ಬೆಂಗಳೂರು, (www.thenewzmirror.com);
ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳನ್ನ ಜಾರಿಗೊಳಿಸೋಕೆ ಈಗಾಗಲೇ ಸಿದ್ಧತೆ ಆರಂಭವಾಗಿದೆ. ಇದಕ್ಕೆ ಸಂಬಂಧಪಟ್ಟ ಮಾರ್ಗಸೂಚಿಗಳನ್ನೂ ಸಂಬಂಧಪಟ್ಟ ಇಲಾಖೆಗಳು ಹೊರಡಿಸಿವೆ.
ಜನಸಾಮಾನ್ಯರಲ್ಲಿ ಇದು ಗೊಂದಲ ಮೂಡಿಸಿದ್ದು, ಯಾವ ರೀತಿ ಅರ್ಜಿ ಸಲ್ಲಿಸಬೇಕು., ಯಾರಿಗೆಲ್ಲಾ ಐದು ಗ್ಯಾರಂಟಿಗಳು ಅನ್ವಯವಾಗುತ್ತೆ.? ಇದರ ಮಾನದಂಡಗಳೇನು ಅನ್ನುವ ಗೊಂದಲವನ್ನ ಬಗೆಹರಿಸುವ ಕೆಲಸ ನಿಮ್ಮ thenewzmirror ದೂರ ಮಾಡುವ ಕೆಲಸ ಮಾಡುತ್ತಿದೆ.
ಹಾಗಿದ್ರೆ ಐದು ಗ್ಯಾರಂಟಿಗಳ ಷರತ್ತುಗಳೇನು.? ಅರ್ಜಿ ಸಲ್ಲಿಕೆ ಹೇಗೆ.? ಎಲ್ಲಿ ಅರ್ಜಿ ಸಲ್ಲಿಸಬೇಕು ಅನ್ನೋದ್ರ ಡಿಟೇಲ್ಸ್ ಇಲ್ಲಿದೆ.
ಯೋಜನೆ 1
ಗೃಹ ಜ್ಯೋತಿ
ಚುನಾವಣೆಗೂ ಮೊದಲು ಪ್ರತಿ ಮನೆಗೂ 200 ಯೂನಿಟ್ ವರೆಗೂ ವಿದ್ಯುತ್ ಉಚಿತ ಕೊಡ್ತೀವಿ ಅಂತ ಕಾಂಗ್ರೆಸ್ ಹೇಳಿತ್ತು. ಆದರೆ ಅಧಿಕಾರಕ್ಕೆ ಬಂದ ನಂತರ ಒಂದೊಂದೇ ಕಂಡೀಷನ್ ಹಾಕಿದೆ. ಆ ಕಂಡೀಷನ್ ಆಧಾರದ ಮೇಲೆ ಮಾರ್ಗಸೂಚಿ ಪ್ರಕಟಿಸಿದೆ. ಅದರ ಪ್ರಕಾರ, ಈ ಯೋಜನೆಯಡಿ ಬಳಕೆದಾರರ ಕಳೆದ 12 ತಿಂಗಳ ವಿದ್ಯುತ್ ಬಳಕೆಯ ಸರಾಸರಿಯ ಮೇಲಿನ ಶೇ.10 ರಷ್ಟು ಉಚಿತ ವಿದ್ಯುತ್ ಉಚಿತ ನೀಡಲಾಗುತ್ತೆ. ಜುಲೈ 1 ರಿಂದ ಬಳಕೆಯಾಗುವ ವಿದ್ಯುತ್ ಗೆ ಈ ಯೋಜನೆ ಅನ್ವಯವಾಗಲಿದ್ದು, ಅಲ್ಲಿಯ ವರೆಗಿನ ವಿದ್ಯುತ್ ಬಳಕೆಗೆ ಸಂಬಂಧಿಸಿದ ಬಿಲ್ಲನ್ನು ಬಳಕೆದಾರರು ಪಾವತಿಸಬೇಕು. ಆಗಸ್ಟ್ ತಿಂಗಳಿನಿಂದ ಫಲಾನುಭವಿಗಳು ವಿದ್ಯುತ್ ಬಿಲ್ ಕಟ್ಟಬೇಕಿಲ್ಲ . ಒಂದು ವೇಳೆ ಸರಾಸರಿ ಆಧಾರದ ಮೇಲೆ 200 ಯೂನಿಟ್ ಗೂ ಹೆಚ್ಚು ವಿದ್ಯುತ್ ಬಳಕೆ ಮಾಡಿದ್ದರೆ ಸಂಪೂರ್ಣ ಬಿಲ್ ಕಟ್ಟಬೇಕಾಗುತ್ತೆ.
