ಜೆಡಿಎಸ್-ಬಿಜೆಪಿ ಮೈತ್ರಿ ಮುರಿಯಲು ಕಾಂಗ್ರೆಸ್ ಷಡ್ಯಂತ್ರ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ!

ಬೆಂಗಳೂರು(www.thenewzmirror.com): ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ರಾಜಕೀಯ ಬೆಳವಣಿಗೆಗಳ ನಡುವೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವಿರುದ್ಧ ಕೇಂದ್ರ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಗಂಭೀರ ವಾಗ್ದಾಳಿ ನಡೆಸಿದ್ದಾರೆ. 

RELATED POSTS

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ವಿಧಾನಸಭೆ ಕ್ಷೇತ್ರದ ತಗ್ಗಹಳ್ಳಿ ಗ್ರಾಮದಲ್ಲಿ ಸಿಎಸ್ಆರ್ ನಿಧಿ ಅನುದಾನದಿಂದ ನೂತನವಾಗಿ ನಿರ್ಮಾಣಗೊಂಡಿರುವ ಶಾಲಾ ಕೊಠಡಿಗಳನ್ನು ಉದ್ಘಾಟಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು,ಕರ್ನಾಟಕದಲ್ಲಿ ಸದ್ಯ ಬಲಿಷ್ಠವಾಗಿ ನೆಲೆಸಿರುವ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟವನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ, ಅದರೊಳಗೆ ಬಿರುಕು ಮೂಡಿಸಲು ಕಾಂಗ್ರೆಸ್ ನಾಯಕರು ವ್ಯವಸ್ಥಿತ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಅವರು ನೇರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರ ಇತ್ತೀಚಿನ ನಡೆ ಸಂಪೂರ್ಣ ವಿಕೃತತೆಯಿಂದ ಕೂಡಿದೆ ಎಂದು ಕಿಡಿಕಾರಿದ್ದಾರೆ.

ರಾಜ್ಯಸಭೆ ಚುನಾವಣೆಯ ಬೆನ್ನಲ್ಲೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುರಿತು ಕಾಂಗ್ರೆಸ್ ನಾಯಕರಿಗೆ ಇದ್ದಕ್ಕಿದ್ದಂತೆ ಎಲ್ಲಿಲ್ಲದ ಅನುಕಂಪ ಉಕ್ಕಿ ಬರುತ್ತಿರುವುದರ ಹಿಂದೆ ದೊಡ್ಡ ರಾಜಕೀಯ ತಂತ್ರ ಅಡಗಿದೆ ಎಂದು ಕುಮಾರಸ್ವಾಮಿ ಕಟುವಾಗಿ ಟೀಕಿಸಿದರು.

ದೇವೇಗೌಡರ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಲು ಯತ್ನ:

“ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಗೆ ತಮಗೆ ಮತ್ತೊಮ್ಮೆ ಅವಕಾಶ ನೀಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಯಾವುದೇ ರಾಜಕೀಯ ಪಕ್ಷದ ಮುಂದೆ ಅರ್ಜಿ ಹಿಡಿದು ಹೋಗಿರಲಿಲ್ಲ ಅಥವಾ ಬೇಡಿಕೆಯನ್ನೂ ಇಟ್ಟಿರಲಿಲ್ಲ. ಆದರೂ ಕಾಂಗ್ರೆಸ್ ನಾಯಕರು ಅವರ ಹೆಸರನ್ನು ಮುನ್ನೆಲೆಗೆ ತಂದು ಮೈತ್ರಿಕೂಟದ ನಾಯಕರ ನಡುವೆ ಗೊಂದಲ ಮೂಡಿಸಲು ಮತ್ತು ವಿಷಬೀಜ ಬಿತ್ತಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ತಮ್ಮ ಇಡೀ ರಾಜಕೀಯ ಜೀವನದುದ್ದಕ್ಕೂ ದೇವೇಗೌಡರನ್ನು ಅತ್ಯಂತ ಕ್ರೂರವಾಗಿ ಕಾಡಿದ ಮತ್ತು ಅವರ ಪಕ್ಷವನ್ನು ಇಬ್ಬಾಗ ಮಾಡಲು ಸರಣಿ ಸಂಚು ರೂಪಿಸಿದ್ದ ಇತಿಹಾಸ ಇದೇ ಕಾಂಗ್ರೆಸ್ ನಾಯಕರಿಗಿದೆ. ಇಂತಹ ಇತಿಹಾಸ ಇಟ್ಟುಕೊಂಡಿರುವ ಕಾಂಗ್ರೆಸ್ಸಿಗರು ಈಗ ದೇವೇಗೌಡರ ಬಗ್ಗೆ ತೋರುತ್ತಿರುವ ಕೃತಕ ಕಾಳಜಿ ಅತ್ಯಂತ ಹಾಸ್ಯಾಸ್ಪದ ಹಾಗೂ ನಾಚಿಕೆಗೇಡಿನ ಸಂಗತಿ” ಎಂದು ಆಕ್ರೋಶ ಹೊರಹಾಕಿದರು.

ಮುಖ್ಯಮಂತ್ರಿಯವರ ನಡೆಗೆ ತೀಕ್ಷ್ಣ ತಿರುಗೇಟು:

ತಮ್ಮ ನಿವಾಸಕ್ಕೆ ರಾಜ್ಯದ ಮುಖ್ಯಮಂತ್ರಿಗಳು ಭೇಟಿ ನೀಡಲಿದ್ದಾರೆ ಮತ್ತು ಆಡಳಿತಾತ್ಮಕ ವಿಷಯಗಳ ಕುರಿತು ಕುಮಾರಸ್ವಾಮಿ ಅವರ ಸಲಹೆ ಪಡೆಯಲಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಕೇಂದ್ರ ಸಚಿವರು ಅತ್ಯಂತ ತೀಕ್ಷ್ಣವಾಗಿ ಉತ್ತರಿಸಿದರು. “ನಾನೇನು ಸಾಧಿಸಿಲ್ಲ, ಈ ಹಿಂದೆ ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ಏನನ್ನೂ ಮಾಡಿಲ್ಲ ಎಂದು ಇದೇ ಕಾಂಗ್ರೆಸ್‌ನವರು ಸಾರ್ವಜನಿಕವಾಗಿ ನಿರಂತರವಾಗಿ ಹೀಯಾಳಿಸಿದ್ದರು. ಈಗ ಅವರೇ ನನ್ನ ಬಳಿ ಬಂದು ಯಾವ ವಿಷಯದ ಕುರಿತು ಸಲಹೆ ಕೇಳಲು ಹೊರಟಿದ್ದಾರೆ? ಎಲ್ಲದಕ್ಕೂ ತನಿಖೆ ಮತ್ತು ಸಾಕ್ಷಿಗಳನ್ನು ಕೇಳುವ ಅವರಿಗೆ ಎಲ್ಲವೂ ತಿಳಿದಿದೆ. ಹಿರಿಯರು ಹೇಳಿರುವ ‘ಅತಿ ವಿನಯಂ ದೂರ್ತ ಲಕ್ಷಣಂ’ ಎಂಬ ಗಾದೆ ಮಾತು ನನಗೆ ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಪದೇಪದೇ ನೆನಪಿಗೆ ಬರುತ್ತಿದೆ” ಎಂದು ವ್ಯಂಗ್ಯವಾಡಿದರು.

ಸಂಪರ್ಕದ ವದಂತಿಗಳಿಗೆ ಸಂಪೂರ್ಣ ತೆರೆ:

ರಾಜ್ಯದ ಸಚಿವರಾದ ಜಮೀರ್ ಅಹಮದ್ ಖಾನ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಯಾವುದೇ ಪ್ರಮುಖ ನಾಯಕರು ತಮ್ಮೊಂದಿಗೆ ಯಾವುದೇ ರೀತಿಯ ಒಳ ಒಪ್ಪಂದ ಅಥವಾ ರಾಜಕೀಯ ಸಂಪರ್ಕದಲ್ಲಿ ಇಲ್ಲ ಎಂದು ಸ್ಪಷ್ಟಪಡಿಸುವ ಮೂಲಕ, ರಾಜಕೀಯ ವಲಯದಲ್ಲಿ ಕೇಳಿಬರುತ್ತಿದ್ದ ದಟ್ಟ ವದಂತಿಗಳಿಗೆ ಅವರು ಸಂಪೂರ್ಣ ತೆರೆ ಎಳೆದರು.

ಇದೇ ವೇಳೆ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸಿರುವ ಕುರಿತು ಮಾತನಾಡಿದ ಅವರು, ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವಿಗೆ ಅಗತ್ಯವಿರುವ ಎಲ್ಲಾ ಮುಕ್ತ ರಾಜಕೀಯ ಪ್ರಯತ್ನಗಳನ್ನು ಮತ್ತು ತಂತ್ರಗಾರಿಕೆಯನ್ನು ನಡೆಸಲಾಗುತ್ತಿದ್ದು, ಗೆಲುವಿನ ವಿಶ್ವಾಸವಿದೆ ಎಂದರು. ಇದೇ ವೇಳೆ ಜಾಗತಿಕವಾಗಿ ತೈಲ ಮತ್ತು ಗ್ಯಾಸ್ ಬೆಲೆ ಏರಿಕೆಯಾಗುತ್ತಿರುವುದಕ್ಕೆ ಜಾಗತಿಕ ಯುದ್ಧದ ಬಿಕ್ಕಟ್ಟು ಕಾರಣವೇ ಹೊರತು ಭಾರತ ಸರ್ಕಾರವಲ್ಲ ಎಂದು ಕೇಂದ್ರದ ನಿಲುವನ್ನು ಸಮರ್ಥಿಸಿಕೊಂಡರು.

 

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist