ಬೆಂಗಳೂರು, (www.thenewzmirror.com) :
ಪ್ರಧಾನ ಮಂತ್ರಿ ಉಚ್ಚತರ್ ಶಿಕ್ಷಾ ಅಭಿಯಾನ (PM – USHA ) ಯೋಜನೆಯಡಿ ಕೇಂದ್ರ ಸರ್ಕಾರ ವಿವಿಧ ಮಾನದಂಡಗಳ ಅಡಿ ದೇಶದ ಶಿಕ್ಷಣ ಸಂಸ್ಥೆ ಮತ್ತು ವಿಶ್ವವಿದ್ಯಾಲಯಗಳಿಗೆ ಅನುದಾನ ಘೋಷಿಸಲಾಗಿತ್ತು. ಅನುದಾನ ಘೋಷಣೆಯಾಗಿದ್ದ ವಿಶ್ವವಿದ್ಯಾಲಯಗಳ ಅಭಿವೃದ್ಧಿ ಯೋಜನೆ ಸೇರಿದಂತೆ ಪಿಎಂ ಉಷಾ ಯೋಜನೆಗೆ ಪ್ರಧಾನಿ ನರೇಂದ್ರಮೋದಿ ಕಾಶ್ಮೀರದಿಂದ ವರ್ಚುವಲ್ ಮೂಲಕ ಚಾಲನೆ ನೀಡಿದರು.
ಪ್ರಧಾನಿ ಮೋದಿಯವರ ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆ ಬೆಂಗಳೂರು ವಿಶ್ವವಿದ್ಯಾಲಯದ ವಿ.ಬಿ.ಕುಟಿನೋ ಸಭಾಂಗಣದಲ್ಲಿ ವಿಶೇಷ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿತ್ತು. ಬೆಂಗಳೂರು ವಿಶ್ವವಿದ್ಯಾಲಯ ಪಿಎಂ ಉಷಾ ಯೋಜನೆಯಡಿ 100 ಕೋಟಿ ಅನುದಾನ ಸ್ವೀಕರಿಸಿದ ಹಿನ್ನೆಲೆ ವಿವಿ ಕಾರ್ಯಕ್ರಮ, ಯೋಜನೆಗಳಿಗೂ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.

ಪ್ರಧಾನಿ ಮೋದಿಯವರ ವರ್ಚುವಲ್ ಕಾರ್ಯಕ್ರಮದ ಬಳಿಕ ಕುಲಪತಿ ಡಾ.ಜಯಕರ ಎಸ್ ಎಂ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ವಿಶ್ವವಿದ್ಯಾಲಯಕ್ಕೆ 100 ಕೋಟಿ ಅನುದಾನಕ್ಕೆ ಕಾರಣರಾದ ಪ್ರಾಧ್ಯಾಪಕರು,ಅಧಿಕಾರಿಗಳು,ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಈ ಸಂದರ್ಭದಲ್ಲಿ ಧನ್ಯವಾದಗಳು ತಿಳಿಸಿದರು. ಪಿಎಂ ಉಷಾ ಅನುದಾನದ ಮೂಲಕ ವಿಶ್ವವಿದ್ಯಾಲಯದಲ್ಲಿ ಬದಲಾವಣೆ ಪರ್ವ ಶುರುವಾಗಬೇಕು ಎಂದು ತಿಳಿಸಿದರು.
ಬೆಂಗಳೂರು ವಿವಿ ರಾಜ್ಯದಲ್ಲೇ ಮೊದಲು ನ್ಯಾಕ್ ಎ++ ಪಡೆದುಕೊಂಡು ಸಾಧನೆ ಮಾಡಿತ್ತು. ಈಗ ಪಿಎಂ ಉಷಾ ಯೋಜನೆಯಡಿ 100 ಕೋಟಿ ಅನುದಾನ ಸ್ವೀಕರಿಸಿದ ವಿವಿಗಳ ಪಟ್ಟಿಯಲ್ಲಿ ಸ್ಥಾನ ಪಡೆದು ಮೈಲಿಗಲ್ಲು ಸಾಧಿಸಿದೆ ಎಂದರು. ವಿಶ್ವವಿದ್ಯಾಲಯದ ಕರ್ತವ್ಯ ಮತ್ತು ಜವಾಬ್ದಾರಿ ಈಗ ಮತ್ತಷ್ಟು ಹೆಚ್ಚಾಗಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕಾರ್ಯ ಮಾಡಲಾಗುವುದು.ವಿದ್ಯಾರ್ಥಿಗಳ,ಪ್ರಾಧ್ಯಾಪಕರ ಅಭಿವೃದ್ಧಿಗೆ ಬೇಕಾದ ಸರ್ವ ಪ್ರಯತ್ನವನ್ನು ಮಾಡುವ ಮೂಲಕ ವಿಶ್ವ ವಿದ್ಯಾಲಯವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಭರವಸೆಯನ್ನು ಕೂಡ ವ್ಯಕ್ತಪಡಿಸಿದರು.

