ಬೆಂಗಳೂರು, (www.thenewzmirror.com) ;
KSRTC ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಹಾಡ ಹಗಲೇ ಕಂಡಕ್ಟರ್ ಗಳಿಂದ ಎಂಜಲು ಕಾಸಿಗೆ ಕೈ ಒಡ್ಡುವ ಅಧಿಕಾರಿಯ ಕರ್ಮ ಕಾಂಡವನ್ನ ಬಯಲಿಗೆ ಎಳೆದಿದ್ದ ನಿಮ್ಮ thenewzmirror ಇದೀಗ ಮತ್ತೊಂದು ಅಕ್ರಮವನ್ನ ಹೊತ್ತು ನಿಮ್ಮ ಮುಂದೆ ಬಂದಿದೆ..,
ಮಲೆನಾಡಿನ ಹೆಬ್ಬಾಗಿಲು.., ವಿಶ್ವ ವಿಖ್ಯಾತ ಜೋಗ ಜಲಪಾತವಿರುವ ಜಿಲ್ಲೆಯಲ್ಲಿ ಇಂಥ ಭ್ರಷ್ಟ ಅಧಿಕಾರಿಗಳಿಂದ ಜಿಲ್ಲೆಯ ಜನ ತಲೆ ತಗ್ಗಿಸುವಂತಾಗಿದೆ. ಕೆಎಸ್ಸಾರ್ಟಿಸಿಯಲ್ಲಿ ಎಂಜಲು ಕಾಸಿಗೆ ಒಡ್ಡುವ ಭ್ರಷ್ಟ ಅಧಿಕಾರಿಗೆ ಕಡಿವಾಣ ಹಾಕದಿದ್ದರೆ ನಿಗಮದ ಆದಾಯ ಮತ್ತಷ್ಟು ಪಾತಾಳಕ್ಕೆ ಹೋಗುವಂತಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ಆಯ ಕಟ್ಟಿನ ಸ್ಥಳದಲ್ಲಿ ಹಲವು ವರ್ಷಗಳಿಂದ ಮೊಳೆ ಹೊಡೆದುಕೊಂಡು ಕೂತಿರುವ ಕೆಲ ಅಧಿಕಾರಿಗಳಿಗೆ ಮೇಲಾಧಿಕಾರಿಗಳ ಭಯವೇ ಇಲ್ಲದಂತಾಗಿದೆ. ಆನೆ ನಡೆದಿದ್ದೆ ಹಾದಿ ಎನ್ನುವಂತೆ ತಾವು ಮಾಡಿದ್ದೇ ರೂಲ್ಸು..,ತಾವು ಆಡಿದ್ದೇ ಆಟ ಎನ್ನುವಂತಾಗಿದೆ. ಇದಕ್ಕೆ ಪೂರಕ ಎನ್ನುವಂತೆ ಪ್ರತಿ ಸಿಬ್ಬಂದಿಯಿಂದ ನೂರಾರು ರೂಪಾಯಿ ಹಣ ಪೀಕುವ ಸಂಸ್ಕೃತಿ ಚಾಲ್ತಿಯಲ್ಲಿದೆಯಂತೆ.
ಶಿವಮೊಗ್ಗ ವಲಯದ ಸಾಗರ ಡಿಪೋದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಡಿಪೋ ಮ್ಯಾನೇಜರ್ ಸಿ ರಾಜಪ್ಪ 2016 ರಿಂದ ಒಂದೇ ಜಾಗದಲ್ಲಿ ಠಿಕಾಣಿಹೊಡೆದುಕೊಂಡು ಕೂತಿದ್ದಾರೆ. ಅವರನ್ನ ಬೇರೆಡೆಗೆ ವರ್ಗಾವಣೆ ಮಾಡಿದರೂ ಸ್ಥಳೀಯ ಜನನಾಯಕರ ಪ್ರಭಾವ ಬಳಸಿಕೊಂಡು ಮತ್ತದೇ ಜಾಗಕ್ಕೆ ಬಂದು ಕೂರೂವ ರಾಜಪ್ಪ ಅವ್ರ ಆಟಾಟೋಪಕ್ಕೆ ಸಿಬ್ಬಂದಿ ಬೇಸತ್ತಿದ್ದಾರೆ. ಮೂಲಗಳ ಪ್ರಕಾರ ಸ್ಥಳೀಯ ಶಾಸಕ ಬೇಳೂರು ಗೋಪಾಲಕೃಷ್ಣ ಅವ್ರ ದೂರದ ಸಂಬಂಧಿ ಎಂದು ರಾಜಪ್ಪ ಹೇಳಿಕೊಳ್ಳುತ್ತಿದ್ದಾರಂತೆ.
ರಾಜಪ್ಪ ರಾಜಕೀಯ ಪ್ರಭಾವ ಬಳಸಿ ವರ್ಗಾವಣೆ ಆಗದೆ ಇರೋದು ಸಮಸ್ಯೆ ಅಲ್ಲ ಬದಲಾಗಿ K. M. P. L. ಬಂದಿಲ್ಲ ಎಂಬ ಕಾರಣವೊಡ್ಡಿ ಚಾಲನಾ ಸಿಬ್ಬಂದಿಗಳಿಂದ ಹಣ ಪಡೆಯುತ್ತಿದ್ದಾರಂತೆ. ಶಕ್ತಿ ಯೋಜನೆ ಜಾರಿಯಾದ ಬಳಿಕ ಪ್ರತಿ ಬಸ್ ನಲ್ಲಿ ನಿರೀಕ್ಷೆಗೂ ಮೀರಿ ಪ್ರಯಾಣಿಕರು ಕೆಲ ವೇಳೆ ಪ್ರಯಾಣ ಮಾಡುತ್ತಿದ್ದಾರೆ. ಹೆಚ್ಚಿನ ಪ್ರಯಾಣಿಕರು ಬಸ್ ನಲ್ಲಿ ಇದ್ದಾಗ K. M. P. L. ನಿರೀಕ್ಷೆ ಮಾಡೋದು ಕಷ್ಟ ಸಾಧ್ಯ. ಹೀಗಿರುವಾಗ ಇದನ್ನೇ ನೆಪವೊಡ್ಡಿ ಲಂಚದ ರೂಪದಲ್ಲಿ ಹಣ ಪಡೆಯುತ್ತಿದ್ದಾರೆ ಅನ್ನೋ ಆರೋಪ ಕೆಲ ಸಿಬ್ಬಂದಿ ಮಾಡುತ್ತಿದ್ದಾರೆ.
ಪ್ರತಿ ಚಾಲನಾ ಸಿಬ್ಬಂದಿಯಿಂದ ಕನಿಷ್ಠ 200 ರೂಪಾಯಿ ಲಂಚ ಪಡೆಯುತ್ತಿದ್ದಾರಂತೆ. ಲಂಚ ಕೊಡಲು ನಿರಾಕರಣೆ ಮಾಡಿದರೆ ಅಂಥವ್ರಿಗೆ ಮನಸೋ ಇಚ್ಛೆ ನಿಂದನೆ ಮಾಡುವುದು ಹಾಗೆನೇ ವಿನಾಕಾರಣ ಕಿರುಕುಳ ನೀಡುವ ಕೆಲ್ಸವನ್ನ ಮಾಡ್ತಿದ್ದಾರೆ ಅಂತ ಹೆಸರು ಹೇಳಲು ಇಚ್ಚಿಸದ ಸಿಬ್ಬಂದಿ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.
ಬೆಂಗಳೂರಿನ ಅಧಿಕಾರಿಗಳಿಗೆ ರಾಜಾತಿಥ್ಯ..!
ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ದೇವಸ್ಥಾನ ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನ ಹಾಗೂ ಜೋಗ ಜಲಪಾತ ವೀಕ್ಷಣೆಗೆ ಬೆಂಗಳೂರಿನ ಕೇಂದ್ರ ಕಚೇರಿಯಿಂದ ಯಾರಾದರೂ ಅಧಿಕಾರಿಗಳು ಬಂದರೆ ಅವ್ರಿಗೆ ರಾಜಪ್ಪ ರಾಜಾತಿಥ್ಯ ನೀಡುತ್ತಾರಂತೆ. ಪ್ರವಾಸಕ್ಕೆ ಬರುವ ಅಧಿಕಾರಿಗಳಿಗೆ ಅಡಿಯಿಂದ ಮುಡಿವರೆಗೂ ಎಲ್ಲ ರೀತಿಯ ಎಲ್ಲ ಸೇವೆ ನೀಡುವ ಇಂಥ ಅಧಿಕಾರಿಗೆ ಕೆಲ ಹಿರಿಯ ಅಧಿಕಾರಿಗಳ ಶ್ರೀರಕ್ಷೆ ಇದೆಯಂತೆ.., ಯಾರಾದರೂ ಸಿಬ್ಬಂದಿ ಅಸಮಧಾನ ಹೊರಹಾಕಿದರೆ ಏಕ ವಚನದಲ್ಲಿ ನಿಂದನೆ ಮಾಡುವುದಲ್ಲದೇ ನಿನ್ನನ್ನೇ ವರ್ಗಾವಣೆ ಮಾಡಿಸುತ್ತೇನೆ ಎಂದು ಅವಾಝ್ ಕೂಡ ಹಾಕುತ್ತಾರಂತೆ ರಾಜಪ್ಪ.
ವರ್ಗಾವಣೆಗೆ 30000 ಲಂಚವಂತೆ…!
ಇದು ಸಾಗರ ಡಿಪೋದ ಕರ್ಮಕಾಂಡವಾದರೆ ಇನ್ನು ಶಿವಮೊಗ್ಗ ವಿಭಾಗದಲ್ಲಿ ಹಗಲು ದರೋಡೆ…, ಒಂದು ಘಟಕದಿಂದ ಮತ್ತೊಂದು ಘಟಕಕ್ಕೆ ವರ್ಗಾವಣೆ ಮಾಡಬೇಕದಂತೆ ಸಾವಿರಾರು ರೂಪಾಯಿ ಲಂಚ ಕೊಡ್ಬೇಕಂತೆ.., ಶಿವಮೊಗ್ಗ ವಿಭಾಗದ ವಿಭಾಗೀಯ ನಿಯಂತ್ರಣ ಅಧಿಕಾರಿ ವಿಜಯ ಕುಮಾರ್.ಜಿ. ಮತ್ತು ವಿಭಾಗೀಯ ಸಂಚಲನಾಧಿಕಾರಿ ದಿನೇಶ್ ಚನ್ನಗಿರಿ ಕೇಳಿದಷ್ಟು ಲಂಚ ಕೊಟ್ಟರೇ ಅವರನ್ನ ಬೇರೆ ಘಟಕಕ್ಕೆ ವರ್ಗಾವಣೆ ಮಾಡುತ್ತಾರಂತೆ ಇಲ್ಲಾಂದ್ರೆ ಅದೇ ಘಟಕದಲ್ಲೇ ಕೆಲ್ಸ ಮುಂದುವರೆಸಬೇಕು. ಹೀಗೆ ಬೇರೆ ಘಟಕಕ್ಕೆ ವರ್ಗಾವಣೆ ಬಯಸಿ ತೆರಳಿದ್ದ ಸಿಬ್ಬಂದಿಯೊಬ್ಬರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಬರೋಬ್ಬರಿ 30000 ಸಾವಿರ ಲಂಚ ಕೇಳಿದ್ದಾರಂತೆ. ಈ ವಿಚಾರವನ್ನ thenewzmirror ಗೆ ಅವರೇ ಒಪ್ಪಿಕೊಂಡಿದ್ದಾರೆ.
ಹೀಗೆ ವರ್ಗಾವಣೆಗೆ ಸಾವಿರಾರು ರೂಪಾಯಿ ಲಂಚ ಪಡೆಯುವ ಹಿರಿಯ ಅಧಿಕಾರಿಗಳು ಇರುವಾಗ
ವಿಜಯ ಕುಮಾರ್ ಮತ್ತು ಶ್ರೀ ದಿನೇಶ್ ಚನ್ನಗಿರಿಯವರು ಒಂದು ಘಟಕದಿಂದ ಮತ್ತೋಂದು ಘಟಕಕ್ಕೆ ವರ್ಗಾವಣೆ ಮಾಡಿ ಆದೇಶ ಮಾಡಲು 15-20 ಸಾವಿರ ರೂಪಾಯಿಗಳನ್ನು ಪಡೆಯುವ ಇವರನ್ನು ನೋಡಿದರೆ ಇನ್ನು ಕೇವಲ ಸಾಗರ ಘಟಕದ ಅಧಿಕಾರಿಗಳು 200, 300 ಲಂಚ ಪಡೆಯುವುದರಲ್ಲಿ ತಪ್ಪಿಲ್ಲ ಎನ್ನುವ ಅಭಿಪ್ರಾಯ ಸಿಬ್ಬಂದಿಯಿಂದ ಕೇಳಿ ಬರುತ್ತಿದೆ. ಇನ್ನೊಂದು ಮೂಲಗಳ ಪ್ರಕಾರ ರಾಜಪ್ಪ ಅವ್ರಿಗೆ ಶಿವಮೊಗ್ಗ ವಲಯದ ಕೆಲ ಹಿರಿಯ ಅಧಿಕಾರಿಗಳ ಕೃಪ ಕಟಾಕ್ಷವಿದ್ದು ಅವರು ಪಡೆಯುತ್ತಿದ್ದಾರೆ ಎನ್ನುವ ಲಂಚ ಹಣದಲ್ಲಿ ಹಿರಿಯ ಅಧಿಕಾರಿಗಳಿಗೂ ಪಾಲಿದೆಯಂತೆ.
