ಬೆಂಗಳೂರು, (www.thenewzmirror.com) ; ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಅದರಲ್ಲೂ ಮಲೆನಾಡು, ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಬಿಡುವು ಕೊಡದೆ ವರುಣ ಅಬ್ಬರಿಸುತ್ತಿದ್ದಾನೆ. ಇಂಥ ಸಮಯದಲ್ಲಿ ವಿಶ್ವ ವಿಖ್ಯಾತ ಜೋಗ ಜಲಪಾತವನ್ನ ಹತ್ತಿರದಿಂದ ಕಣ್ತುಂಬಿಕೊಳ್ಳೋಕೆ ಎರಡು ಕಣ್ಣುಗಳೂ ಸಾಲದು. ಮೈದುಂಬಿ ಹರಿಯುತ್ತಿರೋ ಜೋಗ ಸೇರಿದಂತೆ ಇತರ ಜಲಪಾತ ಹಾಗೆನೇ ಪ್ರೇಕ್ಷಣೀಯ ಸ್ಥಳಗಳಿಗೆ ಹೋಗ್ಬೇಕು ಅಂತ ಅದೆಷ್ಟೋ ಮಂದಿ ಅಂದುಕೊಂಡಿರ್ತಾರೆ. ಇಂಥವರ ಮನಸನ್ನ ಅರಿತ KSRTC ಇದೀಗ ರಾಜ್ಯದ ಕೆಲ ಪ್ರೇಕ್ಷಣೀಯ ಸ್ಥಳಗಳಿಗೆ ವಿಶೇಷ ಟೂರ್ ಪ್ಯಾಕೇಜ್ ಅನ್ನ ಪ್ರಕಟಮಾಡಿದೆ.
ಈಗಾಗಲೇ ತಿರುಪತಿ ಪ್ಯಾಕೇಜ್ ನಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿರೋ ಬೆನ್ನಲ್ಲೇ ಇದೀಗ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಅವಕಾಶ ಹಾಗೆನೇ ವಿಶೇಷ ಊಟ ಸಹಿತ ಟೂರ್ ಪ್ಯಾಕೇಜ್ ಮಾಡಿಕೊಟ್ಟ KSRTC ಗೆ ಹಾಗೂ ಸಾರಿಗೆ ಸಚಿವರಿಗೆ ಪ್ರಯಾಣಿಕರು ಅಭಿನಂದನೆ ಸಲ್ಲಿಸುತ್ತಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರಿನಿಂದ ಮಲೆನಾಡಿನ ಹೆಬ್ಬಾಗಿಲ ಜಿಲ್ಲೆಯಾದ ಶಿವಮೊಗ್ಗಕ್ಕೆ ಹಾಗೂ ಸೋಮನಾಥಪುರ – ತಲಕಾಡು-ಮಧ್ಯರಂಗ-ಭರಚುಕ್ಕಿ-ಗಗನಚುಕ್ಕಿ ಗೆ ವಿಶೇಷ ಟೂರ್ ಪ್ಯಾಕೇಜ್ ಅನ್ನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಘೊಷಿಸಿದೆ.
ಶರಾವತಿ ನದಿ ಜೋಗದಲ್ಲಿ ಪ್ರಕೃತಿ ಒಡಲಿನಿಂದ ಹಾದು ಸಾವಿರಾರು ಅಡಿಯ ಆಳಕ್ಕೆ ಧುಮ್ಮಿಕ್ಕುವ ಕ್ಷಣವನ್ನ ಅತ್ಯಂತ ಕಡಿಮೆ ವೆಚ್ಚದಲ್ಲಿ ಕಣ್ತುಂಬಿಕೊಳ್ಳುವ ವಿಶೇಷ ಟೂರ್ ಪ್ಯಾಕೇಜ್ ಪ್ರಕಟಮಾಡಿದೆ. ಈ ಟೂರ್ ಪ್ಯಾಕೇಜ್ ನಲ್ಲಿ ಐತಿಹಾಸಿಕ ಸ್ಥಳಗಳ ವೀಕ್ಷಣೆ ಜತೆಗೆ ಊಟ ತಿಂಡಿ ವ್ಯವಸ್ಥೆ ಇರಲಿದೆ.
ಇದೇ ತಿಂಗಳ ಅಂದರೆ ಜುಲೈ 19 ಶುಕ್ರವಾರ ಜುಲೈ 20 ಶನಿವಾರ ಎರಡು ದಿನ ನಿಗಮ ಬೆಂಗಳೂರಿನಿಂದ ವಿಶೇಷ ಟೂರ್ ಪ್ಯಾಕೇಜ್ ಇರಲಿದ್ದು, ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ ಬಳಿಕ ವಾಪಾಸ್ ಬೆಂಗಳೂರಿಗೆ ಕರೆದುಕೊಂಡು ಬರುವ ವ್ಯವಸ್ಥೆ ಮಾಡಿದೆ. ಇದಕ್ಕಾಗಿ ಒಬ್ಬರಿಗೆ ರೂ. 3000 ರೂಪಾಯಿ (6ರಿಂದ 12 ವರ್ಷದವರಿಗೆ ರೂ.2800) ದರ ನಿಗದಿ ಮಾಡಲಾಗಿದೆ.
