ಬೆಂಗಳೂರು(www.thenewzmirror.com): ಸಿಲಿಕಾನ್ ಸಿಟಿ ಬೆಂಗಳೂರು ಜಾಗತಿಕ ತಂತ್ರಜ್ಞಾನ ನಕಾಶೆಯಲ್ಲಿ ಮತ್ತೊಂದು ಐತಿಹಾಸಿಕ ಮೈಲುಗಲ್ಲು ಸ್ಥಾಪಿಸಿದೆ. ಬೆಂಗಳೂರು ಮೂಲದ ಮುಂಚೂಣಿ ಐಟಿ ಸಂಸ್ಥೆಯೊಂದು ಭಾರತದ ಅತ್ಯಂತ ಶಕ್ತಿಶಾಲಿ ಹಾಗೂ ಸಂಪೂರ್ಣ ದೇಶೀಯ ತಂತ್ರಜ್ಞಾನದ 64-ಕ್ಯೂಬಿಟ್ (64-qubit) ಸೂಪರ್ ಕಂಡಕ್ಟಿಂಗ್ ಕ್ವಾಂಟಮ್ ಪ್ರೊಸೆಸರ್ ‘ಕಾವೇರಿ’ಯನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಈ ಸಾಧನೆಯು ಭಾರತದ ವಿಜ್ಞಾನ ಲೋಕಕ್ಕೆ ಸಂದ ಜಯ ಎಂದಿದ್ದಾರೆ.
ವಿಶ್ವದಾದ್ಯಂತ ಕೇವಲ 7 ಪ್ರಮುಖ ರಾಷ್ಟ್ರಗಳು ಮಾತ್ರ ಇಂತಹ ಅತ್ಯಾಧುನಿಕ ಕ್ವಾಂಟಮ್ ಪ್ರೊಸೆಸರ್ ವಿನ್ಯಾಸಗೊಳಿಸುವ ಸಾಮರ್ಥ್ಯ ಹೊಂದಿದ್ದು, ಈಗ ಭಾರತ ಹಾಗೂ ನಮ್ಮ ಕರ್ನಾಟಕ ರಾಜ್ಯವು ಈ ಹೆಮ್ಮೆಯ ಸಾಲಿಗೆ ಲಗ್ಗೆ ಇಟ್ಟಿದೆ.
ಏನಿದು ‘ಕಾವೇರಿ’ ಚಿಪ್ ಸಾಧನೆ?
ಕ್ವಾಂಟಮ್ ತಂತ್ರಜ್ಞಾನದಲ್ಲಿ ಅತ್ಯಂತ ಕಠಿಣ ಲೆಕ್ಕಾಚಾರಗಳನ್ನು ಸಾಂಪ್ರದಾಯಿಕ ಕಂಪ್ಯೂಟರ್ಗಳಿಗಿಂತ ವೇಗವಾಗಿ ಮಾಡಲು ಕನಿಷ್ಠ 50-ಕ್ಯೂಬಿಟ್ ಮಿತಿಯನ್ನು ದಾಟಬೇಕಾಗುತ್ತದೆ ಎಂದು ಜಾಗತಿಕ ವಿಜ್ಞಾನಿಗಳು ಗುರುತಿಸುತ್ತಾರೆ. ಪ್ರಸ್ತುತ ಭಾರತದಲ್ಲೇ ತಯಾರಾಗಿರುವ ‘ಕಾವೇರಿ’ ಪ್ರೊಸೆಸರ್ ಈ ಮಿತಿಯನ್ನು ಮೀರಿ 64-ಕ್ಯೂಬಿಟ್ ಸಾಮರ್ಥ್ಯ ತಲುಪಿದ್ದು, ಸೂಪರ್ ಕಂಪ್ಯೂಟಿಂಗ್ ಜಗತ್ತಿನಲ್ಲಿ ಭಾರತ ಸ್ವಾವಲಂಬನೆ ಸಾಧಿಸಲು ದಾರಿಯಾಗಿದೆ. ಇದು ಬೆಂಗಳೂರಿನ ಪ್ರೌಢ ತಂತ್ರಜ್ಞಾನ ಪರಿಸರಕ್ಕೆ ಸಿಕ್ಕ ಮತ್ತೊಂದು ಗೌರವವಾಗಿದೆ.
ರಾಜ್ಯದಲ್ಲಿ ಮೊದಲ ಕ್ವಾಂಟಮ್ ಕಂಪ್ಯೂಟರ್ ಸ್ಥಾಪನೆ:
ಕರ್ನಾಟಕ ಸರ್ಕಾರದ ಐಟಿಬಿಟಿ ಇಲಾಖೆಯ ‘ಲೀಪ್’ (LEAP) ಯೋಜನೆಯ ಅಡಿಯಲ್ಲಿ, ದೇಶದಲ್ಲೇ ಮೊದಲ ಬಾರಿಗೆ ವಾಣಿಜ್ಯ ಬಳಕೆಯ ಕ್ವಾಂಟಮ್ ಕಂಪ್ಯೂಟರ್ ಅನ್ನು ಐಐಐಟಿ ಧಾರವಾಡ ಮತ್ತು ಐಐಐಟಿ ರಾಯಚೂರು ಸಂಸ್ಥೆಗಳಲ್ಲಿ ಸ್ಥಾಪಿಸಲಾಗಿದೆ. ಈ ಮೂಲಕ ಕ್ವಾಂಟಮ್ ಕಂಪ್ಯೂಟಿಂಗ್ ತಂತ್ರಜ್ಞಾನವನ್ನು ಶೈಕ್ಷಣಿಕ ಮತ್ತು ವಾಣಿಜ್ಯ ಕ್ಷೇತ್ರಕ್ಕೆ ತರುವಲ್ಲಿ ಕರ್ನಾಟಕ ದೇಶಕ್ಕೇ ಮಾದರಿಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.







