ಬೆಂಗಳೂರು, (www.thenewzmirror.com );
ಅದ್ಯಾಕೋ ಏನೋ ಸಾರಿಗೆ ಇಲಾಖೆ ( ಆರ್ ಟಿಓ) ನಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಪದೇ ಪದೇ ಸಾಬೀತಾಗ್ತಿದೆ. ಈ ಹಿಂದೆ ಸಾರಿಗೆ ಇಲಾಖೆಯಲ್ಲಿನ ಅಕ್ರಮ.., ಭ್ರಷ್ಟತೆ ಕುರಿತಂತೆ ವಿಸ್ತಾರ ವರದಿ ಪ್ರಕಟ ಮಾಡಿದ್ದ ನಿಮ್ಮ ನ್ಯೂಝ್ ಮಿರರ್ ಇದೀಗ ಮತ್ತೊಂದು ಸುದ್ದಿಯನ್ನ ಪ್ರಕಟ ಮಾಡ್ತಿದೆ..,
ಕೆ.ಆರ್. ಪುರಂ ಪ್ರಾದೇಶಿಕ ಸಾರಿಗೆ ಕಚೇರಿ( ಆರ್ ಟಿಓ) ಹುದ್ದೆಗಾಗಿ ಬಾರೀ ಪೈಪೋಟಿ ನಡೆಯುತ್ತಿತ್ತು.., ಕಳೆದ ತಿಂಗಳು ನಿವೃತ್ತಿ ಹೊಂದಿದ್ದ ಎನ್. ಎಸ್. ಪ್ರಕಾಶ್ ಅವರಿಂದ ತೆರವಾಗುವ ಸ್ಥಾನಕ್ಕೆ ಎಆರ್ ಟಿಓ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಪಿ. ಉಮೇಶ್ ಅವರಿಗೆ ಆರ್ ಟಿಓ ಆಗಿ ಬಡ್ತಿ ನೀಡಿ ನಿಯುಕ್ತಿಗೊಳಿಸಲಾಗಿತ್ತು.
ಜೂನ್ 27 ರಲ್ಲಿ ಆದೇಶ ಹೊರಡಿಸಿದಂತೆ ಪ್ರಕಾಶ್ ಅವರು ನಿವೃತ್ತಿಯಾಗುತ್ತಿದ್ದಂತೆ ಉಮೇಶ್ ಅಧಿಕಾರ ಸ್ವೀಕಾರ ಮಾಡಿದ್ದರು. ಆದರೆ ಜಿ.ಪಿ. ಕೃಷ್ಣಾನಂದ ಅವರಿಗೆ ಶಾಂತಿನಗರದ ಆರ್ ಟಿಓ ಗೆ ವರ್ಗಾವಣೆ ಮಾಡಿದ್ದರೂ ಆ ಸ್ಥಳಕ್ಕೆ ನಿಯುಕ್ತಿ ಆಗದೆ ಕಾಲಹರಣ ಮಾಡುತ್ತಿದ್ದರು. ಯಾವಾಗ ಪ್ರಕಾಶ್ ಅವರು ವಯೋ ನಿವೃತ್ತಿ ಆಗುತ್ತಿದ್ದಂತೆ ಅವ್ರ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಜಿ.ಪಿ. ಕೃಷ್ಣಾನಂದ ಜೂನ್ 27 ಆದೇಶವಾಗಿದ್ದರೂ ಆಗಸ್ಟ್ 31 ರಂದು ಎರಡೆರಡು ಆದೇಶ ಮಾಡಿಸಿಕೊಂಡು ಕೆ.ಆರ್. ಪುರಂ ಪ್ರಾದೇಶಿಕ ಕಚೇರಿ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳೋಕೆ ಮುಂದಾಗಿದ್ರು.
