ಬೆಂಗಳೂರು, (www.thenewzmirror.com) ;
ಬೆಂಗಳೂರು ವಿಶ್ವವಿದ್ಯಾಲಯದ ಕೇಂದ್ರೀಯ ಗ್ರಂಥಾಲಯ ಶೀಘ್ರದಲ್ಲೇ ಹೈಟೆಕ್ ಆಗಲಿದೆ. ಆ ಮೂಲಕ ದೇಶದಲ್ಲೇ ಅತ್ಯುತ್ತಮ ಗ್ರಂಥಾಲಯ ಆಗುವತ್ತ ಮಹತ್ವದ ಹೆಜ್ಜೆ ಇಟ್ಟಿದೆ.
ಬೆಂಗಳೂರು ವಿವಿ ಕ್ಯಾಂಪಸ್ ನಲ್ಲಿರುವ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಕೇಂದ್ರೀಯ ಗ್ರಂಥಾಲಯ ಮೇಲ್ದರ್ಜೆಗೇರಿಸುವ ಕಾರ್ಯ ಈಗಾಗಲೇ ಆರಂಭವಾಗಿದ್ದು, ಇದಕ್ಕಾಗಿ ವಿವಿ ಬರೋಬ್ಬರಿ 1 ಕೋಟಿ ಅನುದಾನವನ್ನೂ ಮೀಸಲಿರಿಸಿದೆ.
ಅಭಿವೃದ್ಧಿಯ ಜತೆಗೆ ಹಸಿರು ಗ್ರಂಥಾಲಯವಾಗುವತ್ತಲೂ ಹೆಜ್ಜೆ ಇಡುತ್ತಿದೆ. ಗ್ರಂಥಾಲಯದ ಸುತ್ತಲೂ 10 ಎಕರೆ ವ್ತಾಪ್ತಿಯಲ್ಲಿ 28 ಸಾವಿರ ಮಿಯಾವಾಕಿ ಗಿಡಗಳನ್ನು ನೆಡುವ ಮೂಲಕ ಹಸಿರು ಗ್ರಂಥಾಲಯಕ್ಕೆ ಮತ್ತಷ್ಟು ಒತ್ತು ನೀಡಲಾಗಿದೆ. ಸಾಂಪ್ರದಾಯಿಕ ಗಿಡ, ಮರಗಳನ್ನು ನೆಡುವ ಮೂಲಕ ಸಂಪೂರ್ಣ ಗ್ರಂಥಾಲಯ ಸುತ್ತಲೂ ಹಸಿರುಮಯವಾಗಿಸಲಾಗಿದೆ.
ವಿದ್ಯಾರ್ಥಿಗಳು ಒತ್ತಡಮುಕ್ತರಾಗಿ ಅಧ್ಯಯನ ನಡೆಸಲು ವಿಶೇಷವಾಗಿ ಆಲದಮರದಲ್ಲಿ ಹ್ಯಾಂಗಿಂಗ್ ಲೈಬ್ರರಿ( ತೂಗುಯ್ಯಲೆ) ನಿರ್ಮಿಸಲಾಗುವುದು,ಪ್ರತಿ ಮರದಲ್ಲೂ ವಿದ್ಯಾರ್ಥಿಗಳು ಯಾವುದೇ ಅಡಚಣೆಗಳಿಲ್ಲದೇ ಅಧ್ಯಯನ ಮಾಡಲು ಅವಕಾಶ ಕಲ್ಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ವಿಶೇಷವಾಗಿ ಗ್ರಂಥಾಲಯವನ್ನು ಮತ್ತಷ್ಟು ಡಿಜಿಟಲೀಕರಣಗೊಳಿಸುವ ನಿಟ್ಟಿನಲ್ಲಿ ಲೈಬ್ರರಿ ವ್ಯಾಪ್ತಿಯಲ್ಲಿ ಉಚಿತ ವೈಫೈ ಒದಗಿಸಲು ಸಿದ್ಧತೆ ನಡೆದಿದೆ.
ಇದೇ ಮೊದಲ ಬಾರಿಗೆ ಲೈಬ್ರರಿಯಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕರ ಲಾಂಜ್ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಹಾಗೆನೇ ವಿದ್ಯಾರ್ಥಿಗಳ ಮನೋ ಒತ್ತಡ ಕಡಿಮೆ ಮಾಡಲು ಮತ್ತು ಓದಿನ ನಡುವೆ ಮನೋವಿಕಾಸ ಹೆಚ್ಚಿಸಲು ಕ್ರೀಡಾ ವಲಯ, ಸಂಗೀಯ ವಲಯ ನಿರ್ಮಿಸುವ ಇರಾದೆ ವಿವಿ ಹೊಂದಿದೆ.
