ಬೆಂಗಳೂರು, (www.thenewzmirror.com) ;
ಮೊದಲೇ ಬೆಲೆ ಏರಿಕೆಯಿಂದ ಬಸವಳಿದಿದ್ದ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಮತ್ತೊಂದು ಶಾಕ್ ಕೊಟ್ಟಿದೆ. ಈಗಾಗಲೇ ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿಹೋಗಿರುವ ಗ್ರಾಹಕರಿಗೆ ಮತ್ತೊಂದು ಬಿಸಿ ಕೊಟ್ಟಿದ್ದು, ನಂದಿನಿ ಪ್ಯಾಕೆಟ್ ಹಾಲಿನ ದರ ಪ್ರತಿಲೀಟರ್ ಗೆ 4 ರೂಪಾಯಿ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಇಂದು ನಡೆದ ಸಚಿವ ಸಂಪುಟ ನಡೆಸಿದ ಸಭೆಯಲ್ಲಿ ಹಾಲು ಒಕ್ಕೂಟದ ಎಲ್ಲ ನಿಗಮಗಳಿಗೂ ಅನ್ವಯವಾಗುವಂತೆ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 4 ರೂ. ದರ ಹೆಚ್ಚಳ ಮಾಡಿ ತೀರ್ಮಾನ ಮಾಡಲಾಗಿದೆ.

ನಂದಿನಿ ಹಾಲಿನ ದರ ಹೆಚ್ಚಿಸಿ ಇನ್ನೂ ವರ್ಷವಾಗಿರಲಿಲ್ಲ ಅಷ್ಟರೊಳಗೇ ಮತ್ತೆ ದರ ಏರಿಕೆ ಮಾಡುವಂತೆ KMF ಪ್ರಸ್ತಾವನೆ ಸಲ್ಲಿಸಿತ್ತು. ಅದರಂತೆ ಪ್ರತಿ ಲೀಟರ್ ಗೆ 4 ರೂ ಹೆಚ್ಚಳ ಮಾಡಿ ಇಂದಿನ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ.
ಕೆಎಂಎಫ್ ಅಧಿಕಾರಿಗಳ ಜೊತೆ ಮೂರು ದಿನಗಳ ಹಿಂದೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ದರ ಹೆಚ್ಚಳಕ್ಕೆ ಒಪ್ಪಿಗೆ ನೀಡಿರಲಿಲ್ಲ. ಇದೀಗ ಕ್ಯಾಬಿನೇಟ್ ನಲ್ಲಿ ದರ ಏರಿಸಿರೋದು ಜನತೆಗೆ ಮತ್ತೊಂದು ಶಾಕ್ ಕೊಟ್ಟಿದೆ.
ಯಾವ್ಯಾವ ಹಾಲು ಎಷ್ಟಿದೆ?
– ನೀಲಿ ಪ್ಯಾಕೆಟ್ ಹಾಲು – 44 ರೂ ನಿಂದ 48 ರೂ
– ಆರೆಂಜ್ ಪ್ಯಾಕೆಟ್ ಹಾಲು – 54 ರೂ. ನಿಂದ 58 ರೂ.
– ಸಮೃದ್ಧಿ ಹಾಲಿನ ಪ್ಯಾಕೆಟ್ 56 ರೂ. ನಿಂದ 60 ರೂ.
– ಗ್ರೀನ್ ಸ್ಪೇಷಲ್ 54 ರೂ. ನಿಂದ 58 ರೂ.
– ನಾರ್ಮಲ್ ಗ್ರೀನ್ 52 ರೂ. ನಿಂದ 56 ರೂ.
– ಮೊಸರು ಒಂದು ಲೀಟರ್ ಗೆ 50 ರೂ. ನಿಂದ 54 ರೂ.
ರಾಜ್ಯ ಸರ್ಕಾರದ ಈ ತೀರ್ಮಾನ ಜನಸಾಮಾನ್ಯರು ಹಾಗೂ ಹಾಲು ಉತ್ಪಾದಕರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದು 3ನೇ ಬಾರಿಗೆ ಹಾಲಿನ ದರ ಹೆಚ್ಚಳ ಮಾಡಿದೆ. ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷದಲ್ಲಿ 2 ರೂ. ಹೆಚ್ಚಳ ಮಾಡಿತ್ತು. ಇದಾದ ನಂತರ ಕಳೆದ ಆರೇಳು ತಿಂಗಳ ಹಿಂದೆ 50 ಗ್ರಾಂ ಹಾಲು ಹೆಚ್ಚಳ ಮಾಡಿ, ಅದಕ್ಕೆ 2 ಬೆಲೆ ಹೆಚ್ಚಳ ಮಾಡಿತ್ತು. ಇದೀಗ ಮೂರನೇ ಬಾರಿಗೆ 4 ರೂ. ಹೆಚ್ಚಳ ಮಾಡಲಾಗಿದೆ.
ಇದೀಗ ಹಾಲಿನ ದರ ಹೆಚ್ಚಳದ ಬೆನ್ನಲ್ಲಿಯೇ ಹಾಲಿನ ಉಪ ಉತ್ಪನ್ನಗಳನ್ನು ತಯಾರಿಸುವ ಹೋಟೆಲ್‌ನ ಉತ್ಪನ್ನಗಳಾದ ಚಹಾ-ಕಾಫಿ, ಬೇಕರಿ ಉತ್ಪನ್ನಗಳ ಬೆಲೆಯೂ ಹೆಚ್ಚಾಗಲಿದೆ.