ಇನ್ನೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷರಾದ ಎಸ್ ಆರ್ ನಿರಂಜನ ವಿವಿ ಸಾಧನೆಗೆ ಅಭಿನಂದಿಸಿದರು. ಬೆಂಗಳೂರು ವಿವಿ ದೇಶದಲ್ಲೆ ಮೇಲ್ಪಂಕ್ತಿ ಸಾಧಿಸಿದೆ.ಸಂಶೋಧನಾ, ಅನ್ವೇಷಣೆ,ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಸಾಧನೆ ಮಾಡಿರುವ ವಿಶ್ವವಿದ್ಯಾಲಯಕ್ಕೆ ಈಗ ಪಿಎಂ ಉಷಾ ಯೋಜನೆಯ ಮೂಲಕ ಮತ್ತಷ್ಟು ಬಲ ಹೆಚ್ಚಿದೆ.ಅನುದಾನ ಪಡೆದುಕೊಳ್ಳುವುದು ಸುಲಭ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಕಠಿಣ,ಆ ಕಠಿಣ ಸವಾಲನ್ನು ವಿವಿ ಗುಣಮಟ್ಟದ ಯೋಜನೆಗಳ ಅನುಷ್ಠಾನದ ಮೂಲಕ ಮೆಟ್ಟಿನಿಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಪಿಎಂ ಉಷಾ ಯೋಜನೆಯಡಿ 100 ಕೋಟಿ ಅನುದಾನದ ನೆರವು ದೊರೆತಿದ್ದು ಅದನ್ನು 50:30:20 ಅನುಪಾತದಲ್ಲಿ ವ್ಯಯಿಸಲು ವಿವಿ ನಿರ್ಧರಿಸಿದೆ. ಹೊಸ ಕೋರ್ಸ್,ಶೈಕ್ಷಣಿಕ ಕಟ್ಟಡಗಳು,ಬಯಲು ರಂಗಮಂದಿರ,ಹಾಸ್ಟೆಲ್‌ಗಳ ನಿರ್ಮಾಣಕ್ಕೆ 50 ಕೋಟಿ ಮೀಸಲಿಡಲಾಗಿದೆ.ವಿಶ್ವವಿದ್ಯಾಲಯ ಕ್ಯಾಂಪಸ್ ಉನ್ನತೀಕರಣ,ನೆಟವರ್ಕಿಂಗ್,ಕ್ರೀಡಾ ಸೌಲಭ್ಯಗಳ ಹೆಚ್ಚಳ, ಸ್ಮಾರ್ಟ್ ಕ್ಲಾಸ್,ಆರೋಗ್ಯ ಕೇಂದ್ರದ ಉನ್ನತೀಕರಣ,ಮ್ಯೂಸಿಎಂ ಉನ್ನತೀಕರಣ,ಡಿಜಿಟಲೀಕರಣ,ಹಸಿರು ಕ್ಯಾಂಪಸ್ ಯೋಜನೆಗೆ 30 ಕೋಟಿ ಮೀಸಲಿಡಲಾಗಿದೆ. ವೈಜ್ಞಾನಿಕ ಉಪಕರಣಗಳು ಖರೀದಿ,ವಿವಿಧ ವೃತ್ತಿ ತರಭೇತಿ ಮತ್ತು ಜಾಗೃತಿ ಕಾರ್ಯಕ್ರಮಗಳಿಗೆ 20 ಕೋಟಿ ಖರ್ಚು ಮಾಡಲು ವಿವಿ ಉದ್ದೇಶಿಸಿದೆ.ಈ ಎಲ್ಲಾ ಯೋಜನೆಗಳಿಗೂ ಪ್ರಧಾನಿ ಮೋದಿಯವರ ಕಾರ್ಯಕ್ರಮದ ಮೂಲಕ ಸಾಂಕೇತಿಕವಾಗಿ ವರ್ಚುವಲ್ ಚಾಲನೆ ಸಿಕ್ಕಿದೆ.