ಬೆಂಗಳೂರು, (www.thenewzmirror.com) ;
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರೋ ತನಿಖಾಧಿಕಾರಿಗಳಿಗೆ ಇದೀಗ ಹೊಸ ಸಂಕಷ್ಟ ಎದುರಾಗಿದೆಯಂತೆ. ಇಂಥದೊಂದು ಮಾತು ಖಾಕಿ ವಲಯದಲ್ಲಿ ಕೇಳಿ ಬರುತ್ತಿದ್ದು, ಆದಷ್ಟು ಬೇಗ ಪರಿಹರಿಸಿ ಅಂತ ಹಿರಿಯ ಅಧಿಕಾರಿಗಳ ಬಳಿ ಮನವಿ ಮಾಡಿಕೊಳ್ತಿದ್ದಾರಂತೆ.
ಹೌದು, ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನ ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದು, ಅಂತಿಮ ಹಂತಕ್ಕೂ ಬಂದಿದೆ. ತನಿಖೆ ವೇಳೆ ತನಿಖಾಧಿಕಾರಿಗಳು ಸಾಕ್ಷಿ ಸಂಗ್ರಹಕ್ಕಾಗಿ ಹತ್ತಾರು ಕಡೆಗಳಲ್ಲಿ ಸುತ್ತಾಟ ಮಾಡಿದ್ದಾರೆ. ಇದುವರೆಗೂ 200ಕ್ಕೂ ಹೆಚ್ಚು ಸಾಕ್ಷ್ಯಗಳ ಜೊತೆಗೆ ಸುಮಾರು 300ಕ್ಕೂ ಹೆಚ್ಚು ವ್ಯಕ್ತಿಗಳ ವಿಚಾರಣೆ ನಡೆಸಿದ್ದಾರೆ. ಇನ್ನು ಸಾಕ್ಷ್ಯ ಸಂಗ್ರಹ ಮಾಡಿದ ಎಲ್ಲ ಕಡೆಗಳಲ್ಲೂ ಪೊಲೀಸರು ಮಹಜರು ನಡೆಸಿದ್ದಾರೆ.
ತನಿಖಾಧಿಕಾರಿಗಳು ಕಳೆದ ಎರಡೂವರೆ ತಿಂಗಳಿಂದ ಲಕ್ಷಾಂತರ ರೂಪಾಯಿ ಹಣ ತನಿಖೆ, ಸಾಕ್ಷಿಗಳ ವಿಚಾರಣೆಗಾಗಿ ಖರ್ಚು ಮಾಡಿದ್ದಾರೆ. ಈ ಹಣವನ್ನ ಪೊಲೀಸರು ತಮ್ಮ ಜೇಬಿನಿಂದಲೇ ಹಾಕಿದ್ದು, ಬಿಲ್ ಸಂಗ್ರಹ ಮಾಡಿದ್ದಾರೆ. ಈಗ ಆ ಎಲ್ಲಾ ಬಿಲ್ಗಳನ್ನು ಹಿರಿಯ ಅಧಿಕಾರಿಗಳಿಗೆ ಕಳುಹಿಸಿದ್ದು ಹಣವನ್ನು ಮಂಜೂರು ಮಾಡುವಂತೆ ಮನವಿ ಮಾಡಿದ್ದಾರೆ.
ಇನ್ನು ಪೊಲೀಸರು ತನಿಖೆಯ ಭಾಗವಾಗಿ ಹಲವು ಕಡೆಗಳಲ್ಲಿ ಮಹಜರು ಮಾಡಿದ್ದಾರೆ. ಅದರಲ್ಲೂ ಬೆಂಗಳೂರು ಅಲ್ಲದೆ ಚಿತ್ರದುರ್ಗದಲ್ಲೂ ಮಹಜರು ಮಾಡಿದ್ದಾರೆ. ಕಿಡ್ನಾಪ್ ಮಾಡಿದ ಸ್ಥಳ, ಆರೋಪಿಗಳ ಮನೆ ಸೇರಿ ಹತ್ತಾರು ಕಡೆಗಳಲ್ಲಿ ಆರೋಪಿಗಳನ್ನು ಕರೆದೊಯ್ದು ಮಹಜರು ನಡೆಸಿದ್ದಾರೆ. ಹೀಗೆ ಆರೋಪಿಯನ್ನು ಕರೆದೊಯ್ಯವಾಗ ಊಟದ ಖರ್ಚಿನ ಜೊತೆಗೆ ದೈನಂದಿನ ಖರ್ಚನ್ನು ತನಿಖಾಧಿಕಾರಿಗಳೇ ಭರಿಸಿದ್ದಾರೆ ಎನ್ನಲಾಗುತ್ತಿದೆ.