ಹೀಗಿರಲಿದೆ ಜೋಗ ಸೇರಿದಂತೆ ಪ್ರೇಕ್ಷಣೀಯ ಸ್ಥಳಗಳ ಟೂರ್ ವಿವರ..!
ಶುಕ್ರವಾರ ಮೆಜೆಸ್ಟಿಕ್ ನಿಂದ ರಾತ್ರಿ 22.30 ಕ್ಕೆ ಹೊರಟು ಬೆಳಗ್ಗೆ 05.30ಕ್ಕೆ ಸಾಗರ ತಲುಪುತ್ತದೆ. ನಂತರ ಅಲ್ಲಿನ ಹೋಟೆಲ್‌ನಲ್ಲಿ ಫ್ರೆಶ್ ಅಪ್ ಹಾಗೂ ವಿಶ್ರಾಂತಿ ಪಡೆಯಲು ಬೆಳಗ್ಗೆ 07 ಗಂಟೆವರೆಗೆ ಅವಕಾಶ ಇರುತ್ತದೆ. ನಂತರ ಬೆಳಗ್ಗೆ 7.15ರ ಹೊತ್ತಿಗೆ ತಿಂಡಿ ತಿಂದು ವರದಹಳ್ಳಿಗೆ 0730 ತಲುಪುವುದು.., ನಂತರ ವರದಹಳ್ಳಿಯಿಂದ 8.30ಕ್ಕೆ ಹೊರಟು 9 ಗಂಟೆಗೆ ವರದಮೂಲ, ವರದಮೂಲದಿಂದ ಇಕ್ಕೇರಿ, ಇಕ್ಕೇಯಿಂದ ಕೆಳದಿ, ಕೆಳದಿಯಿಂದ ಸಾಗರ ಬರಲಿದೆ.
ಮಧ್ಯಾಹ್ನ ಸಾಗರದಲ್ಲಿ 13.15 ಗಂಟೆವರೆಗೆ ಊಟಕ್ಕೆ ಸಮಯ ನೀಡಲಾಗುತ್ತದೆ. ಊಟದ ಬಳಿಕ ಸಾಗರದಿಂದ ಜೋಗಕ್ಕೆ ಮಧ್ಯಾಹ್ನ 14.15ರ ಹೊತ್ತಿಗೆ ತೆರಳಲಿದೆ. ನಂತರ ಸಂಜೆ ಜೋಗದಿಂದ 18.15 ಹೊರಟು 19 ಗಂಟೆಗೆ ಬಸ್ ಸಾಗರ ತಲುಪಲಿದೆ. ಅಲ್ಲಿ ಒಂದು ಗಂಟೆ ಶಾಪಿಂಗ್ ಗೆ ಸಮಯ ಇರುತ್ತದೆ. ನಂತರ ರಾತ್ರಿ ಊಟ ಮುಗಿಸಿ 22.00 ಗಂಟೆಗೆ ಸಾಗರದಿಂದ ಹೊರಟು ಮರುದಿನ ಬೆಳಗ್ಗೆ 05.00 ಗಂಟೆಗೆ ಬೆಂಗಳೂರು ಬಂದು ಸೇರಲಿದೆ.
ಹಾಗೆನೇ ಬೆಂಗಳೂರು-ಸೋಮನಾಥಪುರ-ತಲಕಾಡು-ಮಧ್ಯರಂಗ-ಭರಚುಕ್ಕಿ-ಗಗನಚುಕ್ಕಿ ಮಾರ್ಗದ ವಿಶೇಷ ಟೂರ್ ಪ್ಯಾಕೇಜ್ ಪ್ರವಾಸ ಪ್ರತಿ ಶನಿವಾರ-ಭಾನುವಾರ ಇರಲಿದ್ದು, ಜುಲೈ 20ರಂದು ಆರಂಭಗೊಳ್ಳಲಿದೆ. ವಯಸ್ಕರಿಗೆ ₹ 500 ಹಾಗೂ 12 ವರ್ಷದೊಳಗಿನ ಮಕ್ಕಳಿಗೆ ₹ 350 ದರ ನಿಗದಿ ಮಾಡಲಾಗಿದೆ. ಬೆಂಗಳೂರಿನಿಂದ ಬೆಳಗ್ಗೆ 06.30 ಕ್ಕೆ ಹೊರಡಲಿದ್ದು, ಅದೇ ದಿನ ರಾತ್ರಿ 21.00 ಗಂಟೆಗೆ ಬೆಂಗಳೂರು ವಾಪಾಸ್ ಆಗಲಿದೆ.