ಬೆಂಗಳೂರು, (www.thenewzmirror.com) ;
ಐಟಿಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಭಾರೀ ಅನಾಹುತ ಸ್ವಲ್ಪದರಲ್ಲೇ ತಪ್ಪಿ ಹೋಗಿದೆ. ಒಂದು ವೇಳೆ ಆ ದುರಂತ ಸಂಭಿಸಿದ್ದರೆ ನೂರಾರು ಜನರ ಪ್ರಾಣಕ್ಕೆ ಕುತ್ತು ಬರುತ್ತಿತ್ತು.
ಹೀಗಂತ ನಾವು ಹೇಳುತ್ತಿರೋದಲ್ಲ.., ಬಿಎಂಆರ್ ಸಿಎಲ್ ಸಿಬ್ಬಂದಿ ಹೇಳುತ್ತಿರುವ ಮಾಹಿತಿ. ಹೌದು, ಬಿಲ್ಡಿಂಗ್ ಒಂದರಲ್ಲಿ ಗ್ಲಾಸ್ ಅಳವಡಿಸೋಕೆ ಆಧಾರವಾಗಿ ಹಾಕಿದ್ದ ಬೃಹತ್ ಸಾರ್ವೆ ಕಳಚಿ ಬಿದ್ದಿದ್ದು, ರೈಲ್ವೆ ಮೇಲೆ ಬಿದ್ದಿದೆ. ಆ ಕ್ಷಣದಲ್ಲಿ ಏನಾದರೂ ಮೆಟ್ರೋ ಟ್ರೈನ್ ಹಾದು ಹೋಗುತ್ತಿದ್ದರೆ ನೂರಾರು ಜನರ ಪ್ರಾಣಕ್ಕೆ ಕುತ್ತು ಬರುತ್ತಿತ್ತು.
ಎಂಜಿ ರಸ್ತೆಯ ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ನಡೆದ ಘಟನೆಯನ್ನ ಭದ್ರತಾ ಸಿಬ್ಬಂದಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಹಾಗಿದ್ದರೆ ಆಗಿದ್ದು ಏನು ಅನ್ನೋದನ್ನ ನೋಡುವುದಾದರೆ.., september 12 ರಂದು ಮುನಿರೆಡ್ಡಿ ಎನ್ನುವ ಭದ್ರತಾ ಸಿಬ್ಬಂದಿ ಎಂ.ಜಿ. ರಸ್ತೆಯಲ್ಲಿ ಭದ್ರತಾ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಅಂದು ಮಧ್ಯಾಹ್ನ ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ಭದ್ರತೆಗಾಗಿ ಪ್ರಭಾರಿಯಾಗಿ ನಿಯುಕ್ತಿಗೊಳ್ಳುತ್ತಾರೆ.
ಅಂದು ಮಧ್ಯಾಹ್ನ 3.50 ರ ಸುಮಾರಿಗೆ ಟ್ರಿನಿಟಿ ಸೆಕ್ಯೂರಿಟಿ ಸೂಪರ್ ವೈಸರ್ ಚಂದ್ರ ಮುನಿರೆಡ್ಡಿಗೆ ದೂರವಾಣಿ ಕರೆ ಮಾಡುತ್ತಾರೆ. ಟ್ರಿನಿಟಿ ಮೆಟ್ರೋ ನಿಲ್ದಾಣದ ಬಳಿ ಇರುವ ಪಿಲ್ಲರ್ 144 ರ ಸಮೀಪ ಈ ಹಿಂದೆ ಅಜಂತ ಹೊಟೇಲ್ ಬಿಲ್ಡಿಂಗ್ ನವರು ಸುಮಾರು 50 ರಿಂದ 60 ಅಡಿ ಎತ್ತರದಲ್ಲಿ ಗ್ಲಾಸ್ ಅಳವಡಿಸುವ ನಿಟ್ಟಿನಲ್ಲಿ ಸಾರ್ವೆ ಮರಗಳನ್ನ ಕಟ್ಟಿದ್ದು, ಕಾರ್ಯನಿರ್ವಹಣೆ ಮಾಡುತ್ತಿರುತ್ತಾರೆ.