ವಿಪರ್ಯಾಸ ಅಂದರೆ ಜೂನ್ 27 ರ ಆದೇಶದಂತೆ ಆಗಸ್ಟ್ 31 ರ ಸಂಜೆ 5.30 ರ ಸುಮಾರಿಗೆ ಉಮೇಶ್ ಅಧಿಕಾರ ವಹಿಸಿಕೊಂಡು ನಂತರ ರಜೆ ಮೇಲೆ ತೆರಳಿದ್ದರು. ಆದರೆ ಸೆಪ್ಟೆಂಬರ್ 1 ರಂದು ಹೊಸ ಆದೇಶದ ಪ್ರತಿ ಹಿಡಿದು ಕೆ.ಆರ್. ಪುರಂ ಆರ್ ಟಿಓ ಕಚೇರಿಗೆ ಆಗಮಿಸಿದ್ದ ಜಿ.ಪಿ. ಕೃಷ್ಣಾನಂದ ಅವರು ಅಧಿಕಾರ ವಹಿಸಿಕೊಂಡರು. ಮೂಲಗಳ ಪ್ರಕಾರ ಅಧಿಕಾರ ವಹಿಸಿಕೊಂಡ ತಕ್ಷಣದಿಂದಲೇ ಎಆರ್ ಟಿಓ ವ್ಯಾಪ್ತಿಯಲ್ಲಿದ್ದ ಡಿಎಲ್ ಮಾಡುವ ಅಧಿಕಾರವನ್ನ ಅವ್ರಿಂದ ಪಡೆದುಕೊಂಡು ತಾವೇ ಸ್ವತಃ ಡಿಎಲ್ ನೀಡುವ ಪ್ರಕ್ರಿಯೆಗೆ ಚಾಲನೆ ಕೊಟ್ಟಿದ್ದರಂತೆ.
ಯಾವಾಗ ರಜೆ ಮೇಲೆ ತೆರಳಿದ್ದ ಉಮೇಶ್ ಕಚೇರಿಗೆ ಬಂದ್ರೋ ಅವರಿಗೆ ಶಾಕ್ ಕಾದಿತ್ತು. ಯಾಕಂದ್ರೆ ಆಗಸ್ಟ್ 31 ರ ಆದೇಶದಂತೆ ಆರ್ ಟಿಓ ಆಗಿ ಅಧಿಕಾರ ಸ್ವೀಕರಿಸಿದ ಜಿ.ಪಿ. ಕೃಷ್ಣಾನಂದ. ನಡೆ ವಿರುದ್ಧ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ( ಕೆಎಟಿ) ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಕೆಎಟಿ, ಕೃಷ್ಣಾನಂದರ ನಡೆಗೆ ಅಸಮಧಾನ ಹೊರಹಾಕಿದ್ದಲ್ಲದೇ ಕೃಷ್ಣಾನಂದ ಅವರ ವರ್ಗಾವನೆ ಆದೇಶಕ್ಕೆ ಮಧ್ಯಂತರ ತಡೆಯಾಜ್ಙೆ ನೀಡಿದೆ. ಹಾಗೆನೇ ಇದೇ ತಿಂಗಳ 11 ವರೆಗೂ ತಡೆಯಾಜ್ಙೆ ನೀಡಿ ವಿಚಾರಣೆ ಮುಂದೂಡಿದೆ.. ಆ ಮೂಲಕ ಪಿ. ಉಮೇಶ್ ಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಅಷ್ಟಕ್ಕೂ ಪಿ. ಉಮೇಶ್ ಇಂದಿರಾನಗರ ಸಾರಿಗೆ ಕಚೇರಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಎಆರ್ ಟಿಓ ಆಗಿದ್ದ ಅವರನ್ನ ಆರ್ ಟಿಓ ಹುದ್ದೆಗೆ ಬಡ್ತಿ ನೀಡಿ ಜೂನ್ 27 ರಂದು ಕೆ.ಆರ್. ಪುರಂ ಪ್ರಾದೇಶಿಕ ಸಾರಿಗೆ ಕಚೇರಿಗೆ ನಿಯುಕ್ತಿ ಮಾಡಿ ಆದೇಶ ಹೊರಡಿಸಲಾಗಿತ್ತು.
ಸರಳ ಸಜ್ಜನಿಕೆ ವ್ಯಕ್ತಿಯಾಗಿರುವ ಉಮೇಶ್ ಆರ್ ಟಿಓ ಆಗಿ ಕಚೇರಿಯನ್ನ ಸಾರ್ವಜನಿಕರ ಸ್ನೇಹಿಯನ್ನಾಗಿ ಮಾಡಬೇಕೆಂಬ ಆಸೆ ಹೊಂದಿದ್ದರು. ಆದರೆ ಅವರ ಆಸೆಗೆ ತಣ್ಣಿರು ಎರಚುವ ಸ್ಥಿತಿ ಬಂದಿತ್ತಾದರೂ ಅದೀಗ ದೂರವಾಗಿದೆ.