ಬೆಂಗಳೂರು, (www.thenewzmirror.com);
ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನ ವಿರೋಧಿಸಿ ರಾಜ್ಯದಲ್ಲಿ ನಡೀತಿರುವ ಹೋರಾಟ ನಿಲ್ಲುತ್ತಿಲ್ಲ.. ಕಾವೇರಿ ಕೊಳ್ಳದ ಭಾಗಗಳಲ್ಲಿ ನಡೀತಿರುವ ಹೋರಾಟ ಭಿನ್ನ, ವಿಭಿನ್ನವಾಗಿ ನಡೀತಿವೆ. ಅದೇ ರೀತಿ ಬೆಂಗಳೂರಿನ ಆಮ್ ಆದ್ಮಿ ಪಾರ್ಟಿವತಿಯಿಂದ ಫ್ರೀಡಂ ಪಾರ್ಕ್ ನಲ್ಲಿ ಮೌನ ಪ್ರತಿಭಟನೆ ನಡೆಸಲಾಯಿತು.
ಕಾವೇರಿ ಸಮಸ್ಯೆ ಬಗೆಹರಿಯುವ ತನಕ ಪ್ರತಿದಿನ ಮೌನ ಧರಣಿ ಮಾಡಲು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಹಾಗೂ ರೈತ ಮುಖಂಡ ಕುರುಬೂರು ಚಂದ್ರಶೇಖರ್ ಅವರ ನೇತೃತ್ವದ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ತೀರ್ಮಾನಿಸಿದೆ. ಅದರಂತೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಇಂದು ಆಮ್ ಆದ್ಮಿ ಪಕ್ಷದಿಂದ ಮಾಡುತ್ತಿರುವ ‘ಕಾವೇರಿ ನಮ್ಮದು’ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದರು.







ಆಪ್ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು, ರಾಜ್ಯದಲ್ಲಿ ಮೊದಲೇ ಕುಡಿಯೋಕೆ ನೀರಿಲ್ಲ.., ಜಾನುವಾರುಗಳಿಗೆ ನೀರಿನ ಸಮಸ್ಯೆ ಆಗ್ತಿದೆ.., ಕೂಡಲೇ ರಾಜ್ಯ ಸರ್ಕಾರ ನೀರು ಬಿಡ್ತಿರೋದನ್ನ ನಿಲ್ಲಿಸಿ, ವಿಶೇಷ ಅಧಿವೇಶನ ಕರೀಬೇಕು ಅಂತ ಆಗ್ರಹಿಸಿದ್ರು. ಭಾನುವಾರದ ವರೆಗೂ ಸರ್ಕಾರಕ್ಕೆ ಗಡುವು ಕೊಡ್ತೀವಿ.., ಅಷ್ಟರೊಳಗೆ ಸರ್ಕಾರ ತನ್ನ ನಿಲುವನ್ನ ಸ್ಪಷ್ಟಪಡಿಸದಿದ್ರೆ ಉಗ್ರ ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದಾರೆ.
ಕಾವೇರಿ ಜಲಾನಯನ ಪ್ರದೇಶದ ಜಿಲ್ಲೆಗಳಾದ ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕುಡಿಯಲು ಮತ್ತು ಜಾನುವಾರುಗಳಿಗೆ ನೀರಿನ ಸಮಸ್ಯೆಯಾಗಿದ್ದು, ಈಗಾಗಲೇ ರಾಜ್ಯದಲ್ಲಿ ಸಂಕಷ್ಟ ಪರಿಸ್ಥಿತಿಯಲ್ಲಿ ಇದ್ದು ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ತಕ್ಷಣ ನಿಲ್ಲಿಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದರು.
ಕಾವೇರಿ ನೀರಿನ ಸಮಸ್ಯೆಗೆ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಮೂರು ಪಕ್ಷಗಳು ಕಾರಣ. ಸಿಎಂ ಸಿದ್ಧರಾಮಯ್ಯ ಅವರು ತಕ್ಷಣ ಅಧಿವೇಶನ ಕರೆಯಬೇಕು. ನೀರು ಬಿಡುತ್ತಿಲ್ಲ ಎಂದು ಅವರು ಹೇಳುತ್ತಿದ್ದರೂ ತಮಿಳುನಾಡಿಗೆ ನೀರು ಹರಿದು ಹೋಗುತ್ತಿದೆ. ಈ ಬಗ್ಗೆ ಅಧಿವೇಶನಲ್ಲಿ ಸಿಎಂ ಸಿದ್ದರಾಮಯ್ಯ ಅವರು ನಿಜ ಏನೆಂದು ಹೇಳಬೇಕು ಎಂದು ಒತ್ತಾಯಿಸಿದರು.
ಸಮಸ್ಯೆ ಬಗೆಹರಿಸಲು ಇಚ್ಛಾಶಕ್ತಿ ಕೊರತೆ
ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮೋಹನ್ ದಾದರಿ ಮಾತನಾಡಿ, ಸಮಸ್ಯೆಯನ್ನು ಸರಿಪಡಿಸಲು ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿಯ ಕೊರತೆಯಿದ್ದು, ಸಮಸ್ಯೆ ಬಗೆಹರಿಸಲು ವಿಫಲವಾಗಿದೆ. ಸುಪ್ರೀಂಕೋರ್ಟ್, ಕಾವೇರಿ ಪ್ರಾಧಿಕಾರ ಮತ್ತು ನಿರ್ವಹಣಾ ಸಮಿತಿ ಮಾಡಿದ್ದೇ ಹಠ ಎನ್ನುವಂತೆ ವರ್ತಿಸುತ್ತಿವೆ. ನೀರಿಲ್ಲ ಎಂದರೂ, ನೀರು ಬಿಡಿ ಎನ್ನುತ್ತಿದ್ದಾರೆ. ಮತ್ತೆ ಮೂರು ಸಾವಿರ ಕ್ಯೂಸೆಕ್ ನೀರು ಬಿಡಿ ಎಂದು ನಿರ್ವಹಣಾ ಸಮಿತಿ ಹೇಳಿದ್ದನ್ನೇ ಪ್ರಾಧಿಕಾರ ಕೂಡ ಹೇಳಿದೆ. ಈಗ ಸುಪ್ರೀಂಕೋರ್ಟ್ ಕೂಡ ನಾವು ತಜ್ಞರಲ್ಲ ಪ್ರಾಧಿಕಾರಕ್ಕೆ ಹೋಗಿ ಎನ್ನುತ್ತಾರೆ. ನಾವೇ ಕೊಟ್ಟಿರುವ ಆದೇಶ ಯಾಕೆ ವಾಪಸ್ ಪಡೆಯುವುದು ಎಂದು ಪ್ರಾಧಿಕಾರ ನೀರು ಬಿಡಲು ಆದೇಶಿಸಿದೆ ಎಂದರು.