ಬೆಂಗಳೂರು, (www.thenewzmirror.com) ;
ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಿರುವ ಬೆಂಗಳೂರು ವಿಶ್ವವಿದ್ಯಾಲಯ ಮತ್ತೊಂದು ಹಿರಿಮೆಗೆ ಪಾತ್ರವಾಗಿದೆ. ರಾಷ್ಟ್ರೀಯ ಸಂಸ್ಥೆ ಶ್ರೇಯಾಂಕ ಚೌಕಟ್ಟು National Institute Ranking Framework (NIRF) ಶ್ರೇಯಾಂಕದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಅಗ್ರ 81 ಸ್ಥಾನ ಹಾಗೂ ರಾಜ್ಯ ವಿಶ್ವವಿದ್ಯಾಲಯ ಶ್ರೇಯಾಂಕದಲ್ಲಿ 24 ನೇ ಸ್ಥಾನ ಪಡೆದಿದೆ.
ವಿದ್ಯಾರ್ಥಿ ಸ್ನೇಹಿ ವಾತವರಣ,ಅನುಭವಿ ಶಿಕ್ಷಕ ವರ್ಗ, ಅತ್ಯುತ್ತಮ ಪಠ್ಯಧಾರಿತ ಶಿಕ್ಷಣ, ತಂತ್ರಜ್ಞಾನಕ್ಕೆ ಆದ್ಯತೆ, ಕ್ರಿಯಾಶೀಲತೆ, ನಾವೀನ್ಯತೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ವಾತವರಣ ಒದಗಿಸಿರುವ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಈ ಶ್ರೇಯಾಂಕ ದಕ್ಕಿರುವುದು ವಿವಿ ಬದ್ಧತೆ ಮತ್ತು ಪರಿಶ್ರಮಕ್ಕೆ ಸಾಕ್ಷಿಯಾಗಿದೆ.
ವಿಶ್ವದಲ್ಲೇ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಅತ್ಯುತ್ತಮ ವಿವಿ ಎಂದು ಗುರುತಿಸಿಕೊಂಡಿದ್ದು ಇತ್ತೀಚಿಗಷ್ಟೇ NAAC A++ ಮತ್ತು ಪಿಎಂ – ಉಷಾ ಯೋಜನೆಯಡಿ 100 ಕೋಟಿ ಅನುದಾನವನ್ನು ಪಡೆದುಕೊಂಡಿತ್ತು. ಮುಂದುವರೆದ ಭಾಗವಾಗಿ NIRF ಶ್ರೇಯಾಂಕದಲ್ಲಿ ಅಗ್ರ ಸ್ಥಾನ ಪಡೆಯುವ ಮೂಲಕ ಬೆಂಗಳೂರು ವಿವಿ ಶೈಕ್ಷಣಿಕ ಸಾಧನೆಯ ಪರಂಪರೆಯನ್ನು ಮುಂದುವರೆಸಿದೆ.
ವಿವಿಯ ಸಾಧನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ವಿವಿ ಕುಲಪತಿ ಕರ್ನಲ್ ಡಾ.ಜಯಕರ ಎಸ್ ಎಂ, NIRF ಶ್ರೇಯಾಂಕದಲ್ಲಿ ಸ್ಥಾನ ಪಡೆದಿರುವುದು ವಿಶ್ವವಿದ್ಯಾಲಯಕ್ಕೆ ಹೆಮ್ಮೆಯ ವಿಷಯ. ಶಿಕ್ಷಣ, ಸಂಶೋಧನೆ, ತಂತ್ರಜ್ಞಾನ, ಮೂಲಭೂತ ಸೌಕರ್ಯ ಮತ್ತು ವಿಶ್ವವಿದ್ಯಾಲಯದ ಸಮಗ್ರ ಅಭಿವೃದ್ಧಿಗೆ ಮತ್ತಷ್ಟು ಬಲ ಬಂದಿದೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ವಿಶ್ವವಿದ್ಯಾಲಯ ಮತ್ತಷ್ಟು ಶ್ರಮಿಸಲಿದೆ. ಈ ಸಾಧನೆಗೆ ಕಾರಣಕರ್ತರಾದ ಸರ್ವರಿಗೂ ಧನ್ಯವಾದ ತಿಳಿಸಿದ್ದಾರೆ.