ಈ ವೇಳೆ ಸಾರುವೆ ಮರಗಳು ಮೆಟ್ರೋ ವಯಾಡಿಕ್ಟ್ ಮೇಲೆ ಬಿದ್ದು ಹಾನಿಯಾಗಿರುತ್ತದೆ.., ಕೂಡಲೇ ಘಟನಾ ಸ್ಥಳಕ್ಕೆ ಹೋಗಿ ನೋಡಿದಾಗ ಬಿಎಂಆರ್ ಸಿಎಲ್ ಗೆ ಸೇರಿದ್ದ ಜಾಗದಲ್ಲಿ ಸಾರ್ವೆ ಮರಗಳು ಬಿದ್ದಿರೋದು ಕಂಡು ಬಂತು. ಬೈಯ್ಯಪ್ಪನಹಳ್ಳಿ ಟು ಕೆಂಗೇರಿಗೆ ಹೋಗುವ ಮಾರ್ಗ ಇದಾಗಿದ್ದು, ಹಲಸೂರು ಹಾಗೂ ಟ್ರಿನಿಟಿ ಮಧ್ಯವಿರುವ ಪಿಲ್ಲರ್ 144 ರ ಬಳಿ ವಯಾಡಿಕ್ಟ್ ಮೇಲೆ ಬಿದ್ದಿದ್ದನ್ನ ಗಮನಿಸಿದೆ.
![](https://thenewzmirror.com/wp-content/uploads/2023/09/11111111.png)
ಸಾರ್ವೆ ಮರಗಳು ಸರಿಯಾದ ರೀತಿಯಲ್ಲಿ ನಿರ್ಮಿಸದೇ ನಿರ್ಲಕ್ಷ್ಯತನದಿಂದ ನಿರ್ಮಿಸಿದ ಪ್ರಯುಕ್ತ ಮಧ್ಯಾಹ್ನ 3.40 ರ ಸುಮಾರಿಗೆ ಘಟನೆ ನಡೆದಿದೆ. ಭಾರಿ ಸಾರ್ವೆ ಮರಗಳು ವಯಾಡಿಕ್ಟ್ ಮೇಲೆ ಬಿದ್ದು, ಹಾನಿಯಾಗಿರುತ್ತದೆ. ಒಂದು ವೇಳೆ ಸಾರುವೆ ಮರಗಳು ವಯಾಡಿಕ್ಟ್ ಮೇಲೆ ಬಿದ್ದ ಸಂದರ್ಭದಲ್ಲಿ ಮೆಟ್ರೋ ಟ್ರೈನ್ ಹಾದು ಹೋಗುತ್ತಿದ್ದರೆ ಭಾರೀ ಅನಾಹುತ ಆಗಿರುತ್ತಿತ್ತು. ಸಾರುವೆ ಮರಗಳು ಬಿದ್ದಿದ್ದರಿಂದ ಡ್ಯಾಮೇಜ್ ಆಗುವ ಸಾಧ್ಯತೆಯೂ ಇರುತ್ತಿತ್ತು.., ಅಷ್ಟೇ ಅಲ್ಲದೆ ಹೆಚ್ಚಿನ ಪ್ರಯಾಣಿಕರ ಜೀವಕ್ಕೂ ಕುತ್ತು ಬರುವ ಸಾಧ್ಯತೆ ಇರುತ್ತಿತ್ತು. ಹಾಗೆನೇ ಪಿಲ್ಲರ್ ಕೆಳಗೆ ರಸ್ತೆಯಲ್ಲಿ ಚಲಿಸುವ ವಾಹನಗಳಿಗೆ ಜಖಂ ಮತ್ತು ಸಾರ್ವಜನಿಕರ ಪ್ರಾಣಕ್ಕೆ ಹಾನಿಯಾಗುತಿತ್ತು. ಇವರು ಮೆಟ್ರೋ ಕಡೆಯಿಂದ ಯಾವುದೇ ಅನುಮತಿ ಪಡೆಯದೇ ನಿರ್ಲಕ್ಷ್ಯತೆಯಿಂದ ಸಾರುವ ಮರಗಳನ್ನ ಕಟ್ಟಿ ಮೆಟ್ರೋ ವಯಾಡಿಕ್ಟ್ ಗೆ ಹಾನಿ ಮಾಡಿದ್ದು ಹಾಗೂ ರೈಲು ಸಾಗದಂತೆ ಸಮಸ್ಯೆ ಉಂಟುಮಾಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹೀಗಾಗಿ ಈ ಘಟನೆಗೆ ಕಾರಣರಾದ ಸುದರ್ಶನ್ ಬಿಲ್ಡಿಂಗ್ ಮ್ಯಾನೇಜರ್, ಭಾಸ್ಕರ್ ಗ್ಲಾಸ್ ಫಿಟ್ಟಿಂಗ್ ಇನ್ ಚಾರ್ಜ್, ಇರ್ಪಾನ್ ಗ್ಲಾಸ್ ಫಿಟ್ಟಿಂಗ್ ಇನ್ ಚಾರ್ಜ್, ಬಾಲಾಜಿ ಸಾರುವೆ ಗುತ್ತಿಗೆದಾರ ಸ್ಥಳದ ಮಾಲೀಕರು ಇವರ ವಿರುದ್ಧ ಕ್ರಮ ಜರುಗಿಸಬೇಕೆಂದು ಕೋರಿಕೊಳ್ಳುತ್ತೇನೆ ಎಂದು ದೂರು ಕೊಟ್ಟಿದ್ದಾರೆ.
![](https://thenewzmirror.com/wp-content/uploads/2023/09/2222222222.png)
![](https://thenewzmirror.com/wp-content/uploads/2023/09/33333.png)
ಅಷ್ಟಕ್ಕೂ ಮೆಟ್ರೋ ಪಕ್ಕದಲ್ಲಿ ಸಾರುವೆ ಮರಗಳನ್ನ ಕಟ್ಟಿರೋದು ಮೆಟ್ರೋ ನಿಗಮದ ಗಮನಕ್ಕೆ ಬಂದಿಲ್ಲ ಅಂತ ಏನಿಲ್ಲ.., ಮೆಟ್ರೋ ಜಾಗದಲ್ಲಿ ಯಾರಾದ್ರೂ ಅನಾಮಿಕ ವ್ಯಕ್ತಿ ನಿಂತರೆ ಹತ್ತು ಪ್ರಶ್ನೆ ಕೇಳುವ ಮೆಟ್ರೋ ಸಿಬ್ಬಂದಿ, ಸಾರುವೆ ಮರಗಳನ್ನ ಮೆಟ್ರೋ ವಯಾಡಿಕ್ಟ್ ಗೆ ಪಕ್ಕದಲ್ಲೇ ನಿರ್ಮಿಸಿದ್ದರೂ ಅದನ್ನ ಯಾಕೆ ಗಮನಿಸಿಲ್ಲ ಎನ್ನುವ ಪ್ರಶ್ನೆ ಇದೀಗ ಕಾಡುತ್ತಿದೆ.
ಸದ್ಯಕ್ಕೆ ಹಲಸೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಇಲ್ಲಿ ಕೇವಲ ಕಟ್ಟಡ ಮಾಲೀಕರ ನಿರ್ಲಕ್ಷ್ಯವೋ ಇಲ್ಲ ಮೆಟ್ರೋ ಅಧಿಕಾರಿಗಳ ನಿರ್ಲಕ್ಷ್ಯವೋ ಅನ್ನೋದು ತನಿಖೆ ನಂತರವಷ್ಟೇ ಗೊತ್ತಾಗಲಿದೆ..,