ಬೆಂಗಳೂರು, (www.thenewzmirror.com) :
ನಾಗರಿಕ ಸೇವಾ ಪರೀಕ್ಷೆ ಬರೆದು ಉನ್ನತ ಹುದ್ದೆಗೇರಲು ಬಯಸುವ ಅವಕಾಶ ವಂಚಿತ ಪ್ರತಿಭಾನ್ವಿತ ಯುವತಿಯರಿಗೆ ರಾಹ್ ಅಕಾಡೆಮಿ ಉಚಿತ ವಸತಿ ಸಹಿತ ಅಧ್ಯಯನ ಕೇಂದ್ರ ‘ರಾಹ್ ಸೂಪರ್ 30’ ಅನ್ನು ಬೆಂಗಳೂರಿನಲ್ಲಿ ಉದ್ಘಾಟಿಸಲಾಗಿದೆ.
ಕನಕಪುರ ರಸ್ತೆಯ ಮ್ಯಾಂಗೋ ಗಾರ್ಡನ್ ಲೇಔಟ್ ನಲ್ಲಿ ಸ್ಥಾಪಿಸಿರುವ ರಾಹ್ ಸೂಪರ್ 30 ಅಧ್ಯಯನ ಕೇಂದ್ರವನ್ನು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ಮೌಲಾನಾ ಡಾ. ಮಸೂದ್ ಇಮ್ರಾನ್ ರಶಾದಿ, ರೆವರೆಂಡ್ ಫಾದರ್ ಫ್ರಾನ್ಸಿಸ್ ಅಲ್ಮೆಡಾ ಹಾಗೂ ರಾಹ್ ಅಕಾಡೆಮಿ ಟ್ರಸ್ಟಿ ಹುಸೇನ್ ಉದ್ಘಾಟಿಸಿದರು.
‘ರಾಹ್ ಅಕಾಡೆಮಿ’ ಮೂಲಕ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ರಾಜ್ಯದ 30 ಪ್ರತಿಭಾನ್ವಿತ ಯುವತಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಜತೆಗೆ, ಗ್ರಂಥಾಲಯದ ವ್ಯವಸ್ಥೆ, ಪರಿಣಿತರ ಮಾರ್ಗದರ್ಶನ ಸೇರಿದಂತೆ ಅಧ್ಯಯನಕ್ಕೆ ಅಗತ್ಯ ಮೂಲ ಸೌಕರ್ಯ ಒದಗಿಸಲಾಗುತ್ತದೆ.


ರಾಹ್ ಸೂಪರ್ 30 ಅಧ್ಯಯನ ಕೇಂದ್ರ ಉದ್ಘಾಟಿಸಿದ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಮಾತನಾಡಿ, “ಶಿಕ್ಷಣವನ್ನು ಹಣ ಮಾಡುವ ಸಂಸ್ಥೆಯಾಗಿ ನೋಡದೇ ಸೇವಾ ಮನೋಭಾವದಿಂದ ಉಚಿತ ವಸತಿ- ಶಿಕ್ಷಣ ಒದಗಿಸುತ್ತಿರುವುದು ಅನನ್ಯ. ಅದರಲ್ಲೂ ನಾಗರಿಕ ಸೇವಾ ಪರೀಕ್ಷೆ ಬರೆಯಲು ಆಸಕ್ತ ಬಡ ಹೆಣ್ಣು ಮಕ್ಕಳಿಗೆ ರಾಹ್ ಅಕಾಡೆಮಿ ಈ ಅನುಕೂಲ ಮಾಡಿಕೊಟ್ಟಿರುವುದು ಮಹಿಳಾ ದಿನಾಚರಣೆಯ ಉಡುಗೊರೆ,” ಎಂದರು.
“ಇದುವರೆಗೆ ಉತ್ತರ ಪ್ರದೇಶದಿಂದ ಅತಿ ಹೆಚ್ಚು ಸಂಖ್ಯೆಯ ಐಎಎಸ್ ಅಧಿಕಾರಿಗಳಿದ್ದರೆ, ಕರ್ನಾಟಕದಿಂದ ಅತಿ ಕಡಿಮೆ ಸಂಖ್ಯೆಯ ಐಎಎಸ್ ಅಧಿಕಾರಿಗಳಿದ್ದರು. ಇಂಥ ಕಾರ್ಯಕ್ರಮಗಳ ಮೂಲಕ ಈ ಸಂಖ್ಯೆ ಬೆಳೆಯುವುದರಲ್ಲಿ ಸಂದೇಹವಿಲ್ಲ,” ಎಂದು ಅಭಿಪ್ರಾಯಪಟ್ಟರು.
ಜಾಮಿಯಾ ಮಸ್ಜಿದ್ ನ ಮೌಲಾನಾ ಡಾ. ಮಸೂದ್ ಇಮ್ರಾನ್ ರಶಾದಿ ಮಾತನಾಡಿ, “ಬೇಟಿ ಪಡಾವೊ ಬೇಟಿ ಬಚಾವ್ ವಾಕ್ಯವನ್ನು ಹುಸೇನ್ ಅವರು ಸಾಕಾರಗೊಳಿದ್ದಾರೆ. ಬದುಕಿನ ದಾರಿ ತೋರುವ ‘ರಾಹ್’ ನಲ್ಲಿ ಅಭ್ಯಾಸ ಮಾಡಿದವರು, ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡ ಅಧಿಕಾರಿಗಳಾಗುತ್ತಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು
ಕರ್ನಾಟಕ ಶೈಕ್ಷಣಿಕ ವಿಭಾಗೀಯ ಆಯೋಗದ ಕಾರ್ಯದರ್ಶಿ ರೆವರೆಂಡ್ ಫಾದರ್ ಫ್ರಾನ್ಸಿಸ್ ಅಲ್ಮೆಡಾ ಮಾತನಾಡಿ, “ಸ್ವಾರ್ಥವಿಲ್ಲದೇ ಶಿಕ್ಷಣ ನೀಡುವುದೇ ನಿಜವಾದ ವಿದ್ಯಾದಾನ. ಹುಸೇನ್ ಅಂಥ ಕೆಲಸ ಮಾಡುತ್ತಿದ್ದಾರೆ. ಅವರ ಪ್ರಯತ್ನ ಕ್ಕೆ ಯಶಸ್ಸು ದೊರೆಯುವುದು ಖಂಡಿತ,” ಎಂದು ಹಾರೈಸಿದರು.
ರಾಹ್ ಅಕಾಡೆಮಿ ಅಧ್ಯಕ್ಷರಾದ ರೆಹಾನಾ ಶಮೀಮ್, ಇನ್ ಸೈಟ್ ಅಕಾಡೆಮಿ ಪ್ರಾಂಶುಪಾಲರಾದ ಮೇ ರುತ್ ಡಿ’ಸೋಜಾ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.