ಬೆಂಗಳೂರು, (www.thenewzmirror.com);
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ದಿನಕಳೆದಂತೆ ಗುಣಮಟ್ಟದ ಶಿಕ್ಷಣ ಸಿಗ್ತಿಲ್ವಾ.? ಇದರ ಜವಾಬ್ದಾರಿ ಹೊತ್ತುಕೊಂಡಿದ್ದ ಬಿಬಿಎಂಪಿ ಇದರಲ್ಲಿ ವಿಫಲವಾಗಿದ್ಯಾ..? ಪ್ರತಿ ವರ್ಷ ನೂರಾರು ಕೋಟಿ ಖರ್ಚು ಮಾಡಿದ್ರೂ ಗುಣಮಟ್ಟದ ಶಿಕ್ಷಣ ಸಿಗದೇ ಇರೋದ್ರಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೆ ನೇರ ಪರಿಣಾಮ ಬೀರುತಿದ್ಯಾ..? ಇಂಥದೊಂದು ಆತಂಕ ಮೂಡುತ್ತಿದ್ದು, ಇದಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಮಹತ್ವದ ತೀರ್ಮಾನ ಕೈಗೊಂಡಿದೆ.
ಇತ್ತೀಚೆಗೆ ಬೆಂಗಳೂರು ಉಸ್ತುವಾರಿ ವಹಿಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಶಿಕ್ಷಣ ಇಲಾಖೆ ಜತೆ ಮಹತ್ವದ ಸಭೆಯೊಂದನ್ನ ನಡೆಸಿದ್ದರು. ಆ ಸಭೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಶಾಲೆಗಳು ಇನ್ಮುಂದೆ ಸರ್ಕಾರ ಸುಪರ್ದಿಯಲ್ಲಿ ಇರಲಿವೆ ಅಂತ ಆದೇಶ ಹೊರಡಿಸಿದ್ದಾರೆ. ಅಷ್ಟಕ್ಕೂ ಸರ್ಕಾರ ಈ ತೀರ್ಮಾನ ಮಾಡುವುದಕ್ಕೆ ಒಂದು ಬಲವಾದ ಕಾರಣವಿದೆ. ಇತ್ತೀಷಿನ ದಿನಗಳಲ್ಲಿ ಬಿಬಿಎಂಪಿ ಶಾಲೆಗಳಲ್ಲಿ ನಿರೀಕ್ಷಿತ ಪ್ರಮಾಣದ ಫಲಿತಾಂಶ ಬರುತ್ತಿಲ್ಲ. ಇದು ಸಾಧ್ಯವಾಗಬೇಕಾದರೆ ಸರ್ಕಾರವೇ ಶಾಲಾ ಕಾಲೇಜುಗಳನ್ನ ನಿರ್ವಹಣೆ ಮಾಡಬೇಕು. ಹೀಗಾಗಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದರು.
ಶಾಲೆಗಳಲ್ಲಿ ಶಿಕ್ಷಣ ನೀಡುವಂತಹ ಜವಾಬ್ದಾರಿಯನ್ನು ಮಾತ್ರ ಶಿಕ್ಷಣ ಇಲಾಖೆಗೆ ನೀಡಲಾಗುತ್ತಿದ್ದು, ಈ ಶಾಲೆಗಳ ಮೂಲಸೌಕರ್ಯಗಳ ಉನ್ನತೀಕರಣ ಹಾಗೂ ನಿರ್ವಹಣೆಯನ್ನು ಬಿಬಿಎಂಪಿಯಿಂದಲೇ ಮಾಡಲಾಗುವುದು. ಶಾಲೆಯ ಜಾಗ, ಕಟ್ಟಡ ನಿರ್ವಹಣೆ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯವನ್ನು ಪಾಲಿಕೆಯಿಂದಲೇ ನಿರ್ವಹಿಸಲಾಗುವುದು. ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿಯನ್ನು ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.