ಅರ್ಜಿ ಸಲ್ಲಿಕೆ ಹೇಗೆ.?
ಸೇವಾಸಿಂಧು ಪೋರ್ಟಲ್ ನಲ್ಲಿ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಕಂಪ್ಯೂಟರ್, ಮೊಬೈಲ್ ನಿಂದ ಅರ್ಜಿ ಸಲ್ಲಿಸಬಹುದಾಗಿದೆ. ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಸೆಂಟರ್ ಗಳಲ್ಲೂ ಅವಕಾಶ ಕಲ್ಪಿಸಲಾಗಿದೆ. ಜೂನ್ 15ರಿಂದ ಅರ್ಜಿ ಪ್ರಾರಂಭ ಆರಂಭವಾಗಲಿದೆ.
ಬಾಡಿಗೆದಾರರ ಕಥೆ ಏನು.?
ವಿದ್ಯುತ್ ಬಿಲ್ ನಲ್ಲಿ ನಮೂದಿಸಲಾಗಿರುವ ಗ್ರಾರಕರ ಸಂಖ್ಯೆ, ಖಾತೆ ಸಂಖ್ಯೆ, ಬಾಡಿಗೆ, ಭೋಗ್ಯದ ಕರಾರು ಪತ್ರ ಸಲ್ಲಿಸುವುದು. ಸಂಬಂಧಿತ ವಿಳಾಸವನ್ನು ಸೂಚಿಸುವ ವೋಟರ್ ಐಡಿ ಜೊತೆಗೆ, ಆಧಾರ್ ಅನ್ನು ಸಲ್ಲಿಸುವ ಮೂಲಕ ಪಡೆಯಬಹುದಾಗಿದೆ.
ಯೋಜನೆ 2
ಶಕ್ತಿ ಯೋಜನೆ
ಶಕ್ತಿ ಯೋಜನೆಯಡಿ ರಾಜ್ಯದ ಎಲ್ಲಾ ಮಹಿಳೆಯರಿಗೆ ಸರ್ಕಾರಿಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಇದರ ಬೆನ್ನಲ್ಲೇ ಸಾರಿಗೆ ಇಲಾಖೆ ಇದಕ್ಕೆ ಸಂಬಂಧಪಟ್ಟ ಮಾರ್ಗಸೂಚಿ ಹೊರಡಿಸಿದೆ. ಅದರ ಪ್ರಕಾರ, ರಾಜ್ಯದ ಎಲ್ಲಾ ಮಹಿಳೆಯರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಾಹನಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ಜೂನ್ 11 ರಂದು ಸರ್ಕಾರ ಯೋಜನೆಗೆ ಸಿಎಂ ಪ್ರಾಯೋಗಿಕವಾಗಿ ಮಹಿಳೆಯೊಬ್ಬರಿಗೆ ಟಿಕೆಟ್ ನೀಡುವ ಮೂಲಕ ಚಾಲನೆ ನೀಡಲಿದ್ದಾರೆ.
