ಬೆಂಗಳೂರು,(www.thenewzmirror.com);
ಬೆಂಗಳೂರು ವಿವಿಯ ಸಂಶೋಧಾನ ವಿದ್ಯಾರ್ಥಿಗಳಿಗೆ ಸಂಶೋಧನಾ ಪ್ರಬಂಧಗಳ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಕಾರ್ಯಾಗಾರ ಆಯೋಜಿಸಲಾಗಿತ್ತು. ಬೆಂಗಳೂರು ವಿಶ್ವವಿದ್ಯಾಲಯ ಬಾಬಾಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಕೇಂದ್ರೀಯ ಗ್ರಂಥಾಲಯದ ವತಿಯಿಂದ ಸಂಶೋಧನಾ ವಿಧಾನಗಳು ಮತ್ತು ವೈಜ್ಞಾನಿಕ ಪ್ರಕಾಶನ ಪರಿಕರಗಳಕುರಿತು ಎರಡು ದಿನಗಳ ರಾಷ್ಟ್ರೀಯ ಕಾರ್ಯಗಾರವನ್ನ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ನಿರಂಜನ ಉದ್ಘಾಟಿಸಿದರು.
ಉದ್ಘಾಟನೆ ಬಳಿಕ ಮಾತನಾಡಿದ ಪ್ರೊಮ ನಿರಂಜನ ವಿದ್ಯಾರ್ಥಿಗಳಿಗೆ ಕೇವಲ ಪಿ.ಹೆಚ್.ಡಿಗಳನ್ನ ಕೊಡುವುದೇ ವಿಶ್ವವಿದ್ಯಾಲಯಗಳ ಗುರಿಯಲ್ಲ. ಭಾರತದಲ್ಲಿ 2017 ರಿಂದ ಈಚೆಗೆ 1.3 ಮಿಲಿಯನ್ ಸಂಶೋಧನಾ ಪ್ರಬಂಧಗಳು ಪ್ರಕಟವಾಗಿವೆ. ಸಂಶೋಧನಾ ಪ್ರಬಂಧಗಳ ಪ್ರಕಟಣೆಯಲ್ಲಿ ಭಾರತ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ. ಆದರೆ ಆ ಸಂಶೋಧನಾ ಪ್ರಬಂಧಗಳಲ್ಲಿನ ಗುಣಮಟ್ಟವನ್ನು ನೋಡಿದರೆ ಬೇಸರವಾಗುತ್ತದೆ ಎಂದರು.
ನಾಮಕವಸ್ಥೆಗೆ ಸಂಶೋಧನಾ ಪ್ರಬಂಧ, ಗ್ರಂಥಗಳನ್ನು ಬರೆಯುವುದರಿಂದ ವೈಯಕ್ತಿಕ ಮತ್ತು ಸಮಾಜಕ್ಕೆ ಯಾವುದೇ ಉಪಯೋಗವಿಲ್ಲ. ವಿದ್ಯಾರ್ಥಿಗಳು ಇದನ್ನು ಅರಿತುಕೊಂಡು ಗುಣಾತ್ಮಕ, ಪರಿಣಾಮತ್ಮಕ ಪ್ರಬಂಧಗಳನ್ನು ರಚಿಸಬೇಕು.ಪ್ರಬಂಧಗಳ ಮೂಲಕ ವ್ಯವಸ್ಥೆಯ ಲೋಪ ದೋಷಗಳನ್ನು ಸರಿಪಡಿಸುವಂತಿರಬೇಕು” ಎಂದು ತಿಳಿಸಿದರು.
ಕುಲಪತಿ ಡಾ.ಜಯಕರ ಎಸ್ ಎಂ ಮಾತನಾಡಿ ಭಾರತದಲ್ಲಿ ತಂತ್ರಜ್ಞಾನ, ಅನ್ವೇಷಣೆಗಳಿಗೆ ಸೂಕ್ತವಾದ ವೇದಿಕೆ ನಿರ್ಮಾಣವಾಗಿದೆ. ಚಂದ್ರಯಾನ 3 ಇಂದ 5 ಜಿ ತಂತ್ರಜ್ಞಾನದವರೆಗೂ ಎಲ್ಲದರಲ್ಲೂ ಚಾಪು ಮೂಡಿಸಿದ್ದೇವೆ. ಸಂಶೋಧನಾ ಪ್ರಬಂಧದಲ್ಲೂ ಆ ಕೆಲಸವಾಗಬೇಕು. ವಿದ್ಯಾರ್ಥಿಗಳು ಆ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು. ಗುಣಮಟ್ಟ ಪ್ರಬಂಧ ರಚನೆಗೆ ಶ್ರಮ ವಹಿಸಬೇಕು,ವಿಶ್ವವಿದ್ಯಾಲಯ ಕೂಡ ಆ ನಿಟ್ಟಿನಲ್ಲಿ ಸಂಪೂರ್ಣ ಸಹಕರಿಸಲಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಗಾರದಲ್ಲಿ 300ಕ್ಕೂ ಅಧಿಕ ಸಂಶೋಧನಾ ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ. ಒಟ್ಟು 4 ಸೆಷನ್‌ಗಳು ನಡೆಯಲಿದ್ದು ಯುಜಿಸಿ ನಿಯತಕಾಲಿಕೆಗಳಲ್ಲಿನ ಪ್ರಕಟಣೆ ವಿಧಾನ, ವೈಜ್ಞಾನಿಕ ಸಂಶೋಧನಾ ಪದ್ದತಿ,ಕೃತಿಚೌರ್ಯ ಪತ್ತೆ ಪರಿಕರಗಳು,ಜೀವನ ಕೌಶಲ್ಯಗಳ ಬಗ್ಗೆ ವಿಶೇಷ ತರಬೇತಿ ನೀಡಲಾಗುವುದು. ಜೊತೆಗೆ ಸಂಶೋಧನಾ ವಿದ್ಯಾರ್ಥಿಗಳ ಪ್ರಬಂಧ,ಗ್ರಂಥಗಳ ಗುಣಮಟ್ಟ ಹೆಚ್ಚಿಸಲು ಬೇಕಾದ ಸೂಕ್ತ ಮಾರ್ಗದರ್ಶನ ಒದಗಿಸಲಾಗುವುದು.