ಬೆಂಗಳೂರು, (www.thenewzmirror.com) ;
ಐಟಿ ದೈತ್ಯ ಹಾಗೂ ದೇಶದ ಎರಡನೇ ಬೃಹತ್ ಐಟಿ ಕಂಪನಿ ಎನಿಸಿರೋ ಇನ್ಫೋಸಿಸ್ ವಿರುದ್ಧ ಇದೀಗ ತೆರಿಗೆ ವಂಚನೆ ಆರೋಪ ಕೇಳಿಬಂದಿದೆ. ಕರ್ನಾಟಕದ ಎನ್.ಆರ್.ನಾರಾಯಣ ಮೂರ್ತಿ ಸೇರಿ ಹಲವರು ಹುಟ್ಟುಹಾಕಿರುವ ಐಟಿ ದೈತ್ಯ ಇನ್ಫೋಸಿಸ್ ಕಂಪನಿಗೆ 32,403 ಕೋಟಿ ತೆರಿಗೆ ವಂಚಿಸಿದ ಆರೋಪದ ಮೇರೆಗೆ ಜಿಎಸ್‌ಟಿ ಗುಪ್ತಚರ ಮಹಾ ನಿರ್ದೇಶನಾಲಯ ಜಿಎಸ್‌ಟಿ ನೋಟಿಸ್ ಜಾರಿ ಮಾಡಿದೆ ಎನ್ನಲಾಗಿದೆ
“ಇನ್ಫೋಸಿಸ್ ಕಂಪನಿಯು ಬೇರೆ ದೇಶಗಳಲ್ಲಿ ಹೊಂದಿರುವ ಬ್ರ್ಯಾಂಚ್ ಆಫೀಸ್‌ಗಳಿಂದ 2017-18ರಿಂದ 2021-22ರಲ್ಲಿ ಸರಬರಾಜು ಮಾಡಲಾಗಿರುವ ಸ್ವೀಕೃತಿಗಳ ಬದಲಾಗಿ ಬ್ರ್ಯಾಂಚ್ ಆಫೀಸ್‌ಗಳ ವೆಚ್ಚ ಎಂಬುದಾಗಿ ಉಲ್ಲೇಖಿಸಲಾಗಿದೆ. ಹಾಗಾಗಿ, ರಿವರ್ಸ್ ಚಾರ್ಜ್ ಮೆಕ್ಯಾನಿಸಂ ನಿಯಮಗಳ ಪ್ರಕಾರ ಭಾರತದಿಂದ ಹೊರಗಿರುವ ಬ್ರ್ಯಾಂಚ್‌ಗಳಿಂದ ಸರಬರಾಜು ಮಾಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಇನ್ಫೋಸಿಸ್ ಲಿಮಿಟೆಡ್ ಕಂಪನಿಯು 32,403 ಕೋಟಿ ರೂ. ಐಜಿಎಸ್‌ಟಿ ಪಾವತಿಸಬೇಕು” ಎಂಬುದಾಗಿ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ನಿಯಮಗಳ ಪ್ರಕಾರ, ಸರಕು ಅಥವಾ ಸೇವೆಗಳನ್ನು ಸ್ವೀಕರಿಸುವವರು ಪೂರೈಕೆದಾರರ ಬದಲಿಗೆ ತೆರಿಗೆ ಪಾವತಿಸಬೇಕು ಎಂಬುದೇ ರಿವರ್ಸ್ ಚಾರ್ಜ್ ಮೆಕ್ಯಾನಿಸಂ ಆಗಿದೆ. ರಫ್ತು ಮಾಡಲಾದ ಉತ್ಪನ್ನಗಳ ಇನ್‌ವಾಯ್ಸ್‌ನಲ್ಲಿ ಇನ್ಫೋಸಿಸ್ ಘಟಕಗಳ ಖರ್ಚು ವೆಚ್ಚಗಳನ್ನೂ ನಮೂದಿಸಿರುವುದು ಜಿಎಸ್‌ಟಿ ಗುಪ್ತಚರ ವಿಭಾಗದ ಕಣ್ಣು ಕೆಂಪಗಾಗಿಸಿದೆ. ಇದರಿಂದಾಗಿಯೇ ಇನ್ಫೋಸಿಸ್‌ಗೆ 32403 ಸಾವಿರ ಕೋಟಿ ರೂ. ಜಿಎಸ್‌ಟಿ ನೋಟಿಸ್ ಜಾರಿಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಜಿಎಸ್ ಟಿ ಬಾಕಿ ಉಳಿಸಿಕೊಂಡಿಲ್ಲ..!
ಇನ್ನು ಜಿಎಸ್‌ಟಿ ನೋಟಿಸ್ ಕುರಿತು ಇನ್ಫೋಸಿಸ್ ಸ್ಪಷ್ಟನೆ ನೀಡಿದೆ. ಇನ್ಫೋಸಿಸ್ ಕಂಪನಿಯು ಯಾವುದೇ ಜಿಎಸ್‌ಟಿ ಪಾವತಿ ಬಾಕಿಯನ್ನು ಉಳಿಸಿಕೊಂಡಿಲ್ಲ. ಐಟಿ ಸೇವೆಗಳ ರಫ್ತಿನ ಮೇಲೆ ಜಿಎಸ್‌ಟಿ ರಿಫಂಡ್ ಪಡೆಯುವ ಅವಕಾಶ ಇದೆ. ಅದರಂತೆ, ಕ್ಲೇಮ್ ಮಾಡಲಾಗಿದೆ. ಇನ್ನು, ಕಂಪನಿಗೆ ಪ್ರಿ-ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದ್ದು, ಈ ಕುರಿತು ಕಂಪನಿಯು ಪ್ರತಿಕ್ರಿಯೆ ನೀಡಿದೆ ಎಂಬುದಾಗಿ ಸ್ಪಷ್ಟಪಡಿಸಿದೆ.