ಬೆಂಗಳೂರು/ಅಹಮದಾಬಾದ್ (www.thenewzmirrir.com);
ಟೀಮ್ ಇಂಡಿಯಾ ಹಾಗೂ ನೆರೆಯ ಪಾಕಿಸ್ತಾನ ತಂಡಗಳು ಯಾವುದೇ ಸರಣಿಯಲ್ಲಿ ಕಾದಟ ನಡೆಸಿದ್ರೂ, ಹೈ ವೋಲ್ಟೇಜ್ ಫಿಕ್ಸ್.. ಇಂತಹದ್ರಲ್ಲಿ ವಿಶ್ವಕಪ್ ಅಂದ್ರೆ ಕೇಳಬೇಕಾ, ನಿಜಕ್ಕೂ ಈ ಪಂದ್ಯ ನೋಡಲು ವಿಶ್ವದ ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಟೀಮ್ ಇಂಡಿಯಾ ಬಲಿಷ್ಠವಾಗಿದೆ.
ಅಹಮಾದಾಬಾದ್ ನ ನರೇಂದ್ರ ಮೋದಿ ಅಂಗಳದಲ್ಲಿ 1 ಲಕ್ಷ ಹೆಚ್ಚು ಪ್ರೇಕ್ಷಕರ ಸಮ್ಮುಖದಲ್ಲಿ ದಾಯಾದಿಗಳ ಕದನ ನಿಜಕ್ಕೂ ಕುತೂಹಲ ಮೂಡಿಸಿದೆ. ಇನ್ನು ಪಾಕ್ ಇಷ್ಟು ದೊಡ್ಡ ಸಂಖ್ಯೆಯ ಅಭಿಮಾನಿಗಳ ಸಮ್ಮುಖದಲ್ಲಿ ಆಡಿದ ಅನುಭವವನ್ನೇ ಹೊಂದಿಲ್ಲ.
ಹೀಗಾಗಿ ಈ ಪಂದ್ಯದಲ್ಲಿ ಪಾಕ್ ಹೇಗೆ ಆಡುತ್ತದೆ ಎಂಬುದೇ ಕುತೂಹಲ ಮೂಡಿದೆ. ಆಡಿದ ಎರಡೂ ಪಂದ್ಯಗಳಲ್ಲಿ ಗೆದ್ದು ಬೀಗಿರುವ ಉಭಯ ತಂಡಗಳು ಹ್ಯಾಟ್ರಿಕ್ ಗೆಲುವಿನ ಲೆಕ್ಕಾಚಾರದಲ್ಲಿವೆ.
ಟೀಮ್ ಇಂಡಿಯಾ ಪ್ರಸಕ್ತ ಸರಣಿಯಲ್ಲಿ ಸೊಗಸಾದ ಫಾರ್ಮ್ ನಲ್ಲಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಸ್ಟಾರ್ ಆಟಗಾರರು ಭರ್ಜರಿ ಪ್ರದರ್ಶನ ನೀಡಿದ್ದು, ಅಭಿಮಾನಿಗಳಿಗೆ ಹಬ್ಬದೂಟವನ್ನು ಹಾಕಿದೆ.
ಭಾರತದಲ್ಲಿ ಈ ಬಾರಿಯ ಏಕದಿನ ವಿಶ್ವಕಪ್ ನಡೆಯುತ್ತಿದ್ದು, ಈ ಪಿಚ್ ಗಳ ಮೇಲೆ ಆಡುವುದು ಪಾಕ್ ಗೆ ನುಂಗಲಾರದ ತುತ್ತಾಗಿದೆ. ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸರಣಿಗಳು ನಡೆಯದೇ ಇದ್ದಿದ್ದರಿಂದ, ಪಾಕ್ ಆಟಗಾರರು ಭಾರತದ ಬೌಲರ್ ಗಳ ಸವಾಲನ್ನು ಹೇಗೆ ಮೆಟ್ಟಿ ನಿಲ್ಲುತ್ತಾರೆ ಎಂಬುದೇ ದೊಡ್ಡ ಪ್ರಶ್ನೆ ಆಗಿದೆ.
ಟೀಮ್ ಇಂಡಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಬಲಾಢ್ಯವಾಗಿದೆ. ಟೀಮ್ ಇಂಡಿಯಾ ಶನಿವಾರದ ಪಂದ್ಯದಲ್ಲಿ ಯಾವ ಕಾಂಬಿನೇಷನ್ ಜೊತೆ ಕಣಕ್ಕೆ ಇಳಿಯುತ್ತದೆ ಎಂಬುದೇ ಕುತೂಹಲ ಮೂಡಿಸಿದೆ. ಈ ಪಂದ್ಯದಲ್ಲಿ ಮತ್ತೊಮ್ಮೆ ಪಾಕ್ ಬೌಲರ್ ಗಳನ್ನು ಕಟ್ಟಿ ಹಾಕಲು ಟೀಮ್ ಇಂಡಿಯಾ ಬ್ಯಾಟರ್ಸ್ ಪ್ಲ್ಯಾನ್ ಮಾಡಿಕೊಂಡಿದೆ.