500 ಕೆಪಿಎಸ್ ಶಾಲೆ ನಿರ್ಮಾಣಕ್ಕೆ ಜಾಗ ಗುರುತಿಸಿದ ಶಿಕ್ಷಣ ಇಲಾಖೆ
ಸಿಎಸ್ಆರ್ ನಿಧಿಯ ಮೂಲಕ ಪಂಚಾಯ್ತಿ ಮಟ್ಟದಲ್ಲಿ 2 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣ ಮಾಡುವ ಗುರಿ ಸರ್ಕಾರದ ಮುಂದಿದ್ದು, ಮೊದಲ ವರ್ಷ 500 ಶಾಲೆಗಳ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. ಮುಂದಿನ ತಿಂಗಳು ಮೊದಲನೇ ಅಥವಾ ಎರಡನೇ ವಾರದಲ್ಲಿ ಎಲ್ಲಾ ಸಿಎಸ್ಆರ್ ಕಂಪನಿಗಳನ್ನು ಕರೆದು ಅವರಿಗೆ ಈ ಶಾಲೆಗಳ ನಿರ್ಮಾಣ ಯೋಜನೆಗಳನ್ನು ನೀಡುತ್ತೇವೆ. ಅವರು ನಮಗೆ ಗುಣಮಟ್ಟದ ಮೂಲಸೌಕರ್ಯವಿರುವ ಶಾಲೆಗಳನ್ನು ನಿರ್ಮಿಸಿ ಕೊಡಲಿದ್ದಾರೆ. ಪ್ರತಿ ಶಾಲೆಯ ಮೂಲಭೂತ ಸೌಕರ್ಯಕ್ಕೆ ಕನಿಷ್ಠ 4 ಕೋಟಿಯಿಂದ 7 ಕೋಟಿ ರೂ.ವರೆಗೂ ವೆಚ್ಚವಾಗಲಿದೆ. ನಾವು ಈಗಾಗಲೇ ಕೆಲವು ಕಂಪನಿಗಳ ಜತೆ ಚರ್ಚೆ ಮಾಡಿದ್ದು, ಮತ್ತೊಂದು ಸುತ್ತಿನ ಸಭೆ ಮಾಡುತ್ತೇವೆ ಎಂದು ಡಿಸಿಎಂ ಮಾಹಿತಿ ನೀಡಿದರು.
ನಮ್ಮಲ್ಲಿರುವ ಉತ್ತಮ ಶೈಕ್ಷಣಿಕ ಸಂಸ್ಥೆಗಳು ಈ ಕರ್ನಾಟಕ ಪಬ್ಲಿಕ್ ಶಾಲೆಗಳ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿವೆ. ಎಲ್ಲೆಲ್ಲಿ ಶಿಕ್ಷಕರ ಕೊರತೆ ಇದೆ. ಅಲ್ಲಿ ಈ ಸಂಸ್ಥೆಗಳು ಶಿಕ್ಷಕರನ್ನು ನೇಮಿಸಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿ ವಹಿಸಿಕೊಳ್ಳಲಿವೆ. ಒಂದು ಶಿಕ್ಷಣ ಸಂಸ್ಥೆ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಒಂದು ಅಥವಾ ಎರಡು ಮೂರು ಶಾಲೆಗಳ ಜವಾಬ್ದಾರಿಯನ್ನು ಪಡೆಯಬಹುದಾಗಿದೆ. ಸರ್ಕಾರಿ ಶಿಕ್ಷಕರ ಜತೆಗೆ ಈ ಶಿಕ್ಷಣ ಸಂಸ್ಥೆಗಳು ಶಿಕ್ಷಕರನ್ನು ಒದಗಿಸಲಿವೆ.
ಈಗಾಗಲೇ ನಮ್ಮ ಬಳಿ 1900 ಕೋಟಿ ರೂ.ಗಳಷ್ಟು ಸಿಎಸ್ಆರ್ ನಿಧಿ ನೀಡಲು ಹಲವು ಸಂಸ್ಥೆಗಳು ಮುಂದೆ ಬಂದಿವೆ. ಇದಕ್ಕಾಗಿ ನೀಲನಕ್ಷೆ ಸಿದ್ಧವಾಗಿದೆ. ಮುಂದಿನ 15ರಿಂದ 20 ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳು ಹಾಗೂ ಸಿಎಸ್ಆರ್ ಸಂಸ್ಥೆಗಳನ್ನು ಕರೆಸಿ ಸಭೆ ಮಾಡುತ್ತೇವೆ ಎಂದು ಡಿಸಿಎಂ ತಿಳಿಸಿದರು.