ಬೆಂಗಳೂರು, (www.thenewzmirror.com) :
ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ತನ್ನ ಎರಡನೇ ಪಟ್ಟಿಬಿಡುಗಡೆ ಮಾಡಿದೆ. ಇದರಲ್ಲಿ ದಾವಣಗೆರೆ ಕ್ಷೇತ್ರದಿಂದ ಹಾಲಿ ಸಂಸದ ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರಗೆ ಲೋಕಸಭಾ ಟಿಕೆಟ್ ಪ್ರಕಟವಾಗಿದೆ. ಇದರ ಬೆನ್ನಲ್ಲೇ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ರೇಣುಕಾಚಾರ್ಯ ಅಸಮಧಾನಗೊಂಡಿದ್ದಾರೆ.
ಟಿಕೆಟ್ ಘೋಷಣೆಗೂ ಮುನ್ನ ರೇಣುಕಾಚಾರ್ಯ ದಾವಣಗೆರೆ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ ಕುಟುಂಬಕ್ಕೆ ಯಾವ ಕಾರಣಕ್ಕೂ ಟಿಕೆಟ್ ನೀಡಬಾರದು. ಟಿಕೆಟ್ ನೀಡಿದರೆ ಅವರಿಗೆ ನಮ್ಮ ಬೆಂಬಲ ಇರುವುದಿಲ್ಲ. ಈಗಿರೋ ಲೋಕಸಭಾ ಸದಸ್ಯರು ನಾಲ್ಕು ಬಾರಿ ಗೆದ್ದಿದ್ದಾರೆ, ನಾವು ಸೋತಿರಬಹುದು.
ಕ್ಷೇತ್ರದಲ್ಲಿ ಅವರಿಗೆ ವಿರೋಧವಿದೆ, ಹೀಗಿರುವಾಗ ಅವರಿಗಾಗಲೀ ,ಅವರ ಕುಟುಂಬಕ್ಕಾಗಲಿ ಟಿಕೆಟ್ ನಿಡೋದು ಬೇಡ. ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ವಿರುದ್ಧ ಹೋರಾಟ ಮಾಡಿರುವವನು ನಾನೊಬ್ಬನೇ. ನನಗೆ ಟಿಕೆಟ್ ಕೊಡಿ, ನನ್ನ ಹೆಂಡತಿಗೆ ಕೊಡಿ, ಇಲ್ಲ ಮಕ್ಕಳಿಗೆ ಕೊಡಿ ಅಂತ ಹೇಳ್ತಿದ್ದಾರೆ. ಅವರ ದುರಹಂಕಾರದ ಮಾತುಗಳ ಬಗ್ಗೆ ವಿರೋಧ ಇದೆ ಎಂದು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಬಹಿರಂಗವಾಗಿ ಹೇಳಿದ್ದರು.
ಇದೀಗ ಸ್ಥಳೀಯ ನಾಯಕರ ವಿರೋಧದ ಮಧ್ಯೆಯೂ ಹಾಲಿ ಸಂಸದ ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರಗೆ ಲೋಕಸಭಾ ಟಿಕೆಟ್ ಪ್ರಕಟವಾಗುತ್ತಿದ್ದಂತೆ ದಾವಣಗೆರೆ ಬಿಜೆಪಿಯಲ್ಲಿ ಬಂಡಾಯದ ಕಹಳೆ ಮೊಳಗಿದೆ. ಮಾಜಿ ಸಚಿವ ಎಂಪಿ ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ್, ಮಾಜಿ ಶಾಸಕ ಗುರುಸಿದ್ದನಗೌಡ ಪುತ್ರ ಡಾ. ರವೀಂದ್ರ ಸಭೆ ಸೇರಲು ತೀರ್ಮಾನ ಮಾಡಿದ್ದು, ಅಸಮಾಧಾನಗೊಂಡ ರೇಣುಕಾಚಾರ್ಯ ಅಂಡ್ ಟೀಮ್ ಬಿಜೆಪಿ ನಾಯಕರು ಮತ್ತು ಹಾಲಿ ಸಂಸದ ಸಿದ್ದೇಶ್ವರ್‌ಗೆ ಪಾಠ ಕಲಿಸಲು ಮುಂದಾಗಿದೆ.