ಹೀಗಿರಲಿದೆ ಯೋಜನೆ
– ಕರ್ನಾಟಕ ರಾಜ್ಯದ ಮಹಿಳೆಯರಿಗೆ ( ವಿದ್ಯಾರ್ಥಿನಿಯರು ಸೇರಿದಂತೆ ) ಉಚಿತ ಪ್ರಯಾಣ
– ಮಹಿಳಾ ಪ್ರಯಾಣಿಕರ ಪೈಕಿ 6 ವರ್ಷದಿಂದ 12 ವರ್ಷದವರೆಗಿನ ಬಾಲಕಿಯರು ಮತ್ತು ಲಿಂಗತ್ವ ಅಲ್ಪ ಸಂಖ್ಯಾತರು ಸಹ ಒಳಗೊಂಡಿರುತ್ತಾರೆ
– KSRTC ಯ ನಗರ ಸಾರಿಗೆ, ಸಾಮಾನ್ಯ ಮತ್ತು ವೇಗದೂತ (ತಡೆರಹಿತ ಸಾರಿಗೆಗಳು ಒಳಗೊಂಡಂತೆ ) ಸಾರಿಗೆಗಳಲ್ಲಿ ಮಾತ್ರ ಮಹಿಳೆಯರು ರಾಜ್ಯಾಧ್ಯಂತ ಉಚಿತವಾಗಿ ಪ್ರಯಾಣಿಸಬಹುದು
– ಐಷಾರಾಮಿ ಬಸ್ಸುಗಳಾದ ರಾಜಹಂಸ, ನಾನ್ ಎಸಿ ಸ್ಲೀಪರ್, ಎಸಿ ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಅಂಬಾರಿ, ಅಂಬಾರಿ ಡ್ರೀಮ್ ಕ್ಲಾಸ್, ಅಂಬಾರಿ ಉತ್ಸವ್, ಫ್ಲೈ ಬಸ್, ಇವಿ ಪ್ಲಸ್ ಸಾರಿಗಗೆಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ
– ಮಹಿಳಾ ಪ್ರಯಾಣಿಕರಿಗೆ ಪ್ರಯಾಣ ದೂರದ ಯಾವುದೇ ಮಿತಿ ಇರುವುದಿಲ್ಲ. ಈ ಪ್ರಯಾಣ ಸೌಲಭ್ಯವು ರಾಜ್ಯದ ಒಳಗೆ ಪ್ರಯಾಣಿಸಲು ಮಾತ್ರ ಅನ್ವಯ
– ಶಕ್ತಿ ಯೋಜನೆಯ ದೈನಿಕ ಪಾಸು, ಮಾಸಿಕ ಪಾಸು, ಸಾಂದರ್ಭಿಕ ಒಪ್ಪಂದ ಹಾಗೂ ಖಾಯಂ ಗುತ್ತಿಗೆ ಪ್ಯಾಕೇಜ್ ಮುಂತಾದ ಸೇವೆಗಳಿಗೆ ಅನ್ವಯಿಸುವುದಿಲ್ಲ
ಉಚಿತ ಪ್ರಯಾಣಕ್ಕೆ ಈ ದಾಖಲೆ ಕಡ್ಡಾಯ
– ಆಧಾರ್ ಕಾರ್ಡ್
– ಚುನಾವಮಾ ಆಯೋಗ ವಿಚತರಿಸುವ ಮತದಾರರ ಗುರುತಿನ ಚೀಟಿ
– ಚಾಲನಾ ಪರವಾನಗಿ ಪತ್ರ(DL)
– ವಾಸಸ್ಥಳ ನಮೂದಿಸಿರುವ ಭಾರತ ಸರ್ಕಾರದ ಇಲಾಖೆಗಳು, ಸಾರ್ವಜನಿಕ ವಲಯದ ಉದ್ದಿಮೆ, ಸಂಸ್ಥೆಗಳು ವಿತರಿಸುವ ಗುರುತಿನ ಚೀಟಿ
-ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ನಿರ್ದೇಶನಾಲಯದವರು ವಿತರಿಸಿರುವ ಗುರುತಿನ ಚೀಟಿ.
ಅರ್ಜಿ ಸಲ್ಲಿಕೆ ಹೇಗೆ.?
ಸೇವಾ ಸಿಂಧು ಮೂಲಕ ಅರ್ಜಿಗಳನ್ನು ಪಡೆದು, ಶಕ್ತಿ ಸ್ಮಾರ್ಟ್ ಕಾರ್ಡ್ ಗಳನ್ನು ವಿತರಿಸುವವರೆಗೆ ಮೇಲೆ ತಿಳಿಸಿರುವ ಗುರುತಿನ ಚೀಟಿಗಳನ್ನು ಪರಿಗಣಿಸಿ, ಶೂನ್ಯ ಮೊತ್ತದ ಮಹಿಳೆಯರ ಉಚಿತ ಟಿಕೆಟ್ ಗಳನ್ನು ವಿತರಿಸಲು ಸೂಚಿಸಿದೆ.
ಯೋಜನೆ 3
ಗೃಹ ಲಕ್ಷ್ಮಿ
ಕರ್ನಾಟಕ ರಾಜ್ಯದ ಕುಟುಂಬದಲ್ಲಿನ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2000 ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆಗೆ ಆಡಳಿತಾತ್ಮಕ ಅನುಮೋದನೆಯನ್ನ ಸರ್ಕಾರ ನೀಡಿದೆ.
