ಸರ್ಕಾರದ ಸೊಕ್ಕನ್ನು ಮುರಿಯುವ ಶಕ್ತಿ ಬಿಜೆಪಿಗೆ ಇದೆ:ವಿಜಯೇಂದ್ರ

RELATED POSTS

ಬೆಂಗಳೂರು(www.thenewzmirror.com): ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರಕ್ಕೆ ಸಲಹೆ ನೀಡುವಷ್ಟು ದೊಡ್ಡ ಮನುಷ್ಯರು ನಾವಲ್ಲ; ಆದರೆ, ಸರಕಾರದ ಗೂಂಡಾ ವರ್ತನೆ, ಇವರ ಸೊಕ್ಕನ್ನು ಮುರಿಯುವ ಶಕ್ತಿ ಬಿಜೆಪಿಗೆ ಇದೆ. ನಮ್ಮ ಕಾರ್ಯಕರ್ತರಿಗೆ ಇದೆ. ಅದನ್ನು ಮುಂದಿನ ದಿನಗಳಲ್ಲಿ ತೋರಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಎಚ್ಚರಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರಕಾರದ ನಡವಳಿಕೆಯಿಂದ ದಕ್ಷಿಣ ಕನ್ನಡ- ಕರಾವಳಿ ಭಾಗದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹಾಳಾಗುತ್ತಿದೆ. ಇದನ್ನು ತಿದ್ದಿಕೊಳ್ಳದೆ ಪೊಲೀಸ್ ಮೂಲಕ ಗೂಂಡಾಗಿರಿ ಮಾಡಿದ್ದೇ ಆದರೆ, ಬಿಜೆಪಿ ಕೈಕಟ್ಟಿಕೊಂಡು ಕೂರುವುದಿಲ್ಲ,ಈ ವಿಷಯವಾಗಿ ನಿನ್ನೆ ರಾತ್ರಿ ರಾಷ್ಟ್ರೀಯ ಮುಖಂಡರ ಜೊತೆ ಚರ್ಚೆ ಮಾಡಿದ್ದೇನೆ. ಇವತ್ತು ನಮ್ಮ ಸಂಸದರು, ಶಾಸಕರು ಪೊಲೀಸ್ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವರ ಗಡೀಪಾರು ಕುರಿತ ಪ್ರಶ್ನೆಗೆ ಉತ್ತರ ನೀಡಿದ ಅವರು, ರಾಜ ಮಹಾರಾಜರು ಹಿಂದೆ ನಮ್ಮ ದೇಶವನ್ನು ಆಳಿದ್ದರು. ಆಗ ಪಾಳೇಗಾರರು ಇದ್ದ ಬಗ್ಗೆ ನಾವು ಕೇಳಿದ್ದೇವೆ. ಆ ಪಾಳೇಗಾರಿಕೆಯನ್ನು ಹಂಗಿಸುವಂತೆ ರಾಜ್ಯದ ಕಾಂಗ್ರೆಸ್ ಸರಕಾರವು ಅಧಿಕಾರ ನಡೆಸುತ್ತಿದೆ. ಪ್ರಜಾಪ್ರಭುತ್ವವನ್ನು ಹಂಗಿಸುವಂತೆ ಸಿದ್ದರಾಮಯ್ಯರ ನೇತೃತ್ವದ ಸರಕಾರವು ತುಘಲಕ್ ದರ್ಬಾರ್ ನಡೆಸುತ್ತಿದೆ ಎಂದು ಟೀಕಿಸಿದರು.

ಕಳೆದ ಕೆಲವು ತಿಂಗಳಿನಿಂದ ಈ ಲಜ್ಜೆಗೆಟ್ಟ ಕಾಂಗ್ರೆಸ್ ಸರಕಾರದ ವರ್ತನೆಯನ್ನು ತಾವು ಗಮನಿಸಿ. ರಾಜ್ಯದಲ್ಲಿ ಅಭಿವೃದ್ಧಿ ಆಗುತ್ತಿಲ್ಲವೆಂದು ಜನಾಕ್ರೋಶ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲೇ ಮತ್ತೊಂದು ಕಡೆ ಸರಕಾರದ ಹುಳುಕು ಮುಚ್ಚಿ ಹಾಕಿಕೊಳ್ಳಲು ಇಂಥ ಘಟನೆಗಳು ನಡೆಯುತ್ತಿವೆ. ಸರಕಾರವು ಕೂಡ ಹಿಂದೂ ಕಾರ್ಯಕರ್ತರಿಗೆ ಅಪಮಾನ ಮಾಡಲು ಕುತಂತ್ರ ಮಾಡುತ್ತಿದೆ ಎಂದು ಆಕ್ಷೇಪಿಸಿದರು.

ಸುಹಾಸ್ ಹತ್ಯೆ ನಡೆದಾಗ ಗೃಹ ಸಚಿವರು ಸುಹಾಸ್ ಮನೆಗೆ ಹೋಗದಂತೆ ಕೆಲವು ದುಷ್ಟ ಶಕ್ತಿಗಳು ಅವರನ್ನು ತಡೆದಿದ್ದವು. ಸುಹಾಸ್ ಶೆಟ್ಟಿ ಹತ್ಯೆ ಆದಾಗ ಮಹಿಳೆಯರೂ ಅದರಲ್ಲಿ ಭಾಗಿಯಾಗಿದ್ದರು. ಇದು ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. 3-4 ಜನ ಮಹಿಳೆಯರು ರಸ್ತೆಯಲ್ಲಿ ನಿಂತು ಕೊಲೆಗಡುಕರು, ದೇಶದ್ರೋಹಿಗಳನ್ನು ಕಾರಿನಲ್ಲಿ ಕೂರಿಸಿ, ಪರಾರಿ ಆಗಲು ಸಹಕರಿಸಿದ್ದರು ಎಂದು ವಿವರಿಸಿದರು. ಅದರ ಕುರಿತು ಏನಾಗಿದೆ? ಅವರನ್ನು ಬಂಧಿಸಿದ್ದಾರಾ ಎಂದು ಕೇಳಿದರು.

