ಬೆಂಗಳೂರು, (www.thenewzmirror.com) ;
ನಾವು ಅಧಿಕಾರಕ್ಕೆ ಬಂದ್ರೆ ಮಹಿಳೆಯರಿಗೆ ಉಚಿತ ಬಸ್ ಸೇವೆ ನೀಡ್ತಿವಿ ಅನ್ನೋ ಗ್ಯಾರಂಟಿಯನ್ನ ಕಾಂಗ್ರೆಸ್ ನೀಡಿತ್ತು. ಅದರಂತೆ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಶಕ್ತಿ ಯೋಜನೆ ಹೆಸರಿನಲ್ಲಿ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಸೇವೆಗೆ ಚಾಲನೆಯನ್ನೂ ಕೊಟ್ಟಿತ್ತು. ಯೋಜನೆ ಜಾರಿಯಾಗಿ ಒಂದು ವರ್ಷ ಕಳೆದಿದ್ರೂ ನಿರೀಕ್ಷೆಗೂ ಮೀರಿ ಯಶಸ್ವಿಯಾಗುತ್ತಿದ್ದು, ಇದೂವರೆಗೂ 250 ಕೋಟಿಗೂ ಅಧಿಕ ಮಹಿಳಾ ಪ್ರಯಾಣಿಕರು ಯೋಜನೆಯ ಅದುಪಯೋಗ ಪಡೆದುಕೊಂಡ್ರೆ ಹತ್ರತ್ರ 6100 ಕೋಟಿ ಮೌಲ್ಯದ ಟಿಕೆಟ್ ಅನ್ನ ಯೋಜನೆಯಡಿ ವಿತರಣೆ ಮಾಡಲಾಗಿದೆ.
ಶಕ್ತಿ ಯೋಜನೆ ಜಾರಿಯಾದ ಮೇಲೆ ಕೇವಲ ಮಹಿಳಾ ಪ್ರಯಾಣಿಕರು ಅಷ್ಟೇ ಅಲ್ಲದ ಪುರುಷ ಪ್ರಯಾಣಿಕರ ಸಂಖ್ಯೆಯೂ ಅಧಿಕವಾಗಿದೆ. ಆರ್ಥಿಕ ತಜ್ಞರ ಪ್ರಕಾರ ಶಕ್ತಿ ಯೋಜನೆ ಜಾರಿಯಾದ ಬಳಿಕ ನಷ್ಟದಲ್ಲಿರೋ ನಾಲ್ಕೂ ನಿಗಮಗಳು ಲಾಭದತ್ತ ಮುಖ ಮಾಡುತ್ತಿವೆ ಅನ್ನೋ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ರು. ಆದ್ರೆ ದಿ ನ್ಯೂಝ್ ಮಿರರ್ ಗೆ ಸಿಕ್ಕಿರೋ ಮಾಹಿತಿ ಪ್ರಕಾರ ಲಾಭದಲ್ಲಿರಬೇಕಾದ ಸಂಸ್ಥೆಗಳು ಇನ್ನೂ ನಷ್ಟದ ಹಾದಿಯಲ್ಲಿಯೇ ಸಾಗುತ್ತಿವೆ ಅನ್ನೋದು ಗೊತ್ತಾಗಿದೆ.
ಅದರಲ್ಲೂ ಬೆಂಗಳೂರು ಜನರ ಜೀವನಾಡಿ BMTC ಯಲ್ಲಿ ಪ್ರತಿದಿನ ಅಂದಾಜು ಮೂವತ್ತು ಲಕ್ಷ ಪ್ರಯಾಣಿಕರು ಪ್ರಯಾಣ ಮಾಡ್ತಿದ್ದಾರೆ ಇದ್ರಲ್ಲಿ ಶೇಕಡಾ 55 ರಷ್ಟು ಮಹಿಳಾ ಪ್ರಯಾಣಿಕರು ಪ್ರತಿದಿನ ಬಿಎಂಟಿಸಿ ಬಸ್ ಹತ್ತುತ್ತಿದ್ದಾರೆ. ಅಧಿಕಾರಿಗಳೇ ಹೇಳುವ ಪ್ರಕಾರ ಶಕ್ತಿ ಯೋಜನೆ ಜಾರಿಯಾದ ಬಳಿಕ ಬಿಎಂಟಿಸಿ ಬಸ್ ಹತ್ತುವವರ ಸಂಖ್ಯೆಯಲ್ಲಿ ಶೇಖಡಾ ಹತ್ತರಷ್ಟು ಹೆಚ್ಚಳವಾಗಿದೆ ಅಂತ.
