ಬೆಂಗಳೂರು, (www.thenewzmirror.com);
ದೇಶದಲ್ಲೇ ನಂಬರ್ ಓನ್ ಸಾರಿಗೆ ಸಂಸ್ಥೆ ಅಂದರೆ ಅದು ಕೆಎಸ್ಸಾರ್ಟಿಸಿ. ಇದೂವರೆಗೂ ಸುಮಾರು 300 ಕ್ಕೂ ಹೆಚ್ಚು ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಶಸ್ತಿಗಳನ್ನ ಬಾಜಿಕೊಂಡಿದೆ. ವಿಶಿಷ್ಠ ಸೇವೆ, ವಿನೂತನ ಸೇವೆ ನೀಡುತ್ತಿರೋ ವಿಭಾಗದಲ್ಲಿ ಪ್ರಶಸ್ತಿ ಪಡೆದ KSRTCಯ ಅಸಲಿ ಚಿತ್ರಣವೇ ಬೇರೆ ಇದೆ.
ಹೊರಗೆಲ್ಲಾ ಥಳುಕು ಒಳಗೆಲ್ಲಾ ಹುಳುಕು ಎನ್ನುವ ಗಾದೆ ಮಾತು ಕೆಎಸ್ಸಾರ್ಟಿಸಿಗೆ ಅನ್ವಯವಾಗುತ್ತೆ ಎಂದು ಅನಿಸುತ್ತದೆ. ಯಾಕಂದರೆ ಹೆಸರಿಗೆ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ನಿಗಮದ ವಾಸ್ತವ ಸ್ಥಿತಿಯೇ ಬೇರೆ ಇದೆ.
ಸಮರ್ಪಕ ನಿರ್ವಹಣೆ ಇಲ್ಲದೆ.., ಕೆಲ ಅಧಿಕಾರಿಗಳ ಹಣದಾಸೆಗೆ ಪ್ರಯಾಣಿಕರು ಬಸ್ ಹತ್ತಬೇಕೆಂದರೆ ಯೋಚನೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ದಿ ನ್ಯೂಝ್ ಮಿರರ್ ಓದುಗರೊಬ್ಬರು ನೀಡಿದ ಮಾಹಿತಿ ಆಧಾರದ ಮೇಲೆ ನಿಗಮದ ಅಸಲಿ ಚಿತ್ರಣ ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಮರಾಜನಗರ ವಿಭಾಗದ ಬಸ್ಸುಗಳ ಚಕ್ರಗಳಲ್ಲಿ ಎಗ್ಗಿಲ್ಲದೆ ವಿಪರೀತವಾಗಿ ಆಯಿಲ್ ಸೋರಿಕೆಯಾಗುತ್ತಿದೆ. ಇದರಿಂದ ಬ್ರೇಕ್ ಸಮಪರ್ಕವಾಗಿ ಹಿಡಿಯುವುದಿಲ್ಲ., ಮಾರ್ಗ ಮಧ್ಯದಲ್ಲಿ ಏನಾದರೂ ಅವಘಡ ಅಪಘಾತಗಳು ಸಂಭವಿಸಿದರೆ ಯಾರು ಹೊಣೆ ಸ್ವಾಮಿ ಎನ್ನುವ ಪ್ರಶ್ನೆ ಸಿಬ್ಬಂದಿ ಮಾಡುತ್ತಿದ್ದಾರೆ.
ಮಾರ್ಗಮಧ್ಯದಲ್ಲಿ ಏನಾದರೂ ಅನಾಹುತವಾದರೆ ಎಲ್ಲಾ ಆಪಾದನೆಗಳನ್ನು ಚಾಲಕನ ಮೇಲೆ ಹೊರಿಸುವುದು ಅಧಿಕಾರಿಗಳ ಕಾಯಕವಾಗಿದೆ. ಘಟಕಗಳಲ್ಲಿ ಸಮಪರ್ಕವಾಗಿ ನಿರ್ವಹಣೆ ಮಾಡದೆ ಹೇಗಿದ್ದರೂ ಸಂಸ್ಥೆ ನಮಗೆ ವೇತನ ನೀಡುತ್ತದೆ ಎಂಬ ಬೇಜವಾಬ್ದಾರಿ ನಿರ್ಲಕ್ಷ್ಯತನದಿಂದ ಮಾರ್ಗಾಚರಣೆಗೆ ಕಳುಹಿಸಿ ಕೊಡುತ್ತಿದ್ದಾರಂತೆ.
ಹೀಗೆ ನಿರಂತರವಾಗಿ ಚಕ್ರದ ಮೂಲಕ ಆಯಿಲ್ ಸೋರುತ್ತಿರುವ ವಾಹನಗಳನ್ನ ಹೇಗೆ ತೆಗೆದುಕೊಂಡು ಹೋಗಬೇಕು.. ಸಮರ್ಪಕವಾದ ಬಸ್ ನೀಡಿ ಎಂದರೆ ಚಾಲಕರ ಮೇಲೆನೇ ಗದರುವ ಡಿಪೋದಲ್ಲಿರುವ ಅಧಿಕಾರಿಗಳ ಆಟಾಟೋಪಕ್ಕೆ ಕಡಿವಾಣ ಯಾವಾಗ ಎನ್ನುವ ಪ್ರಶ್ನೆಯನ್ನ ಸಿಬ್ಬಂದಿ ಮಾಡುತ್ತಿದ್ದಾರೆ.
ಅವ್ಯವಸ್ಥೆಯಿಂದ ಕೂಡಿರುವ ವಾಹನಗಳನ್ನು ತೆಗೆದು ಕೊಂಡು ಚಾಲಕರು ಹೇಗೆ ತಾನೇ ಕರ್ತವ್ಯ ನಿರ್ವಹಿಸುವುದು ಹೇಳಿ ಸ್ವಾಮಿ.? ಈ ರೀತಿಯಾಗಿ ಆಯಿಲ್ ಸೋರಿಕೆಯಿಂದ ಸಂಸ್ಥೆಗೆ ಅಪಾರ ಪ್ರಮಾಣದ ನಷ್ಟವಾಗುವುದಲ್ಲದೆ ಸಂಸ್ಥೆಯ ಗೌರವ-ಘನತೆಗೆ ಧಕ್ಕೆ ಬರುವುದಿಲ್ಲವೇ.? ಇಂಥ ಧಕ್ಕೆ ತರುವ ಕೆಲಸ ಮಾಡುತ್ತಿರುವ ಚಾಮರಾಜನಗರ ವಿಭಾಗದ ಅಧಿಕಾರಿಗಳನ್ನು ಕೂಡಲೇ ಅಮಾನತು ಪಡಿಸಿ ಸೂಕ್ತ ಶಿಸ್ತು ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವುದು ನೌಕರರ ಆಗ್ರಹ.
ಓರ್ವ ನಿರ್ವಾಹಕ ಬಸ್ಸಿನಲ್ಲಿ ಓರ್ವ ವ್ಯಕ್ತಿಗೆ ಟೀಕೇಟ್ ನೀಡಲಿಲ್ಲ ಎಂದರೆ ಸಾಕು ಕೂಡಲೇ ಅಮಾನತು ಮಾಡಲಾಗುತ್ತದೆ ಆದರೆ ಸಂಸ್ಥೆಯ ನಿಯಮಾವಳಿಗಳನ್ನು ಗಾಳಿಗೆ ತೂರಿ ಸಂಸ್ಥೆಯ ಗೌರವ-ಘನತೆಗೆ ಚ್ಯುತಿ ಬರುವಂತೆ ಮಾಡಿರುವ ಚಾಮರಾಜನಗರ ವಿಭಾಗದ ಅಧಿಕಾರಿಗಳನ್ನು ಕೂಡಲೇ ಅಮಾನತು ಪಡಿಸಿ ಸೂಕ್ತ ಶಿಸ್ತು ಕಠಿಣ ಕ್ರಮ ಕೈಗೊಳ್ಳುತ್ತಾರಾ ಕಾದು ನೋಡಬೇಕು.
ಕ್ರಮ ಕೈಗೊಳ್ಳುವರೇ ಸಚಿವರು.?
ಸಾರಿಗೆ ಸಚಿವರಾಗಿರುವ ರಾಮಲಿಂಗಾರೆಡ್ಡಿ ಅವರು ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸುವರಾ.? ಸಂಸ್ಥೆಗೆ ನಷ್ಟವುಂಟು ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚನೆ ನೀಡುತ್ತಾರಾ.? ಈಗಾಗಲೇ ಹಲವು ಉತ್ತಮ ಕೆಲಸಗಳನ್ನ ಮಾಡಿ ಸಾರಿಗೆ ಸಂಸ್ಥೆಯನ್ನ ಲಾಭದತ್ತ ಕೊಂಡ್ಯೊಯುತ್ತಿರುವ ಸಚಿವರು ಯಾವ ಕ್ರಮ ಕೈಗೊಳ್ಳುತ್ತಾರೆ ಅನ್ನುವುದೇ ಯಕ್ಷ ಪ್ರಶ್ನೆ.