ಓದಿನ ಜತೆಗೆ ಆಟಾಟೋಪಕ್ಕೂ ಆದ್ಯತೆ ನೀಡಲಾಗುತ್ತಿದ್ದು, ಚೆಸ್, ಕ್ಯಾರಮ್‌ನಂತ ಸಣ್ಣ ಪುಟ್ಟ ಆಟಗಳು, ಸಂಗೀತ ಆಲಿಸುವುದರ ಮೂಲಕ ಮನಸ್ಸಿಗೆ ವಿಶ್ರಾಂತಿ ನೀಡುವ ಪ್ರಯತ್ನವನ್ನು ಗ್ರಂಥಾಲಯ ವಿಭಾಗ ಮಾಡಲಿದೆ. ಬಯಲು ರಂಗಮಂದಿರ ಕೂಡ ತಲೆ ಎತ್ತಲ್ಲಿದ್ದು ಶಿಕ್ಷಣಕ್ಕೆ ಸಾಥ್ ನೀಡುವ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗುವುದು.
ಬೆಂಗಳೂರು ವಿವಿ ಗ್ರಂಥಾಲಯ ಅಭಿವೃದ್ಧಿಗೆ ಗ್ರಂಥಪಾಲಕರಾದ ಡಾ.ಬಿ.ಆರ್.ರಾಧಾಕೃಷ್ಣ ಕಾಯಕಲ್ಪ ನಕ್ಷೆ ರೂಪಿಸಿದ್ದು, ಕುಲಪತಿ ಡಾ.ಜಯಕರ ಎಸ್ ಎಂ, ಹಾಗೆನೇ ಕುಲಸಚಿವ ಶೇಕ್ ಲತೀಫ್ ಸಹಕಾರದಿಂದ 2023-24 ನೇ ಸಾಲಿನಲ್ಲಿ ಗ್ರಂಥಾಲಯ ಹೊಸ ರೂಪ ಪಡೆದುಕೊಳ್ಳಲಿದೆ.
ಬೆಂಗಳೂರು ವಿಶ್ವವಿದ್ಯಾಲಯ ಗ್ರಂಥಾಲಯ ಅತಿ ಹೆಚ್ಚು ಪುಸ್ತಕ ಭಂಡಾರ ಹೊಂದಿರುವ ಸರ್ಕಾರಿ ಗ್ರಂಥಾಲಯಗಳಲ್ಲಿ ಒಂದಾಗಿದೆ. ಸದ್ಯ ಲೈಬ್ರರಿಯಲ್ಲಿ ಸುಮಾರು 4ಲಕ್ಷಕ್ಕೂ ಅಧಿಕ ಪುಸ್ತಕ ಸಂಗ್ರಹ, 65 ಸಾವಿರಕ್ಕೂ ಹೆಚ್ಚು ಇ – ಬುಕ್ಸ್‌ಗಳನ್ನು ಹೊಂದಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ M Library ಆಪ್ ಕೂಡ ನಿರ್ಮಿಸಿದ್ದು ಈ ಮೂಲಕ ವಿದ್ಯಾರ್ಥಿಗಳ ಗ್ರಂಥಾಲಯ ಲಾಭ ಪಡೆಯಬಹುದಾಗಿದೆ. ವಿಜ್ಞಾನ,ಸಮಾಜ ಶಾಸ್ತ್ರ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅವಶ್ಯಕವಾಗಿರುವ ಪುಸ್ತಕ ಕೋಶ ಗ್ರಂಥಾಲಯ ಹೊಂದಿದೆ.
ಗ್ರಂಥಾಲಯದ ಮತ್ತಷ್ಟು ವಿಶೇಷತೆಗಳು
* OPAC – ಆನ್‌ಲೈನ್ ಸಾರ್ವಜನಿಕ ಪ್ರವೇಶ ಕ್ಯಾಟಲಾಗ್
* ಶೋಧ ಶುದ್ಧಿ ತಂತ್ರಜ್ಞಾನ
* ಇ – ಪಾಠಶಾಲಾ ( ಧ್ವನಿ, ದೃಶ್ಯ, ಅಕ್ಷರ ರೂಪದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ)
* ಪ್ರಶ್ನಾಂತರಂಗ ( ಕಳೆದ ಸಾಲಿನ ಪರೀಕ್ಷಾ ಪ್ರಶ್ನೆ ಪತ್ರಿಕೆಗಳ ಸಂಗ್ರಹ)
* ಯುಜಿಸಿ – IRINS ಮಾಹಿತಿ ತಂತ್ರಜ್ಞಾನ ವ್ಯವಸ್ಥೆ