ಬೆಂಗಳೂರು, (www.thenewzmirror.com) ;
ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳಿಗೆ ವಿಕಲಚೇತನಾ ಕೋಟಾದಲ್ಲಿ ಮೀಸಲಾತಿ ಕ್ಲೇಮ್ ಮಾಡಿರುವ ಅಭ್ಯರ್ಥಿಗಳ
ವೈದ್ಯಕೀಯ ತಪಾಸಣೆ ಸೋಮವಾರದಿಂದ ಆರಂಭವಾಯಿತು.
ಮಲ್ಲೇಶ್ವರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಚೇರಿಯಲ್ಲಿ ನಡೆಯುತ್ತಿರುವ ವೈದ್ಯಕೀಯ ತಪಾಸಣೆಗೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಚಾಲನೆ ನೀಡಿದರು.
ಬೌರಿಂಗ್ ಮತ್ತು ವಿಕ್ಟೋರಿಯಾ ಆಸ್ಪತ್ರೆಯಿಂದ ಬಂದಿದ್ದ ಆರು ಮಂದಿ ಮೂಳೆ ರೋಗ ಮತ್ತು ಕಣ್ಣು- ಮೂಗು-ಕಿವಿ (ಇಎನ್ ಟಿ) ತಜ್ಞ ವೈದ್ಯರು ಅಭ್ಯರ್ಥಿಗಳನ್ನು ತಪಾಸಣೆ ಮಾಡಿ, ದಾಖಲೆಗಳನ್ನು ಪರಿಶೀಲಿಸಿದರು. ಇದನ್ನು ಖುದ್ದು ಪ್ರಸನ್ನ ಅವರು ಮೇಲ್ವಿಚಾರಣೆ ನಡೆಸಿದರು.
ಸಿಇಟಿಗೆ ಅರ್ಜಿ ಸಲ್ಲಿಸುವಾಗ ಒಟ್ಟು 783 ಮಂದಿ ವಿಕಲಚೇತನರ ಕೋಟಾದಲ್ಲಿ ಮೀಸಲಾತಿ ಕ್ಲೇಮ್ ಮಾಡಿದ್ದು ಅಷ್ಟೂ ಮಂದಿಗೆ ಇದೇ 12ವರೆಗೆ ತಪಾಸಣೆ ನಡೆಸಲಾಗುತ್ತದೆ. ಮೊದಲ ದಿನ 250 ಮಂದಿಗೆ ಬರಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಣ್ಣಿನ ಸಮಸ್ಯೆ ಇರುವವರ ತಪಾಸಣೆ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ನಡೆಯುತ್ತಿದ್ದು, ಅಲ್ಲಿಗೆ ಕೆಇಎ ಸಿಬ್ಬಂದಿಯೇ ಅಂತಹವರನ್ನು ವಾಹನದಲ್ಲಿ ಕರೆದೊಯ್ಯುವ ಕೆಲಸ ಮಾಡಿತು.
ವೈದ್ಯಕೀಯ ಸಮಿತಿಯು ಪರಿಶೀಲಿಸಿ ನೀಡುವ ವಿಕಲಚೇತನರ ಅರ್ಹತೆ ವಿಷಯದಲ್ಲಿ ವೈದ್ಯಕೀಯ ಸಮಿತಿಯ ನಿರ್ಧಾರವೇ ಅಂತಿಮ ಎಂದು ಅವರು ವಿವರಿಸಿದ್ದಾರೆ.
*ದಾಖಲೆ ಏನು ತರಬೇಕು?:*
ಯುಜಿಸಿಇಟಿ ಅರ್ಜಿಯ ಪ್ರತಿ, ಪ್ರವೇಶ ಪತ್ರ, ಅಭ್ಯರ್ಥಿಯ ಭಾವಚಿತ್ರ ಇರುವ ಗುರುತಿನ ಚೀಟಿ, ವೈದ್ಯಕೀಯ ಪ್ರಮಾಣಪತ್ರ, ಕಿವುಡುತನದ ಸಮಸ್ಯೆ ಇರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಿಂದ ಪಡೆದ ಪ್ರಮಾಣ ಪತ್ರಗಳನ್ನು ತಪಾಸಣೆ ಸಂದರ್ಭದಲ್ಲಿ ತಂದಿರಬೇಕು ಎಂದು ಅವರು ತಿಳಿಸಿದ್ದಾರೆ.