ಬೆಂಗಳೂರು(www.thenewzmirror.com):ʼಗಣಿಗಾರಿಕೆ ಮತ್ತು ಮೂಲಸೌಲಭ್ಯ ವಲಯಗಳಲ್ಲಿ ಬಳಕೆಯಾಗುವ ಯಂತ್ರೋಪಕರಣ ತಯಾರಿಸುವ ಸ್ವೀಡನ್ನಿನ ಎಪಿರಾಕ್ ಕಂಪನಿಯು, ರಾಜ್ಯದಲ್ಲಿ 2030ರ ವೇಳೆಗೆ ಒಟ್ಟು ₹ 1,500 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಮಾಡಲಿದೆʼ ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಬಂಡವಾಳ ಹೂಡಿಕೆ ಆಕರ್ಷಿಸಲು ಸ್ವೀಡನ್ ಪ್ರವಾಸದಲ್ಲಿ ಇರುವ ಸಚಿವ ಪಾಟೀಲ ಅವರ ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗದ ಜೊತೆ ಬುಧವಾರ ನಡೆದ ಸಭೆಯಲ್ಲಿ, ಎಪಿರಾಕ್‌ನ ಭಾರತದ ಕಾರ್ಯಾಚರಣೆಗಳ ಮುಖ್ಯಸ್ಥ ಅರುಣ್ ಕುಮಾರ್ ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ.
ʼಬೆಂಗಳೂರಿನಲ್ಲಿರುವ 500 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿರುವ ಎಪಿರಾಕ್‌ನ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವು (ಆರ್‌ಆ್ಯಂಡ್‌ಡಿ) ಕಂಪನಿಯ ಜಾಗತಿಕ ʼ ಆರ್‌ಆ್ಯಂಡ್‌ಡಿʼ ಉತ್ಪಾದನೆಗೆ ಶೇ 25ರಷ್ಟು ಕೊಡುಗೆ ನೀಡುತ್ತಿದೆ. ಪ್ರಸಕ್ತ ಸಾಲಿನಲ್ಲಿ ₹ 500 ಕೋಟಿ ಹೂಡಿಕೆ ಮಾಡಲು ಮಾಡಲಾಗುವುದು. 2030ರ ವೇಳೆಗೆ ಹೆಚ್ಚುವರಿಯಾಗಿ ₹ 1,000 ಕೋಟಿ ಮೊತ್ತದ ಬಂಡವಾಳವನ್ನು ಹೂಡಿಕೆ ಮಾಡಲಾಗುವುದುʼ ಎಂದು ಅರುಣ್ ಕುಮಾರ್ ಅವರು ರಾಜ್ಯದ ನಿಯೋಗಕ್ಕೆ ಭರವಸೆ ನೀಡಿದ್ದಾರೆʼ ಎಂದು ಸಚಿವರು ತಿಳಿಸಿದ್ದಾರೆ.
ಆಹಾರ ಸಂಸ್ಕರಣೆ ಹಾಗೂ ಪ್ಯಾಕೇಜಿಂಗ್ ಕ್ಷೇತ್ರದ ಜಾಗತಿಕ ದಿಗ್ಗಜ ಕಂಪನಿ ಟೆಟ್ರಾ ಪ್ಯಾಕ್ ನ ಮುಖ್ಯಸ್ಥರ ಜೊತೆ ಸಚಿವರು ನಾವೀನ್ಯತೆ, ಸುಸ್ಥಿರತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಜೊತೆಗಿನ ಪಾಲುದಾರಿಕೆ ಸಾಧ್ಯತೆಗಳನ್ನು ಚರ್ಚಿಸಿದ್ದಾರೆ.
ತನ್ನ ಬಹುತೇಕ ಎಂಜಿನಿಯರಿಂಗ್ ಮತ್ತು ಡಿಸೈನ್ ಕೆಲಸಗಳನ್ನು ಭಾರತಕ್ಕೆ ವರ್ಗಾಯಿಸಲು ಉದ್ದೇಶಿಸಿರುವುದಾಗಿ ಸ್ವೀಡನ್ನಿನ ವೈಮಾಂತರಿಕ್ಷ ಹಾಗೂ ರಕ್ಷಣಾ ವಲಯದ ಕಂಪನಿ ʼಎಸ್‌ಎಎಬಿʼ ಮುಖ್ಯ ಕಾರ್ಯತಂತ್ರ ಅಧಿಕಾರಿ ಕ್ರಿಸ್ತಿಯನ್ ಹೆಡೆಲಿನ್ ಅವರು ನಿಯೋಗದ ಗಮನಕ್ಕೆ ತಂದಿದ್ದಾರೆ.
ಈ ಎರಡೂ ವಲಯಗಳಲ್ಲಿನ ರಾಜ್ಯದ ಸಾಮರ್ಥ್ಯಗಳನ್ನು ಹಾಗೂ ವಹಿವಾಟು ವಿಸ್ತರಣೆಗೆ ಇರುವ ವಿಪುಲ ಅವಕಾಶಗಳನ್ನು ಮನದಟ್ಟು ಮಾಡಿಕೊಟ್ಟ ರಾಜ್ಯದ ನಿಯೋಗದ ವಿವರಣೆಗಳಿಂದ ಪ್ರಭಾವಿತರಾದ ಹೆಡೆಲಿನ್ ಅವರು, ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುವುದನ್ನು ಗಂಭೀರವಾಗಿ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ.
ರಾಜ್ಯದಲ್ಲಿನ ಅತ್ಯಾಧುನಿಕ ಡಿಸೈನ್ ಮತ್ತು ತಯಾರಿಕಾ ವಲಯದ ಸಾಮರ್ಥ್ಯಗಳನ್ನು, ಬಂಡವಾಳ ಹೂಡಿಕೆಗೆ ಇರುವ ವಿಪುಲ ಅವಕಾಶಗಳನ್ನು ಸಚಿವರು ಸ್ವೀಡನ್ನಿನ ಬಹುರಾಷ್ಟ್ರೀಯ ಕಂಪನಿಗಳ ಮುಖ್ಯಸ್ಥರಿಗೆ ವಿವರಿಸಿದ್ದಾರೆ.