ಹೀಗಿದ್ದರೂ ಬಿಎಂಟಿಸಿ ಆರ್ಥಿಕ ವರ್ಷದಲ್ಲಿ ನಷ್ಟದಲ್ಲಿದೆ ಎಂದು ಅದೇ ಅಧಿಕಾರಿಗಳು ಮಾಹಿತಿ ನೀಡ್ತಿದ್ದಾರೆ. 2023-24 ನೇ ಸಾಲಿಗೆ ಹೋಲಿಸಿದ್ರೆ ಬಿಎಂಟಿಸಿ 275.45 ನಷ್ಟದಲ್ಲಿದೆ ಅಂತ ಅಧಿಕಾರಿಗಳು ಮಾಹಿತಿಹಕ್ಕಿನಡಿ ಕೇಳಿದ ಮಾಹಿತಿಗೆ ಉತ್ತರ ಕೊಟ್ಟಿದ್ದಾರೆ.
ಪ್ರತಿ ದಿನ ಲಕ್ಷಾಂತರ ಪ್ರಯಾಣಿಕರು ಬಿಎಂಟಿಸಿಯಲ್ಲಿ ಪ್ರಯಾಣ ಮಾಡುತ್ತಿದ್ದರೂ ಇನ್ನೂ ಸಂಸ್ಥೆ ನಷ್ಟದಲ್ಲಿದೆ ಎಂದರೆ ಏನರ್ಥ ಎನ್ನುವ ಪ್ರಶ್ನೆಗೆ ಉತ್ತರ ಮಾತ್ರ ಸಿಕ್ಕಿಲ್ಲ. ಆರ್ಥಿಕ ತಜ್ಞರ ಲೆಕ್ಕಾಚಾರವನ್ನೂ ಉಲ್ಟಾ ಮಾಡಿರೋ ಬಿಎಂಟಿಸಿಯ ಕೆಲ ಅಧಿಕಾರಿಗಳು ಸಂಸ್ಥೆಗೆ ಬರ್ಬೇಕಿದ್ದ ಹಣವನ್ನ ತಮ್ಮ ಜೇಬಿಗೆ ಇಳಿಸಿಕೊಳ್ತಿದ್ದಾರಾ ಅನ್ನೋ ಅನುಮಾನ ಮೂಡುತ್ತಿದೆ.
ಮಾಹಿತಿ ನೋಡಿ ಸ್ವತಃ ಸಾರಿಗೆ ಸಚಿವರೇ ಶಾಕ್…!
ಶಕ್ತಿ ಯೋಜನೆ ಜಾರಿಯಾದ ಬಳಿಕ ರಾಜ್ಯದ ನಾಲ್ಕೂ ನಿಗಮಗಳು ಲಾಭದತ್ತ ಮುಖ ಮಾಡದಿದ್ರೂ ನೋ ಲಾಸ್ ನೋ ಪ್ರಾಫಿಟ್ ರೀತಿ ಬರುತ್ತೆ ಅಂತ ಪ್ರತಿ ಬಾರಿಯೂ ಹೇಳುತ್ತಿದ್ರು. ಅದೇ ಆಧಾರದ ಮೇಲೆ ಬಿಎಂಟಿಸಿಯ ಆರ್ಥಿಕ ಸ್ಥಿತಿ ಅರಿಯುವ ನಿಟ್ಟಿನಲ್ಲಿ ಮಾಹಿತಿ ಕೇಳಿದಾಗ ಸಂಸ್ಥೆ ನಷ್ಟದಲ್ಲಿದೆ ಅಂತ ಮಾಹಿತಿ ಕೊಟ್ಟಿದ್ದಾರೆ. ಈ ವಿಚಾರ ತಿಳಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿನೇ ಶಾಕ್ ಆಗಿದ್ದಾರೆ. ಲಾಭದಲ್ಲಿರಬೇಕಾದ ಸಂಸ್ಥೆ ನಷ್ಟದಲ್ಲಿದೆ ಅಂದರೆ ಹೇಗೆ ಎನ್ನುವ ಪ್ರಶ್ನೆಯನ್ನ ಅಧಿಕಾರಿಗಳ ಬಳಿ ಕೇಳಿದ್ದು, ಆರ್ಥಿಕ ಸ್ಥಿತಿಗತಿಯ ಕುರಿತು ಮಾಹಿತಿ ನೀಡುವಂತೆ ಮೌಖಿಕವಾಗಿ ಸೂಚಿಸಿದ್ದಾರಂತೆ.
ಸರ್ಕಾರದಿಂದ ಬರಬೇಕಿದೆ 205.36 ಅನುದಾನ..!
ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣ ಮಾಡುವ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣದ ಟಿಕೆಟ್ ಅನ್ನ ನೀಡಿ ಆನಂತರ ಒಟ್ಟಾರೆ ಮಹಿಳಾ ಪ್ರಯಾಣಿಕರು ಓಡಾಡಿದ ಟಿಕೆಟಿನ ಮೊತ್ತವನ್ನ ಸರ್ಕಾರದಿಂದ ಪಡೆಯುವ ಪದ್ದತಿ ಶಕ್ತಿ ಯೋಜನೆಯದ್ದಾಗಿದೆ. ಆದರೆ ಯೋಜನೆ ಜಾರಿಯಾಗಿ ಒಂದು ವರ್ಷ ಪೂರೈಸಿ ಎರಡನೇ ವರ್ಷಕ್ಕೆ ಕಾಲಿಟ್ಟಿದೆ. ಆದ್ರೆ ಯೋಜನೆಯಡಿ ಸಂಸ್ಥೆಗೆ ಬರಬೇಕಾಗಿದ್ದ ಅನುದಾನವನ್ನ ನೀಡಿ ಅಂತ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರೂ ನಿಗಮಕ್ಕೆ 2023-24 ನೇ ಸಾಲಿನಲ್ಲಿ 205.36 ಕೋಟಿ ಅನುದಾನ ಬರಬೇಕಿದೆ. ಈ ಮಾಹಿತಿಯನ್ನ ಮಾಹಿತಿ ಹಕ್ಕಿನಡಿ ಕೋರಿದ್ದಮಾಹಿತಿಯಡಿ ಉತ್ತರ ನೀಡಲಾಗಿದೆ.
ಕೇವಲ ಬಿಎಂಟಿಸಿ ಅಷ್ಟೇ ಅಲ್ಲ ಉಳಿದ ಮೂರು ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ಥಿತಿನೂ ಹೀಗೆ ಇದೆ ಎಂದು ವಿಶ್ಲೇಶಿಸಲಾಗುತ್ತಿದೆ. ಕೆಎಸ್ಸಾರ್ಟಿಸಿ ವೊಂದನ್ನ ಹೊರತು ಪಡಿಸಿ ಉಳಿದ ಸಂಸ್ಥೆಗಳು ನಷ್ಟದಲ್ಲಿವೆ ಅಂತ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ. ಪ್ರತಿ ದಿನ ನಾಲ್ಕೂ ನಿಗಮಗಳಿಂದ ಹತ್ರತ್ರ ಒಂದು ಕೋಟಿಗೂ ಅಧಿಕ ಪ್ರಯಾಣಿಕರು ಪ್ರಯಾಣ ಮಾಡ್ತಿದ್ದಾರೆ. ಹೀಗಿದ್ದರೂ ಸಂಸ್ಥೆಗಳು ನಷ್ಟದಲ್ಲಿವೆ ಅಂದರೆ ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ. ಈ ವಿಚಾರವನ್ನ ಸಾರಿಗೆ ಸಚಿವರು ಗಂಭೀರವಾಗಿ ಪರಿಗಣಿಸಿ ನಷ್ಟ ಅಂತ ಹೇಳುತ್ತಿರೋ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ. ದಕ್ಷ ಹಾಗೂ ಪ್ರಾಮಾಣಿಕವಾಗಿರುವ ಸಾರಿಗೆ ಸಚಿವರು ಇತ್ತ ಗಮನ ಹರಿಸಿ ಸರ್ಕಾರಿ ಸಾಮ್ಯದ ಸಂಸ್ಥೆಗಳನ್ನ ರಕ್ಷಣೆ ಮಾಡಲಿ ಅನ್ನೋದೇ ನಮ್ಮ ಆಶಯ.