ಬೆಂಗಳೂರು, (www.thenewzmirror.com) :
ರಾಜ್ಯದಲ್ಲಿ ಲೋಕಸಭೆ ಕಾವು ಏರುತ್ತಿದೆ. ಇದರ ನಡುವೆ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರವನ್ನೂ ಮಾಡುತ್ತಿವೆ. ಕರ್ನಾಟಕದಲ್ಲಿ ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಂಡು ಲೋಕ ಸಮರ ಎದುರಿಸೋಕೆ ಸಿದ್ದವಾಗಿವೆ.
ಲೋಕಸಭಾ ಚುನಾವಣೆಗೆ ಬಿಜೆಪಿ ಜೊತೆಗೆ ಮೈತ್ರಿಯಾಗಿರುವ ಜೆಡಿಎಸ್ ಗೆ ಈ ಬಾರಿ ಹಾಸನ ಲೋಕಸಭಾ ಕ್ಷೇತ್ರ ಪ್ರತಿಷ್ಠೆಯಾಗಿದೆ. ಈಗಾಗಲೇ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಹಾಸನ ಅಭ್ಯರ್ಥಿಯನ್ನಾಗಿ ಪ್ರಜ್ವಲ್ ರೇವಣ್ಣ ಅವರನ್ನು ಘೋಷಿಸಿದ್ದು, ದೇವೇಗೌಡರ ಕುಟುಂಬ ಈಗಾಗಲೇ ಚುನಾವಣಾ ಪ್ರಚಾರವನ್ನ ಆರಂಭಿಸಿದೆ.
ಹಾಸನ ಜೆಡಿಎಸ್ ನಾಯಕರ ಜೊತೆಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡ್ರು ನಿರಂತರ ಸಭೆಗಳನ್ನ ನಡೆಸಿ ಗೆಲುವಿನ ತಂತ್ರಗಾರಿಕೆ ಸಿದ್ದಪಡಿಸುತ್ತಿದ್ದಾರೆ. ಇತ್ತ ರೇವಣ್ಣ ದಂಪತಿ ಮನೆ ಮನೆ ಪ್ರಚಾರವನ್ನ ಕೈಗೊಂಡಿದ್ದು ಮಗನ ಪರ ಮತಯಾಚನೆ ಮಾಡುತ್ತಿದ್ದಾರೆ.
ಇದರ ಬೆನ್ನಲ್ಲೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್ ಡಿ ಕುಮಾರಸ್ವಾಮಿ ಅವರು ಸಹ ಸ್ಥಳೀಯ ನಾಯಕರ ಜೊತೆಗೆ ಸಭೆ ನಡೆಸಿದ್ದಾರೆ. ಹಾಸನದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿ, ಪ್ರಜ್ವಲ್ ರೇವಣ್ಣನ ಮಗ ಅಲ್ಲ ನನ್ನ ಮಗ. ಬಹಳಷ್ಟು ಬದಲಾವಣೆ ತರುತ್ತೇನೆ. ಅವನೂ ಬದಲಾಗುತ್ತಾನೆ ಎಲ್ಲಾ ರೀತಿಯ ಬದಲಾವಣೆ ತರಲು ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ಕುಮಾರಸ್ವಾಮಿ ಭರವಸೆ ಕೊಟ್ರು.
ಪ್ರಜ್ವಲ್ ಗೆ ಸ್ವಲ್ಪ ಮುಂಗೋಪ ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ ಅವನನ್ನು ಕ್ಷಮಿಸಿಬಿಡಿ, ನಮ್ಮಲ್ಲಿ ತಪ್ಪುಗಳಾಗಿರಬಹುದು ಆದರೆ ತಿದ್ದುಕೊಳ್ಳಲು ಅವಕಾಶ ಕೊಡಿ ಎಂದು ಮನವಿ ಮಾಡಿದಲ್ಲದೆ ಈ ಪಕ್ಷವನ್ನು ಮುಗಿಸಲು ಹೊರಟಿದ್ದಾರೆ, ದಯವಿಟ್ಟು ಪಕ್ಷ ಉಳಿಸಿಕೊಡಿ, ನನ್ನ ಹತ್ತಿರ ಟನ್‌ಗಟ್ಟಲೆ ದುಡ್ಡು ಇಲ್ಲ. ನಾನು ಆಸ್ತಿ ಸಂಪಾದನೆ ಮಾಡಿಲ್ಲ ನಿಮ್ಮಂತಹ ಲಕ್ಷಾಂತರ ಜನರನ್ನು ಸಂಪಾದಿಸಿದ್ದೇನೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಭಾವುಕರಾದರು.