ಬೆಂಗಳೂರು, (www.thenewzmirror.com) ;
ಕಾರು ತಯಾರಿಕೆಯಲ್ಲಿ ಅಗ್ರಮಾನ್ಯ ಸ್ಥಾನ ಪಡೆದಿರೋ ಹಾಗೆನೇ ದೇಶದ ಅಗ್ರ ಕಾರು ಉತ್ಪಾದನಾ ಕಂಪನಿಯಾಗಿರೋ ಮಾರುತಿ ಸುಜುಕಿ ತನ್ನ ಹೊಸ ಗ್ರಾಹಕರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಹೊಸ ಕಾರುಗಳ ಖರೀದಿ ಮೇಲೆ ಅತ್ಯುತ್ತಮ ಆಫರ್‌ಗಳನ್ನು ನೀಡಿದ್ದು, ಇನ್ಮುಂದೆ ಹೊಸ ಕಾರು ಖರೀದಿಸುವ ಪ್ರತಿಯೊಬ್ಬ ಗ್ರಾಹಕರಿಗೂ ಅನ್ವಯಿಸುವಂತೆ ಹೊಸ ಸ್ಟ್ಯಾಂಡರ್ಡ್ ವಾರಂಟಿ ಯೋಜನೆಯನ್ನು ಪ್ರಕಟಿಸಿದೆ.
ಇಷ್ಟು ದಿನ ಸಂಸ್ಥೆ ಪ್ರತಿಯೊಂದು ಕಾರಿನ ಮೇಲೂ ನೀಡಲಾಗುತ್ತಿದ್ದ 2 ವರ್ಷ ಅಥವಾ 40 ಸಾವಿರ ಕಿ.ಮೀ ಗಳ ವಾರಂಟಿಯನ್ನು ಇದೀಗ 3 ವರ್ಷ ಅಥವಾ 1 ಲಕ್ಷ ಕಿ.ಮೀ ಗೆ ವಿಸ್ತರಿಸಲಾಗಿದೆ. 3 ವರ್ಷ ಅಥವಾ 1 ಲಕ್ಷ ಕಿ.ಮೀ ವಾರಂಟಿಯು ಇದೀಗ ಮಾರುತಿ ಸುಜುಕಿ ನಿರ್ಮಾಣದ ಪ್ರತಿಯೊಂದು ಕಾರು ಮಾದರಿಗೂ ಇಂದಿನಿಂದಲೇ ಅನ್ವಯಿಸುವಂತೆ ಜಾರಿಗೆ ತರಲಾಗಿದೆ.
ಹೊಸ ಕಾರು ಉತ್ಪನ್ನಗಳಿಗೆ ಇದೀಗ ಮತ್ತಷ್ಟು ಸುರಕ್ಷತೆ ದೊರೆಯಲಿದೆ. ಈ ಮೂಲಕ ಮಾರುತಿ ಸುಜುಕಿ ಕಂಪನಿಯು ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸಿದ್ದು, ಟೊಯೊಟಾ ಕಾರುಗಳಿಗೆ ಸಮವಾಗಿ ಹೊಸ ವಾರಂಟಿಗಳನ್ನು ನೀಡುತ್ತಿದೆ.
ಮಾರುತಿ ಸುಜುಕಿ ಕಂಪನಿಯು ಸದ್ಯ ಎರಡು ಮಾದರಿಗಳಲ್ಲಿ ಹೊಸ ಕಾರುಗಳನ್ನು ಮಾರಾಟಮಾಡುತ್ತಿದ್ದು, ಸಾಮಾನ್ಯ ಕಾರುಗಳನ್ನು ಅರೆನಾ ಡೀಲರ್ಸ್‌ಗಳ ಮೂಲಕ ಮತ್ತು ಪ್ರೀಮಿಯಂ ಕಾರುಗಳನ್ನು ನೆಕ್ಸಾ ಡೀಲರ್ಸ್‌ಗಳ ಮೂಲಕ ಮಾರಾಟ ಮಾಡುತ್ತಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಒಟ್ಟು 17 ಕಾರು ಮಾದರಿಗಳನ್ನು ಮಾಡುತ್ತಿರುವ ಮಾರುತಿ ಸುಜುಕಿ ಕಂಪನಿಯು ಹೊಸ ವಾರಂಟಿ ಯೋಜನೆ ಮೂಲಕ ಪ್ರತಿಸ್ಪರ್ಧಿಗಳಿಗೆ ಮತ್ತಷ್ಟು ಪೈಪೋಟಿ ನೀಡಲಿದೆ.
ಹೊಸ ಸ್ಟ್ಯಾಂಡರ್ಡ್ ವಾರಂಟಿ ಯೋಜನೆಯ ಜೊತೆಗೆ ಮಾರುತಿ ಸುಜುಕಿ ಕಂಪನಿಯು ಆಸಕ್ತ ಗ್ರಾಹಕರಿಗೆ ಹೆಚ್ಚುವರಿ ಮೊತ್ತದೊಂದಿಗೆ ಹೊಸದಾಗಿ 6 ವರ್ಷಗಳು ಅಥವಾ 1.6 ಲಕ್ಷ ಕಿ.ಮೀ ವಿಸ್ತರಿತ ವಾರಂಟಿ ಸೌಲಭ್ಯವನ್ನು ನೀಡುತ್ತಿದೆ. ಇದರೊಂದಿಗೆ ಈ ಹಿಂದಿನ 4 ವರ್ಷಗಳು ಅಥವಾ 1.2 ಲಕ್ಷ ಕಿ.ಮೀ ವಿಸ್ತರಿತ ವಾರಂಟಿಯನ್ನು ಇದೀಗ 5 ವರ್ಷಗಳು ಅಥವಾ 1.4 ಲಕ್ಷ ಕಿ.ಮೀ ಗಳಿಗೆ ವಿಸ್ತರಿಸಲಾಗಿದೆ.