ಇನ್ನು ರಾಜಪ್ಪ ಅವರ ಕುರಿತಾದ ಆರೋಪಕ್ಕೆ ಸಂಬಂಧಪಟ್ಟಂತೆ ರಾಜಪ್ಪ ಅವ್ರಿಗೆ ಹಲವು ಬಾರಿ ಕರೆ ಮಾಡಿದರೂ ಅವರು ಫೋನ್ ರಿಸಿವ್ ಮಾಡಲಿಲ್ಲ. ಹಾಗೆನೇ ಶಿವಮೊಗ್ಗ ವಿಭಾಗದ ವಿಭಾಗೀಯ ನಿಯಂತ್ರಣ ಅಧಿಕಾರಿ ವಿಜಯ ಕುಮಾರ್ ಅವರಿಗೆ ಕರೆ ಮಾಡಿದರೂ ಅವ್ರಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಲಿಲ್ಲ.
ಸಂಸ್ಥೆಯಲ್ಲಿ ಭ್ರಷ್ಟತೆ ಇದು ಅದು ಬಯಲಾಗುತ್ತಿದ್ದರೂ ಅವ್ರ ವಿರುದ್ಧ ಮೌನ ವಹಿಸಿರೋದನ್ನ ನೋಡಿದರೆ ಸಂಸ್ಥೆಯಲ್ಲಿ ಕಾರ್ಮಿಕ ಸಿಬ್ಬಂದಿಗಳಿಗೆ ಒಂದು ನ್ಯಾಯ ಅಧಿಕಾರಿಗಳಿಗೆ ಒಂದು ನ್ಯಾಯಾವೇ ಎಂಬಂತೆ ಆಗಿದೆ. ಆದುದರಿಂದ ಕೂಡಲೇ ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತು ಪಡಿಸಿ ಸೂಕ್ತ ಶಿಸ್ತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರಿಗೆ ನೌಕರರ ಮುಖಂಡರು ಮನವಿ ಮಾಡುತ್ತಿದ್ದಾರೆ.
ಓರ್ವ ನಿರ್ವಾಹಕ ಬಸ್ಸಿನಲ್ಲಿ ಓರ್ವ ಪ್ರಯಾಣಿಕರಿಗೆ ಟಿಕೆಟ್ ನೀಡಲಿಲ್ಲ ಎಂದರೆ ಅವರನ್ನ ಅಮಾನತು ಮಾಡುವ ಅಧಿಕಾರಿಗಳಿಗೆ ಸಂಸ್ಥೆಗೆ ಕೆಟ್ಟ ಹೆಸರು ತರುತ್ತಿರುವ ಅಧಿಕಾರಿಗಳು ಕಣ್ಣಿಗೆ ಕಾಣುತಿಲ್ವಾ.? ಕೂಡಲೇ ಸಂಸ್ಥೆಗೆ ಧಕ್ಕೆ ತರುತ್ತಿರೋ ಇಂಥ ಭ್ರಷ್ಟ ಅಧಿಕಾರಿಗಳ ವಿರುದ್ಧ ಸರಳ ಸಜ್ಜನಿಕೆ ಹಾಗೂ ಸಾರಿಗೆ ಸಚಿವರಾದ ಮೇಲೆ ಸಂಸ್ಥೆಯ ಕೆಲ ಅಕ್ರಮಗಳ ವಿರುದ್ಧ ಕಠಿಣ ಆದೇಶ ಕೊಟ್ಟಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕ್ರಮಕ್ಕೆ ಮುಂದಾಗಬೇಕಿದೆ.