ಟರೋಬ , (www.thenewzmirror.com) ;
ಪುರುಷರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ. ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ದ.ಆಫ್ರಿಕಾ ಅಫ್ಘಾನಿಸ್ತಾನ ತಂಡವನ್ನ ಮಣಿಸುವ ಮೂಲಕ ಫೈನಲ್ ಪ್ರವೇಶ ಪಡೆದಿದೆ.
ಅಫ್ಘಾನಿಸ್ತಾನ ಸೂಪರ್ 8 ಪಂದ್ಯದಲ್ಲಿ ಬಲಿಷ್ಠ ತಂಡಗಳನ್ನು ಮಣಿಸಿ ಇದೇ ಮೊದಲ ಬಾರಿಗೆ ಐಸಿಸಿ ಟಿ20 ವಿಶ್ವಕಪ್ ಸೆಮಿ ಫೈನಲ್ ಪ್ರವೇಶ ಮಾಡಿತ್ತು. ಆದರೆ ಆಫ್ರಿಕಾದ ದಾಳಿಗೆ ನಲುಗಿದ ಅಫ್ಘನ್ನರು ಅಲ್ಪ ಮೊತ್ತಕ್ಕೆ ಆಲ್ಔಟ್ ಆಗುವ ಮೂಲಕ ದಕ್ಷಿಣ ಆಫ್ರಿಕಾ ಮುಂದೆ 9 ವಿಕೆಟ್ ಗಳ ಅಂತರದ ಸೋಲನ್ನ ಒಪ್ಪಿಕೊಂಡಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘನ್ 11.5 ಓವರ್ ಗಳಲ್ಲಿ 56 ರನ್ ಗಳಿಸಲಷ್ಟೇ ಶಕ್ತವಾಯ್ತು. ಅಲ್ಪ ಮೊತ್ತ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಒಂದು ವಿಕೆಟ್ ಕಳೆದುಕೊಂಡು 8.5 ಓವರ್ ಗಳಲ್ಲಿ 60 ರನ್ ಗಳಿಸಿ ವಿಜಯಿಯಾಯಿತು.
ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ಗುರ್ಬಾಜ್ ಆದಿಯಾಗಿ ಯಾವೊಬ್ಬ ಬ್ಯಾಟ್ಸ್ ಮನ್ ನಿಂದ ಗೇಳಿಕೊಳ್ಳುವ ಪ್ರದರ್ಶನ ಬರಲಿಲ್ಲ. ಇದರ ಫಲವಾಗಿಯೇ ಆಫ್ರಿಕಾ ಮೊದಲ ಬಾರಿಗೆ ಫೈನಲ್ ಗೆ ಪ್ರವೇಶ ಪಡೆಯಲು ಸಹಕಾರಿಯಾಯ್ತು.
ಪಂದ್ಯದಲ್ಲಿ ಇನ್ನೊಂದು ಅಚ್ಚರಿ ಅಂದರೆ ಯಾವೊಬ್ಬ ಬ್ಯಾಟ್ಸ್ ಮನ್ ಗಳಿಸಿದ್ದ ರನ್ ಗಿಂತ ಹೆಚ್ಚು ರನ್ ಬಂದಿದ್ದು ಇತರೆ(Extra) ರನ್ ಗಳಿಂದ.
ದಕ್ಷಿಣ ಆಫ್ರಿಕಾ ಪರ ಮಾರ್ಕೋ ಎನ್ಸನ್ ಮತ್ತು ಶಮ್ಸಿ ತಲಾ ಮೂರು ವಿಕೆಟ್ ಕಿತ್ತರೆ, ನೋಕ್ಯಾ ಮತ್ತು ರಬಾಡಾ ತಲಾ ಎರಡು ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವು ಮೊದಲ ಓವರ್ ನಲ್ಲಿಯೇ ಡಿಕಾಕ್ ರೂಪದಲ್ಲಿ ವಿಕೆಟ್ ಕಳೆದುಕೊಂಡಿತು. ಆದರೆ ಎರಡನೇ ವಿಕೆಟ್ ಗೆ ಜೊತೆಯಾದ ನಾಯಕ ಮಾರ್ಕ್ರಮ್ ಮತ್ತು ರೀಜಾ ಹೆಂಡ್ರಿಕ್ಸ್ ತಂಡಕ್ಕೆ ಆಧಾರವಾದರು. ರೀಜಾ ಅಜೇಯ 29 ಮತ್ತು ಮಾರ್ಕ್ರಮ್ ಅಜೇಯ 23 ರನ್ ಗಳಿಸಿದರು.
ಇದುವರೆಗೆ 7 ಸೆಮಿ ಫೈನಲ್ ಗಳಲ್ಲಿ ವಿಫಲವಾಗಿದ್ದ ದಕ್ಷಿಣ ಆಫ್ರಿಕಾ ಇದೇ ಮೊದಲ ಬಾರಿಗೆ ಐಸಿಸಿ ಫೈನಲ್ ತಲುಪಿದೆ.