ಅದರ ಪ್ರಕಾರ ಕುಟುಂಬದ ಯಜಮಾನಿಗೆ ಈಣ ಸಂದಾಯವಾಗಲಿದೆ. ಪ್ರತಿ ತಿಂಗಳು 2000 ರೂ ಪಡೆಯುವ ಗೃಹಲಕ್ಷ್ಮೀ ಈ ಕೆಳಗಿನ ಮಾನದಂಡ ಪಾಲನೆ ಮಾಡಿದರೆ ಮಾತ್ರ ಹಣ ಸಿಗಲಿದೆ.
– ಬಿಪಿಎಲ್, ಎಪಿಎಲ್ ಕಾರ್ಡ್ ನಲ್ಲಿ ಕುಟುಂಬದ ಯಜಮಾನಿ ಎಂದು ನಮೂದಾಗಿರಬೇಕು
– ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದಲ್ಲಿ, ಒಂದು ಮಹಿಳೆಗೆ ಮಾತ್ರ ಯೋಜನೆ ಅನ್ವಯ
ಜೂನ್ 15 ದ ಒಂದು ತಿಂಗಳು ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಅದಾದ ನಂತರ ಅರ್ಜಿಗಳನ್ನ ಪರಿಶೀಲನೆ ಮಾಡಲಾಗುತ್ತೆ. ಎಲ್ಲಾ ದಾಖಲೆಗಳು ಸರಿಯಾಗಿದ್ದರೆ ಆಗಸ್ಟ್ 15 ರಿಂದ ಸಂಬಂಧದ ಪಟ್ಟ ಯಜಮಾನಿಯ ಅಕೌಂಟ್ ಗೆ 2000 ರೂ ಸಂದಾಯವಾಗಲಿದೆ.
ಸೇವಾ ಸಿಂಧು ಪೋರ್ಟಲ್ ಮೂಲಕವಾದರೂ ಇಲ್ಲ ಭೌತಿಕವಾಗಿಯಾದರೂ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿದಾರರು ಸಲ್ಲಿಸುವ ಪೂರ್ಣ ಪ್ರಮಾಣ ಅರ್ಜಿಯಲ್ಲಿನ ಸ್ವಯಂ ಘೋಷಣೆ ಆಧಾರದ ಮೇಲೆ ಮಂಜೂರಾತಿ ನೀಡುವುದು.ತಪ್ಪು ಮಾಹಿತಿ ನೀಡಿ ಸೌಲಭ್ಯ ಪಡೆದಿರುವುದು ಕಂಡು ಬಂದಲ್ಲಿ, ಈಗಾಗಲೇ ಪಾವತಿಸಲಾಗಿರುವ ಹಣವನ್ನು ಅರ್ಜಿದಾರರಿಂದ ವಸೂಲು ಮಾಡವುದು ಮತ್ತು ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ಯೋಜನೆಯ ಸೌಲಭ್ಯ ಪಡೆಯಲು ಫಲಾನುಭವಿಯ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಗಳನ್ನು ಜೋಡನೆ ಮಾಡುವುದು.
ಯಾರಿಗೆಲ್ಲಾ ಸಿಗೋದಿಲ್ಲ
– ಈ ಯೋಜನೆಗೆ ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಅರ್ಹರಾಗಿರುವುದಿಲ್ಲ.
– ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಜಿಎಸ್ಟಿ ರಿಟರ್ನ್ ಸಲ್ಲಿಸುವವರಾಗಿದ್ದಲ್ಲಿ, ಗೃಹ ಲಕ್ಷ್ಮೀ ಯೋಜನೆಗೆ ಅರ್ಹರಾಗಿರುವುದಿಲ್ಲ.
