ಕೋಲಾರ/ಬೆಂಗಳೂರು, (www.thenewzmirror.com) ;
ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇದೀಗ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ವಿಚಾರದಲ್ಲಿ ಹಿಂದೇಟು ಹಾಕುತ್ತಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಸಮಿತಿಗಳನ್ನ ರಚಿಸಿರೋ ಸರ್ಕಾರ, ಅವುಗಳನ್ನ ಪ್ರತಿಯೊಬ್ಬರಿಗೂ ತಲುಪಿಸೋ ನಿಟ್ಟಿನಲ್ಲಿ ಕ್ರಮ ಕೈಗೊಳ್ಳೋದು ಆ ಸಮಿತಿಯ ಉದ್ದೇಶ. ಕೇವಲ ಗ್ಯಾರಂಟಿ ಯೋಜನೆಗಳನ್ನ ಅನುಷ್ಠಾನಗೊಳಸಿದ್ರೆ ಸಾಕಪ್ಪ ಎನ್ನುತ್ತಿರೋ ಸರ್ಕಾರ ಗ್ರಾಮ ಪಂಚಾಯಿತಿಗಳು ಹಾಗೂ ಅವುಗಳ ಕಾರ್ಯವೈಖರಿ ವಿಚಾರದಲ್ಲಿ ದೀವ್ಯ ನಿರ್ಲಕ್ಷ್ಯ ವಹಿಸುತ್ತಿದೆ.
ರಾಜ್ಯದಲ್ಲಿರೋ ಗ್ರಾಮಪಂಚಾಯಿತಿ ಕಾರ್ಯ ವೈಖರಿ ತಿಳಿಯೋ ನಿಟ್ಟಿನಲ್ಲಿ ನ್ಯೂಝ್ ಮಿರರ್ ರಾಜ್ಯದ ಕೆಲ ಗ್ರಾಮಪಂಚಾಯಿತಿಗಳಲ್ಲಿ ವಾಸ್ತವ ಸ್ಥಿತಿ ತಿಳಿಯೋ ಕೆಲ್ಸ ಮಾಡ್ತು. ಈ ವೇಳೆ ಕಂಡುಬಂದಿದ್ದು, ಅಲ್ಲಿರೋ ಅವ್ಯವಸ್ಥೆ ಹಾಗೂ ಕನಿಷ್ಠ ಸೌಕರ್ಯ ನೀಡದ ಅಲ್ಲಿನ ಜನಪ್ರತಿನಿಧಿಗಳ ನಿರ್ಲಕ್ಷ್ಯ ಕಂಡು ಬಂತು.
ಬೆಂಗಳೂರು ನಗರದಿಂದ ಸ್ವಲ್ಪ ದೂರದಲ್ಲಿರೋ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನಲ್ಲಿ ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ಒಂದು ರೌಂಡ್ ಹಾಕುವ ಕೆಲ್ಸ ಮಾಡ್ತು. ಘಟ್ಟ ಮಾದಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಅಲ್ಲಿಕಲ್ಲು ಗ್ರಾಮದ ಪರಿಸ್ಥಿತಿ ನಮ್ಮ ಕಣ್ಣಿಗೆ ಬಿತ್ತು.., ಅಭಿವೃದ್ಧಿ ಕಾಣದ ಗ್ರಾಮ ನಮ್ಮನ್ನು ಸ್ವಾಗತ ಮಾಡ್ತು. ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಗ್ರಾಮ ಅಭಿವೃದ್ಧಿ ಅಧಿಕಾರಿಯ ಬೇಜವಾಬ್ದಾರಿಯಿಂದ ಡೆವಲಪ್ ಮೆಂಟ್ ಅನ್ನೋದು ಮರಿಚಿಕೆಯಾಗಿರೋದು ಕಾಣಿಸಿತು.
ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಕೋಟಿಗಟ್ಟಲೇ ಅನುದಾನ ಬಂದಿದ್ರೂ ಯಾವುದೇ ಒಂದು ಅಭಿವೃದ್ಧಿ ಈ ಗ್ರಾಮದಲ್ಲಿ ಕಾಣಲಿಲ್ಲ. ನಿಂತಲ್ಲೇ ನಿಂತಿರುವ ಕೊಳಚೆ ನೀರು.., ಕಿತ್ತು ಹೋಗಿರುವ ಕಲ್ಲುಗಳು.., ಮುರಿದು ಬಿದ್ದ ನೀರಿನ ನಲ್ಲಿಗಳು., ಅಪಾಯಕ್ಕೆ ಎಡೆಮಾಡಿಕೊಡುತ್ತಿರೋ ಚರಂಡಿಗಳು ಸೂರಿಗಾಗಿ ಕಾಯುತ್ತಿರೋ ಬಡ ಮಹಿಳೆಯರ ದುಸ್ಥಿತಿ ಹೀಗೆ ಹೇಳುತ್ತಾ ಹೋದರೆ ಸಮಸ್ಯೆಗಳ ಸರಮಾಲೆಯನ್ನೇ ಹೊದ್ದು ಮಲಗಿರೋದು ಕಾಣುತ್ತೆ.
ಪ್ರಧಾನಿ ಮೋದಿ ಸ್ವಚ್ಛ ಭಾರತ್ ಅಭಿಯಾನ ಆರಂಭಿಸಿ ಇದಕ್ಕೆ ಸಾರ್ವಜನಿಕರೂ ಸೇರಿದಂತೆ ಪ್ರತಿಯೊಬ್ಬರೂ ಕೈ ಜೋಡಿಸ್ಬೇಕು ಅಂತ ಮನವಿ ಮಾಡಿದ್ರು. ಆದ್ರೆ ಮೋದಿ ಏನಾದ್ರೂ ಈ ಗ್ರಾಮಕ್ಕೆ ಬಂದ್ರೆ ಸ್ವಚ್ಛ ಭಾರತ್ ಅಂದ್ರೆ ಇದೆನಾ ಅಂತ ಅಚ್ಚರಿ ಪಡುವಷ್ಟು ಚಿತ್ರಣ ಕಾಣುತ್ತೆ. ಇಲ್ಲಿನ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ಮರೆತು ಕೇವಲ ಸಂಬಳ ಪಡೆಯೋದು ಅಷ್ಟೇ ನಮ್ಮ ಕಾಯಕ ಎನ್ನುವ ರೀತಿ ವರ್ತನೆ ಮಾಡ್ತಿದ್ದಾರೆ ಅಂತ ಗ್ರಾಮಸ್ಥರು ಆರೋಪ ಮಾಡ್ತಿದ್ದಾರೆ.
ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸಿ ಅಂತ ಹಲವು ಮನವಿ ಕೊಟ್ಟಿದ್ದರೂ ಅಧಿಕಾರಿಗಳು ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಅಂತ ನಿವಾಸಿಗಳು ತಮ್ಮ ಅಳಲನ್ನ ತೋಡಿಕೊಳ್ಳುತ್ತಿದ್ದಾರೆ. ಬಡವರಿಗೆ ಮನೆ ಕಟ್ಟಿಸಿಕೊಡುವ ಯೋಜನೆ ಇಲ್ಲಿ ಮರಿಚಿಕೆಯಾಗಿದೆ. ಮಳೆ ಬಂದರೆ ಸೋರುವ, ಪಾಳು ಬಿದ್ದಿರುವ ಮನೆಯಲ್ಲೇ ಜೀವ ಕೈಯಲ್ಲಿ ಹಿಡಿದುಕೊಂಡೇ ಜೀವನ ಸಾಗಿಸೋ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಇದೇ ರೀತಿ ಗ್ರಾಮದಲ್ಲಿ ಐವತ್ತಕ್ಕೂ ಹೆಚ್ಚು ಅರ್ಜಿಗಳು ಗ್ರಾಮ ಪಮಚಾಯಿತಿಗೆ ಸಲ್ಲಿಕೆಯಾಗಿದ್ದರೂ ಯಾವುದೇ ಒಂದು ಅರ್ಜಿಗೆ ಸ್ಪಂದಿಸೋ ಕೆಲ್ಸವನ್ನ ಪಿಡಿಓಯಿಂದ ಹಿಡಿದು ಅಧ್ಯಕ್ಷರು ಯಾರೂ ಗಮನ ಹರಿಸುತ್ತಿಲ್ಲವಂತೆ.
ಫಲಾನುಭವಿಗಳ ಅನುದಾದ ದುರ್ಬಳಕೆ
ಆಲಿಕಲ್ಲು ಗ್ರಾಮದಲ್ಲಿ ವಸತಿ ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನದಲ್ಲಿ ದುರ್ಬಳಕೆಯಾಗಿದೆ. ಅನುದಾನ ದುರ್ಬಳಕೆ ಆಗಿರುವ ಕುರಿತಂತೆ ದಾಖಲೆ ದಿ ನ್ಯೂಝ್ ಮಿರರ್ ಗೆ ಲಭಿಸಿದ್ದು, ಅನುದಾನ ದುರ್ಬಳಕೆಯಾಗಿದೆ ಎಂದು ಗ್ರಾಮಪಂಚಾಯತ್ ನ ಪಿಡಿಓ ವರದಿ ಸಲ್ಲಿಸಿದ್ದಾರೆ. ಕೆಲ ಮೂಲಗಳ ಪ್ರಕಾರ ಫಲಾನುಭವಿಗಳಿಗೆ ಅನುದಾನವೇ ಬಿಡುಗಡೆಯಾಗಿಲ್ಲವಂತೆ. ಕೆಲ ಅಧಿಕಾರಿಗಳು ಸೇರಿಕೊಂಡು ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಈ ಬಗ್ಗೆ ಸರ್ಕಾರದ ವತಿಯಿಂದ ಉನ್ನತ ಮಟ್ಟದ ತನಿಖೆ ನಡೆಸಬೇಕೆಂಬ ಕೂಗೂ ಕೇಳಿ ಬರುತ್ತಿದೆ.
ಗ್ರಾಮ ಪಂಚಾಯಿತ್ ಗೆ ಅರ್ಜಿಕೊಟ್ಟೂ ಕೊಟ್ಟು ಸುಸ್ತಾಗಿರೋ ಗ್ರಾಮದ ಕೆಲ ಮೂಲಭೂತ ಸೌಕರ್ಯ ವಂಚಿತರು ಇದೀಗ ಗ್ರಾಮೀಣಾಭಿವೃದ್ಧಿ ಸಚಿವರನ್ನ ಭೇಟಿ ಮಾಡಿ ಮನವಿ ನೀಡೋದಿಕ್ಕೆ ತೀರ್ಮಾನ ಮಾಡಿದ್ದಾರಂತೆ. ಅಷ್ಟೇ ಅಲ್ದೇ ಸರ್ಕಾರದ ಗಮನ ಸೆಳೆಯೋಕೆ ಇದೀಗ ಪ್ರತಿಭಟನೆಯ ಹಾದಿಹಿಡಿಯೋಕೂ ಮುಂದಾಗಿದ್ದಾರಂತೆ ಇಲ್ಲಿನ ಗ್ರಾಮಸ್ಥರು. ಈ ವರದಿ ಪ್ರಕಟವಾದ ಬಳಿಕವಾದರೂ ನಿದ್ದೆಯಲ್ಲಿರೋ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗ್ರಾಮದ ಸಮಸ್ಯೆಗಳಿಗೆ ಮುಕ್ತಿ ಕಾಣಿಸುವ ಕೆಲಸ ಮಾಡ್ಬೇಕಿದೆ.