ನಮ್ಮ ರಾಜ್ಯದಲ್ಲಿ ಚುನಾಯಿತ ಸರಕಾರ ಇದೆ; ಪೊಲೀಸರು ಕಾನೂನು- ಸುವ್ಯವಸ್ಥೆ ಕಾಪಾಡುತ್ತಿದ್ದಾರೆ ಎಂಬ ನಂಬಿಕೆ ಬರುತ್ತಿಲ್ಲ. ಇದರ ನಡುವೆ ಸಂಘ ಪರಿವಾರದ ಹಿರಿಯರ ಮೇಲೆ ಎಫ್‍ಐಆರ್ ದಾಖಲಿಸಿದ್ದಾರೆ. ಹಿಂದೂ ಮುಖಂಡರ ವಿರುದ್ಧ ಎಫ್‍ಐಆರ್ ದಾಖಲಿಸಿ, ಕಾರ್ಯಕರ್ತರನ್ನು ಬೆದರಿಸುವ ಕುತಂತ್ರ ನಡೆಯುತ್ತಿದೆ. ಮಧ್ಯರಾತ್ರಿ ಕಾರ್ಯಕರ್ತರ ಮನೆಯ ಬಾಗಿಲು ತಟ್ಟಿ, ಅವರನ್ನು ವಿಚಾರಿಸುತ್ತಿದ್ದಾರೆ. ನಾವು ಪ್ರಜಾಪ್ರಭುತ್ವದಲ್ಲಿ ಇದ್ದೇವಾ? ಎಲ್ಲಿದ್ದೇವೆ ನಾವು ಎಂದು ಪ್ರಶ್ನಿಸಿದರು.

ರೈತರ ಹಕ್ಕನ್ನು ಮೊಟಕುಗೊಳಿಸುವ ಕಾರ್ಯ..

ರೈತರ ಹಕ್ಕನ್ನು ಮೊಟಕುಗೊಳಿಸುವ ಕೆಲಸವು ರಾಜ್ಯ ಸರಕಾರಕ್ಕೆ ಶೋಭೆ ತರುವುದಿಲ್ಲ ಎಂದ ಅವರು, ರಾಜ್ಯ ಸರಕಾರವು ಹೇಮಾವತಿ ನದಿ ನೀರಿನ ವಿಚಾರದಲ್ಲಿ ರೈತರ ಹೋರಾಟವನ್ನು ಹತ್ತಿಕ್ಕುವ ಕಾರ್ಯ ಮಾಡುತ್ತಿದೆ. ಪೊಲೀಸರ ಮೂಲಕ ಗೂಂಡಾಗರ್ದಿ ಮಾಡಿ ಹೋರಾಟ ಹತ್ತಿಕ್ಕುವ ಕಾರ್ಯ ನಡೆಸುತ್ತಿದೆ ಎಂದು ಟೀಕಿಸಿದರು.

ಯಾರೋ ಒಬ್ಬರೋ ಇಬ್ಬರೋ ಕಲ್ಲು ಹೊಡೆದಿರಬಹುದು; ಅದು ಸರಿ ಎನ್ನುವುದಿಲ್ಲ. ಪೊಲೀಸರು ನಮ್ಮ ರಾಜ್ಯದ ಆಸ್ತಿ. ಆದರೆ, ಯಾರೋ ಒಬ್ಬರೋ ಇಬ್ಬರೋ ಕಲ್ಲು ಹೊಡೆದರೆಂದು ನಮ್ಮ ಕಾರ್ಯಕರ್ತರನ್ನು ಹಾಗೂ ರೈತ ಮುಖಂಡರನ್ನು ಟಾರ್ಗೆಟ್ ಮಾಡಿ, ಅವರನ್ನು ಒಳಗೆ ಹಾಕುವ ಕುತಂತ್ರ ನಡೆಯುತ್ತಿದೆ. ಇದರಿಂದ ಹೇಮಾವತಿ ನದಿ ನೀರಿನ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ತಿಳಿಸಿದರು.

ನಾನು, ನಮ್ಮ ಪಕ್ಷದ ಮುಖಂಡರು ಇವತ್ತು ಮಧ್ಯಾಹ್ನ ಸ್ಥಳಕ್ಕೆ ಭೇಟಿ ಕೊಡಲಿದ್ದೇವೆ. ಈ ನಾಲಾಯಕ್ ಕಾಂಗ್ರೆಸ್ ಸರಕಾರವು, ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ; ಅಭಿವೃದ್ಧಿಗೆ ಹಣ ಕೊಡುವುದಕ್ಕೆ ಸಾಧ್ಯ ಆಗುತ್ತಿಲ್ಲ ಎಂದು ಆಕ್ಷೇಪಿಸಿದರು. ಕಾನೂನು- ಸುವ್ಯವಸ್ಥೆ ಹಾಳಾಗಲು ರಾಜ್ಯ ಸರಕಾರದ ಷಡ್ಯಂತ್ರವೇ ಕಾರಣ. ತಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕುವ ಸಲುವಾಗಿ ಸರಕಾರ ಹೀಗೆ ಮಾಡುತ್ತಿದೆ ಎಂದು ಆರೋಪಿಸಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist