ಬೆಂಗಳೂರು, (www.thenewzmirror.com) ;
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಶಕ್ತಿ ಯೋಜನೆ ಜಾರಿಗೆ ತರಲಾಗಿತ್ತು. ಈ ಯೋಜನೆ ಜಾರಿ ಆದ ನಂತರ ನಿರೀಕ್ಷೆಗೂ ಮೀರಿ ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳಿಗೆ ಹೆಚ್ಚಿನ ಆದಾಯವೂ ಬರುತ್ತಿದೆ. ಹೀಗಾಗಿ ನಷ್ಟದ ಹಾದಿಯಲ್ಲಿದ್ದ ಸಂಸ್ಥೆಗಳು ಇದೀಗ ಲಾಭದತ್ತ ಮುಖಮಾಡುತ್ತಿವೆ. ಹೀಗಿದ್ದರೂ ನಿಗಮಗಳಲ್ಲಿ ಲಂಚತನಕ್ಕೆ ಮಾತ್ರ ಬ್ರೇಕ್ ಬಿದ್ದಿಲ್ಲ.
ದೇಶದ ನಂಬರ್ ಒನ್ ಸಾರಿಗೆ ಸಂಸ್ಥೆ ಅಂತ ಕರೆಸಿಕೊಳ್ತಿರೋ KSRTCಯಲ್ಲಿ ಇಷ್ಟು ದಿನ ಹೊರಬಾರದ ಲಂಚಬಾಕ ಅಧಿಕಾರಿಗಳ ಮುಖವಾಡ ನಿಧಾನವಾಗಿ ಅನಾವರಣವಾಗುತ್ತಿದೆ. ಇದಕ್ಕೆ ಮತ್ತೊಂದು ಸೇರ್ಪಡೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದ ಟರ್ಮಿನಲ್ ೧ ರಲ್ಲಿ ನ್ಯೂಝ್ ಮಿರರ್ ಗೆ ಸಿಕ್ಕ ವೀಡಿಯೋ.
ಹೌದು, ಈ ವೀಡಿಯೋದಲ್ಲಿ ರೂಟ್ ಗೆ ತೆರಳೋಕೆ ಸಿದ್ದವಾಗಿರೋ ಬಸ್ ನ ನಿರ್ವಾಹಕರಿಂದ ಟರ್ಮಿನಲ್ ೧ ರಲ್ಲಿ ಟಿಸಿ( ಟ್ರಾಫಿಕ್ ಕಂಟ್ರೋಲರ್) ಯೊಬ್ಬರು ಬಸ್ ಡಿಸ್ ಪ್ಯಾಚ್ ಮಾಡುವ ವೇಳೆ ಹಣ ಪಡೆದು ಅದನ್ನ ತನ್ನ ಜೇಬಿಗೆ ಇಳಿಸಿಕೊಳ್ತಿರೋದು ನಿಗಮದಲ್ಲಿ ಇನ್ನೂ ಲಂಚಬಾಕ ಅಧಿಕಾರಿಗಳು ಇದ್ದಾರೆ ಅನ್ನೋದು ಸಾಬೀತಾಗಿದೆ.
ಸಾಮಾನ್ಯವಾಗಿ ಒಂದು ಬಸ್ ನಿಲ್ದಾಣದಿಂದ ಹೊರಡಬೇಕು ಅಂದ್ರೆ ಆ ನಿಲ್ದಾಣದಲ್ಲಿರೋ ಟಿಸಿ ಅದಕ್ಕೆ ಅನುಮತಿ ಕೊಡಬೇಕು. ಇಂತಿಷ್ಟೇ ಸಮಯಕ್ಕೆ ಬಸ್ ಹೊರಡಬೇಕು, ಇಂಥ ಸಮಯಕ್ಕೆ ನಿಲ್ದಾಣಕ್ಕೆ ಬಸ್ ಬರಬೇಕು ಅನ್ನೋದನ್ನ ಮಾನಿಟರ್ ಮಾಡುವ ಜವಾಬ್ದಾರಿ ಟಿಸಿಯವರದ್ದಾಗಿರುತ್ತೆ. ಹೀಗೆ ಬಸ್ ನಿಲ್ದಾಣಕ್ಕೆ ಬಂದ ಬಸ್ ನಿಗಧಿತ ರೂಟ್ ಗೆ ತೆರಳಬೇಕು ಅಂದ್ರೆ ಡಿಸ್ ಪ್ಯಾಚ್ ಶೀಟ್ ಗೆ ಸಹಿ ಹಾಕಿಸಿಕೊಳ್ಳಬೇಕು. ಇದರ ಜತೆಗೆ ಸೀಲ್ ಕೂಡ ಹಾಕಿಸಿಕೊಳ್ಳಬೇಕು.
