀ ಇಸ್ರೋ ವಿಜ್ಞಾನಿಗಳ ಯಶಸ್ಸು ಮತ್ತು ಸಾಧನೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದುಕೊಂಡಿರುವುದು ಮತ್ತಷ್ಟು ಖುಷಿ ನೀಡಿದೆ. ನಾನು ಬೆಂಗಳೂರಿಗ,35 ವರ್ಷಗಳಿಂದ ಬೆಂಗಳೂರು ನೋಡ್ತಿದ್ದೇನೆ.ಬೆಂಗಳೂರಿನ ಗಲ್ಲಿ ಗಲ್ಲಿಯನ್ನು ನಾನು ಬಲ್ಲೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆ ಬೆಂಗಳೂರಿನಲ್ಲಿ ಇರುವುದರಿಂದ ಇಂದು ನಾನು ಈ ಸ್ಥಾನದಲ್ಲಿ ನಿಂತಿದ್ದೇನೆ. ಬೆಂಗಳೂರು ಮತ್ತು ಕರ್ನಾಟಕ ಬಾಹ್ಯಕಾಶ,ವಿಜ್ಞಾನ ಕ್ಷೇತ್ರಕ್ಕೆ ತನ್ನದೇ ಕೊಡುಗೆ ನೀಡಿದೆ.ಬೆಂಗಳೂರು ವಿಶ್ವವಿದ್ಯಾಲಯ ಕೂಡ ಅದಕ್ಕೆ ಕೊಡುಗೆ ನೀಡುತ್ತಾ ಬಂದಿರುವುದು ಮತ್ತಷ್ಟು ಹೆಮ್ಮೆ ತರುವ ವಿಷಯ
ಎಂದು ಸಂತಸ ವ್ಯಕ್ತಪಡಿಸಿದರು.