ರಾಜ್ಯ ಸರ್ಕಾರದ ಬಗ್ಗೆ ಚರ್ಚಿಸುವುದು, ಕೆಸರಿನ ಮೇಲೆ ಕಲ್ಲು ಹಾಕುವುದು ಎರಡೂ ಒಂದೇ: ಕುಮಾರಸ್ವಾಮಿ

RELATED POSTS

ರಾಮನಗರ(thenewzmirror.com): ರಾಜ್ಯ ಕಾಂಗ್ರೆಸ್ ಸರಕಾರದ ಬಗ್ಗೆ ಚರ್ಚೆ ಮಾಡುವುದು, ಕೆಸರಿನ ಮೇಲೆ ಕಲ್ಲು ಹಾಕುವುದು, ಎರಡೂ ಒಂದೇ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಟೀಕಿಸಿದ್ದಾರೆ.

ಚನ್ನಪಟ್ಟಣದ ಆಕ್ಕೂರು ಗ್ರಾಮದಲ್ಲಿ ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟನೆ ನೆರವೇರಿಸಿದ ನಂತರ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು. ನಾಳೆ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡುತ್ತಿದ್ದಾರೆ, ಅದಕ್ಕೆ ನೀವೇನು ಹೇಳುತ್ತೀರಿ? ಎನ್ನುವ ಪ್ರಶ್ನೆಗೆ ತೀಕ್ಷ್ಣವಾಗಿ ಉತ್ತರಿಸಿದ ಅವರು; ಈ ಸರ್ಕಾರದ ಬಗ್ಗೆ ಹೇಳಲಿಕ್ಕೆ ಏನೂ ಇಲ್ಲ. ಎಲ್ಲಿ ನೋಡಿದರೂ ಇವರು ಮಾಡಿರುವ ಕೆಲಸಗಳ ಸಾಕ್ಷಿ ಗುಡ್ಡೆಗಳೇ ಕಾಣುತ್ತಿವೆ. ಚನ್ನಪಟ್ಟಣ ಉಪ ಚುನಾವಣೆ ಮುಗಿದು ನಾಲ್ಕು ತಿಂಗಳಾಯಿತು. ಅಕ್ಕೂರು ಕೆರೆಗೆ ನೀರು ತುಂಬಿಸಿದ್ದಾರಾ? ಎಂದು ಕೇಳಿದರು.

ಈ ಸರ್ಕಾರದ ವೈಫಲ್ಯಗಳ ಬಗ್ಗೆ ಚರ್ಚೆ ಮಾಡುವುದು ಯಾರಿಗೂ ಬೇಕಿಲ್ಲ. ಜನರಿಗೂ ಅದು ಬೇಕಿಲ್ಲ. ಬಸ್ ಪ್ರಯಾಣ ದರ ಏರಿಕೆ ಮಾಡಲಾಯಿತು. ಮನಸೋ ಇಚ್ಛೆ ಎಲ್ಲಾ ಕಡೆ ತೆರಿಗೆ, ದರ ಏರಿಕೆ ಮಾಡುತ್ತಾ ಹೋದರು. ಜನರು ಯಾರಾದರೂ ತಲೆ ಕೆಡಿಸಿಕೊಂಡರಾ? ಶೇ.40ರಿಂದ 50ರಷ್ಟು ಮೆಟ್ರೋ ಪ್ರಯಾಣ ದರ ಏರಿಕೆ ಮಾಡಿದರು. ಯಾರಾದರೂ ತಲೆ ಕೆಡಿಸಿಕೊಂಡರೆ? ಈಗ ವಿದ್ಯುತ್ ಸ್ಮಾರ್ಟ್ ಮೀಟರ್ ಹಾಕಿ ಅದರ ಬೆಲೆ ಶೇ.400ರಿಂದ 800ರಷ್ಟು ಏರಿಕೆ ಮಾಡುತ್ತಾರಂತೆ. ಪತ್ರಿಕೆಯಲ್ಲಿ ಸುದ್ದಿ ಬಂದಿದೆ. ಅದರ ಬಗ್ಗೆ ಯಾರಾದರೂ ಮಾತನಾಡುತ್ತಿದ್ದಾರೆಯೇ? ಇದರ ಯಾವುದರ ಬಗ್ಗೆಯೂ ಜನ ತಲೆಕೆಡಿಸಿಕೊಳ್ಳುತ್ತಿದ್ದಾರೆಯೇ? ಇಲ್ಲ.. ಅವರಿಗೆ ₹2000ವೇ ದೊಡ್ಡದು. ಈ ಸರ್ಕಾರದ ವೈಫಲ್ಯಗಳ ಬಗ್ಗೆ ಚರ್ಚೆ ಮಾಡಲು ಜನರಿಗೆ ಬೇಕಿಲ್ಲದೆ ಇರುವಾಗ ಪ್ರತಿಪಕ್ಷಗಳು ಏನು ಮಾಡಲು ಸಾಧ್ಯ? ಎಂದು ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.