ಡಿಸ್ ಪ್ಯಾಚ್ ಮಾಡಲು ಟಿಸಿಯ ಬಳಿ ಪ್ರತಿ ನಿರ್ವಾಹಕನೂ ತೆರಳಬೇಕು. ಹೀಗೆ ತೆರಳಿ ಸೀಲು ಸಹಿ ಹಾಕಿಸಿಕೊಂಡ ಬಳಿಕ ಪ್ರತಿ ನಿರ್ವಾಹಕನೂ ಐದು ರುಪಾಯೋ ಇಲ್ಲ ಹತ್ತು ರುಪಾಯೋ ಹಣ ಕೊಡಬೇಕು. ಒಂದು ವೇಳೆ ಕೊಡಲಿಲ್ಲ ಅಂದ್ರೆ ವಿನಾಕಾರಣ ಟಿಸಿ ಕಿರುಕುಳ ನೀಡ್ತಾರೆ. ನಿರ್ವಾಹಕರಿಗಿಂತ ಟಿಸಿ ಅಧಿಕಾರಿಗಳ ಹಂತದಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾರೆ. ಹೀಗಾಗಿ ಕಿರಿಕಿರಿ ಯಾಕೆ ಅಂತ ಟಿಸಿ ನಿಗದಿ ಮಾಡಿದಷ್ಟು ಹಣ ಕೊಟ್ಟು ಬಿಡ್ತಾರೆ.
ಅದಕ್ಕೂ ಮೊದಲು ನ್ಯೂಝ್ ಮಿರರ್ ಗೆ ಸಿಕ್ಕಿರೋ ವೀಡಿಯೋದಲ್ಲಿ ಏನಿದೆ ಅನ್ನೋದನ್ನ ನೋಡೋದಾದ್ರೆ.., ರಾತ್ರಿ ಸಮಯದಲ್ಲಿ ಕೆಂಪೇಗೌಡ ಬಸ್ ನಿಲ್ದಾಣ ಮೆಜೆಸ್ಟಿಕ್ ಟರ್ಮಿನಲ್ ೧ರಲ್ಲಿ ಬೆಂಗಳೂರಿನಿಂದ ದೂರದ ಊರಿಗೆ ತೆರಳಲು ಐಷರಾಮಿ ಬಸ್ ಬಂದು ನಿಂತಿತ್ತು. ಇನ್ನೇನು ನಿಗಧಿತ ರೂಟ್ ಗೆ ತೆರಳೋಕೆ ಸಿದ್ದವಾಗ್ತಿದ್ದಾಗ ಆ ಬಸ್ ನ ನಿರ್ವಾಹಕ(ಕಂಡಕ್ಟರ್) ಟಿಸಿ ಬಳಿ ಬಂದು ಡಿಸ್ ಪ್ಯಾಚ್ ಮಾಡುವಂತೆ ಕೇಳು ಬರುತ್ತಾರೆ. ಆಗ ಕರ್ತವ್ಯದಲ್ಲಿದ್ದ ಟಿಸಿ ಡಿಸ್ ಪ್ಯಾಚ್ ಶೀಟ್ ಗೆ ಮಾಹಿತಿ ಎಲ್ಲ ತುಂಬಿ ಸಹಿ ಮಾಡಿ ನಿರ್ವಾಹಕರಿಗೆ ಆ ಶೀಟ್ ನೀಡುತ್ತಾರೆ. ಹೀಗೆ ಶೀಟ್ ಪಡೆದ ನಿರ್ವಾಹಕ ಆ ಟಿಸಿಗೆ ಹತ್ತು ರೂಪಾಯಿ ನೋಟನ್ನ ಯಾರಿಗೂ ಕಾಣದಂತೆ ಕೊಡ್ತಾರೆ. ಹೀಗೆ ಪಡೆದ ಹಣವನ್ನ ಟಿಸಿ ಸಲೀಸಾಗಿ ತನ್ನ ಜೇಬಿಗೆ ಇಳಿಸಿಕೊಳ್ತಾರೆ.
ನಿರ್ವಾಹಕರು ಹೇಳೋದು ಏನು..?
ನಾವ್ ಏನ್ ಮಾಡೋಕೆ ಆಗುತ್ತೆ ಸರ್.., ಟಿಸಿಯವರು ಒಂದು ಬಸ್ ಗೆ ಇಂತಿಷ್ಟು ದುಡ್ಡು ಕೊಡಬೇಕು ಅಂತ ಅಲಿಖಿತ ನಿಯಮ ಮಾಡಿಕೊಂಡಿದ್ದಾರೆ. ಐದು ಇಲ್ಲಾಂದ್ರೆ ಹತ್ತು ರೂಪಾಯಿ ಕೊಡ್ಬೇಕು.., ಎಲ್ಲಿಂದ ಕೊಡೋಣ ಸರ್ ಅಂದ್ರೆ ಎಲ್ಲಿಂದನಾದ್ರೂ ತಂದು ಕೊಡಯ್ಯ ಅಂತ ದಬ್ಬಾಳಿಕೆ ಮಾಡ್ತಾರೆ. ಸುಮ್ನೆ ಐದು, ಹತ್ತು ರುಪಾಯಿಗೆ ಯಾಕೆ ಜಗಳ ಆಡಬೇಕು ಅಂತ ಕೊಟ್ಟು ಬರ್ತಿವಿ ಸರ್ ಅಂತ ಹೇಳ್ತಾರೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಸಂಚಾರ ಮಾಡುವ ಕೆಎಸ್ ಆರ್ ಟಿಸಿ ಬಸ್ ನ ನಿರ್ವಾಹಕ ತಮ್ಮ ಅಳಲನ್ನ ತೋಡಿಕೊಳ್ತಾರೆ.
ಇದೊಂದೇ ನಿಲ್ದಾಣದಲ್ಲಿ ಮಾತ್ರವಲ್ಲ…!
ಇನ್ನು ನಿರ್ವಾಹಕರಿಂದ ಟಿಸಿಗಳು ಹಣ ಪಡೆಯೋದು, ಪ್ರತಿ ಬಸ್ ಗೆ ಇಂತಿಷ್ಟೇ ದುಡ್ಡುಕೊಡಿ ಅಂತ ಲಂಚ ಕೇಳೋದು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲ ಮಾತ್ರವಲ್ಲ ಬಹುತೇಕ ನಿಲ್ದಾಣಗಳಲ್ಲೂ ಇದೇ ರೀತಿ ಇದೆ. ಇದನ್ನ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದ್ರೂ ಯಾವ್ದೇ ಪ್ರಯೋಜನವಾಗಿಲ್ಲ ಅಂತ ಬೇಸರ ವ್ಯಕ್ತಪಡಿಸ್ತಾರೆ ಕೆಎಸ್ ಆರ್ ಟಿಸಿ ನೌಕರರ ಕೂಟದ ಪದಾಧಿಕಾರಿಗಳು..!
ಇನ್ನು ರಾಜ್ಯದ ಸಾರಿಗೆ ಸಂಸ್ಥೆಗಳಲ್ಲಿ ತಾಂಡವವಾಡ್ತಿರೋ ಲಂಚಾವತಾರ, ಅವ್ಯವಸ್ಥೆ ಕುರಿತಂತೆ ನಿಮ್ಮ ನ್ಯೂಝ್ ಮಿರರ್ ನಿರಂತರವಾಗಿ ಸುದ್ದಿ ವರದಿ ಮಾಡುವ ಕೆಲಸವನ್ನ ಮಾಡುತ್ತಿದೆ. ಅಷ್ಟೇ ಅಲ್ದೇ ಆಡಳಿತ ವರ್ಗಕ್ಕೆ ಅದನ್ನ ತಲುಪಿಸೋ ಕೆಲ್ಸವನ್ನೂ ಮಾಡುತ್ತಿದೆ. ಮುಂದಿನ ದಿನಗಳಲ್ಲೂ ಇದು ಮುಂದುವರೆಯಲಿದ್ದು, ಭ್ರಷ್ಟ ವ್ಯವಸ್ಥೆಯನ್ನ ಹೋಗಲಾಡಿಸೋಕೆ ಸಣ್ಣ ಅಳಿಲು ಸೇವೆ ನಮ್ಮದು.