ಯೋಜನೆ 4
ಅನ್ನ ಭಾಗ್ಯ
ಕಾಂಗ್ರೆಸ್ ನ ಮತ್ತೊಂದು ಗ್ಯಾರಂಟಿ ಪೈಕಿ ಅನ್ನಭಾಗ್ಯ. ಬಿಪಿಎಲ್ ಕಾರ್ಡ್ ದಾರರಿಗೆ 10 ಕೆಜಿ ಅಕ್ಕಿ ನೀಡುವ ಯೋಜನೆ. ಹಿಂದಿನ ತಮ್ಮ ಸರ್ಕಾರದ ಅವಧಿಯಲ್ಲಿ ನೀಡಲಾಗುತ್ತಿದ್ದ 7 ಕೆಜಿ ಆಹಾರ ಧಾನ್ಯವನ್ನು ಬಿಜೆಪಿ ಸರ್ಕಾರ 5 ಕೆಜಿಗೆ ಇಳಿಸಿತ್ತು. ಇದೀಗ ಅದರ ಪ್ರಮಾಣವನ್ನ 10 ಕೆಜಿಗೆ ಹೆಚ್ಚಿಸಲಾಗುವುದು. ಜುಲೈ 1 ರಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು. ಅಂತ್ಯೋದಯ ಕಾರ್ಡುದಾರರು ಹಾಗೂ ಬಿಪಿಎಲ್ ಕಾರ್ಡುದಾರರಿಗೆ ಈ ಯೋಜನೆ ಸೌಲಭ್ಯ ದೊರೆಯಲಿದೆ.
ಯೋಜನೆ 5
ಯುವನಿಧಿ
ಐದನೇ ಹಾಗೂ ಕೊನೆಯ ಗ್ಯಾರಂಟಿ ಯೋಜನೆ ಅಂದರೆ ಅದು ಯುವನಿಧಿ. 2022-23ನೇ ಶೈಕ್ಷಣಿಕ ವರ್ಷದಲ್ಲಿ ವೃತ್ತಿಪರ ಕೋರ್ಸುಗಳೂ ಸೇರಿದಂತೆ ಎಲ್ಲಾ ಪದವೀಧರ ಯುವಕ-ಯುವತಿಯರು, ಡಿಪ್ಲೊಮಾ ಹೊಂದಿದವರಿಗೆ ಈ ಯೋಜನೆ ಅನ್ವಯವಾಗುತ್ತದೆ.
ಪದವಿ ಪಡೆದು 180 ದಿನಗಳಾದರೂ ಉದ್ಯೋಗ ದೊರೆಯದ ಪದವೀಧರರಿಗೆ 24 ತಿಂಗಳ ಅವಧಿಗೆ ಮಾಸಿಕ 3000 ರೂ. ಹಾಗೂ ಡಿಪ್ಲೊಮಾದಾರರಿಗೆ ಮಾಸಿಕ 1500 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು.
ಹೀಗಿರಲಿದೆ ಯುವನಿಧಿ
– ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು
– ಪದವಿ, ಡಿಪ್ಲೊಮ 2023ರ ವರ್ಷದಲ್ಲಿ ಪೂರೈಸಿರಬೇಕು
– ಶಿಕ್ಷಣ ಪೂರೈಸಿ 6 ತಿಂಗಳ ವರೆಗೆ ಉದ್ಯೋಗ ಸಿಗದಿದ್ದರೆ ಭತ್ಯೆ
– ಕನ್ನಡಿಗರು ಮಾತ್ರ ಯುವನಿಧಿ ಗ್ಯಾರೆಂಟಿ ಯೋಜನೆಗೆ ಅರ್ಹರು
– ಪದವಿ ಪೂರ್ಣಗೊಂಡ 6 ತಿಂಗಳ ಬಳಿಕ ಅರ್ಜಿ ಸಲ್ಲಿಸಬಹುದು
– 2 ವರ್ಷದೊಳಗೆ ಉದ್ಯೋಗ ಸಿಕ್ಕಲ್ಲಿ ಭತ್ಯೆ ಪಾವತಿ ಸ್ಥಗಿತವಾಗುತ್ತೆ
– ಉದ್ಯೋಗದ ಬಗ್ಗೆ ತಪ್ಪು ಮಾಹಿತಿ ನೀಡಿದ್ರೆ, ಮಾಹಿತಿ ನೀಡದಿದ್ರೆ ದಂಡ
– ಪದವೀಧರರಿಗೆ ತಿಂಗಳಿಗೆ ₹3,000, ಡಿಪ್ಲೊಮಾದಾರರಿಗೆ ₹1,500
– 24 ತಿಂಗಳ ಅವಧಿಗೆ ಯುವನಿಧಿ ಗ್ಯಾರೆಂಟಿಯಡಿ ಭತ್ಯೆ ನೀಡಿಕೆ
– ಸರ್ಕಾರಿ, ಖಾಸಗಿ ವಲಯದಲ್ಲಿ ಉದ್ಯೋಗ ಪಡೆದವರಿಗೆ ಭತ್ಯೆ ಇಲ್ಲ