ಈ ಸರ್ಕಾರದ ಬಗ್ಗೆ ಚರ್ಚೆ ಮಾಡಲಿಕ್ಕೆ ಏನೂ ಇಲ್ಲ. ಈ ಸರ್ಕಾರದಿಂದ ಜನರಿಗೆ ಏನು ನಿರೀಕ್ಷೆ ಇಲ್ಲ. ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಜನರ ಪರಿಸ್ಥಿತಿ ಏನಾಗಿದೆ? ರೈತರ ಸ್ಥಿತಿ ಏನಾಗಿದೆ ಎನ್ನುವುದು ಗೊತ್ತಿದೆ. ಚನ್ನಪಟ್ಟಣ, ರಾಮನಗರಕ್ಕೆ ನಾನು ಏನು ಒಳ್ಳೆಯದು ಮಾಡಿದ್ದೇನೆ ಎನ್ನುವುದು ನನ್ನ ಆತ್ಮಸಾಕ್ಷಿಗೆ ಗೊತ್ತಿದೆ. ಯಾರೋ ಬರೋಬ್ಬರನ್ನು ತೃಪ್ತಿ ಮಾಡಿಲ್ಲ. ನಾನೇನು ಎನ್ನುವುದು ಜನರಿಗೆ ಗೊತ್ತಿದೆ. ಯಾರಿಗೋ ಉತ್ತರ ಕೊಟ್ಟುಕೊಂಡು ನಾನು ಕೂರಲು ಸಾಧ್ಯವೇ ? ಕಳೆದ ಎರಡು ವರ್ಷಗಳ ಗ್ಯಾರಂಟಿ ಕಾರ್ಯಕ್ರಮದಿಂದ ಜನರು ಆರ್ಥಿಕವಾಗಿ ಸಮೃದ್ಧವಾಗಿ, ಸಂತೃಪ್ತಿಯಿಂದ ಇದ್ದಾರೆ ಎಂದು ಕೇಂದ್ರ ಸಚಿವರು ವ್ಯಂಗ್ಯವಾಡಿದರು.

ಸರ್ಕಾರದ ಗುತ್ತಿಗೆಯಲ್ಲಿ ರಾಜ್ಯ ಕಾಂಗ್ರೆಸ್ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಕೊಡುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು; ಯಾವ ಜಾತಿಗೆ ಎಷ್ಟು ಮೀಸಲಾತಿ ಕೊಡಬೇಕು ಎನ್ನುವ ಬಗ್ಗೆ ನನಗೆ ಗೊತ್ತಿಲ್ಲ. ಕೇವಲ ವೋಟಿಗಾಗಿ ಎಲ್ಲಾ ನಡೆಯುತ್ತಿದೆ. ರಾಜ್ಯದ ಜನರಿಗೆ ಅಭಿವೃದ್ಧಿ ಬೇಕು. ಯಾರಿಗೆ ಗುತ್ತಿಗೆ ಕೊಟ್ಟರೆ ಏನು ಉಪಯೋಗ? ಎಲ್ಲಿ ಗುತ್ತಿಗೆ ಕೊಟ್ಟರೂ ಅಲ್ಲಿಯೂ ಪರ್ಸಂಟೇಜ್ ವ್ಯವಹಾರ ಇದ್ದೇ ಇರುತ್ತದೆ ಎಂದು ವ್ಯಂಗ್ಯವಾಡಿದರು.

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷನಿಗೆ ನಾನು ಕೇಳಲು ಬಯಸುತ್ತೇನೆ. ನಾನು 2006 ಮತ್ತು 2018ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಪ್ರತಿ ತಿಂಗಳು ರಾಜ್ಯದ ಗುತ್ತಿಗೆದಾರರಿಗೆ ದುಡ್ಡು ಬಿಡುಗಡೆ ಆಯಾಡುತ್ತಿದ್ದೆ. ಅವತ್ತು ಯಾವ ಕಮೀಶನ್ ನಡೆಯುತ್ತಿತ್ತು? ಗುತ್ತಿಗೆದಾರರು ಹೇಳಬೇಕು. ಯಾವ ಗುತ್ತಿಗೆದಾರ ಬಂದು ನಮಗೆ ಪರ್ಸಂಟೇಜ್ ಕೊಟ್ಟಿದ್ದ? ಆಗ ಇಂಥದ್ದು ಚರ್ಚೆಯಲ್ಲಿಯೇ ಇರಲಿಲ್ಲ. ಈಗ ಇವೆಲ್ಲಾ ಚರ್ಚೆ ಆಗುತ್ತಿದೆ ಎಂದು ಅವರು ಹೇಳಿದರು.

ನಮ್ಮ ರಾಜ್ಯ ಶ್ರೀಮಂತವಾಗಿದೆ. ಅದನ್ನು ಉಳಿಸುವ ಕೆಲಸ ಜನರಿಂದಲೇ ಆಗಬೇಕು. ಕೊನೆಗೆ ಯಾವುದೋ ರಾಜ್ಯವನ್ನು ಹಿಂದಕ್ಕೆ ಹಾಕಿ ರಾಜ್ಯದಲ್ಲಿ ಕೆಟ್ಟ ಪರಿಸ್ಥಿತಿ ಸೃಷ್ಟಿ ಮಾಡುವಂಥದ್ದು ಆಗಬಾರದು ಎಂದು ಸಚಿವರು ಹೇಳಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist