ಬೆಂಗಳೂರು, (www.thenewzmirror.com);
ಅತ್ತಿಬೆಲೆ, ಸರ್ಜಾಪುರ ಭಾಗಕ್ಕೆ ಕಾವೇರಿ ನೀರು ಮತ್ತು ಮೆಟ್ರೋ ಯೋಜನೆ ವಿಸ್ತರಣೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಾಗ್ದಾನ ನೀಡಿದರು.
ಆನೇಕಲ್‌ನಲ್ಲಿ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿದ ನಂತರ ಮಾತನಾಡಿದ ಅವರು “ಅತ್ತಿಬೆಲೆ ಮತ್ತು ಸರ್ಜಾಪುರ ಅಭಿವೃದ್ಧಿ ಹೊಂದುತ್ತಿದ್ದು, ಕೈಗಾರಿಕಾ ಪ್ರದೇಶಗಳಾಗಿ ಬೆಳವಣಿಗೆ ಕಾಣುತ್ತಿವೆ. ಈ ಭಾಗದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಬದ್ದವಾಗಿದೆ” ಎಂದರು.
“ಆನೇಕಲ್‌ಗೆ ಸ್ಟೇಡಿಯಂ ಬೇಕು ಎಂದು ಶಾಸಕರಾದ ಶಿವಣ್ಣ ಮನವಿ ಮಾಡಿದ್ದರು, ಅದರಂತೆ 10 ಕೋಟಿ ಅನುದಾನ ಮಂಜೂರು ಮಾಡಲಾಗುವುದು. ಮೂಲಸೌಕರ್ಯಗಳಿಗೆ ನಮ್ಮ ಸರ್ಕಾರದಲ್ಲಿ ಮೊದಲ ಆದ್ಯತೆ” ಎಂದು ಹೇಳಿದರು.
“ಜನತಾ ದರ್ಶನದಲ್ಲಿ ಸ್ವೀಕರಿಸಿರುವ ಎಲ್ಲಾ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲಾಗುವುದು. ಬಗರ್‌ಹುಕುಂ, ಸ್ಮಶಾನ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಎಲ್ಲಾ ತೊಂದರೆಗಳನ್ನು ಜನತಾ ದರ್ಶನದ ಮೂಲಕ ಪ್ರತಿ ತಿಂಗಳು ಬಗೆಹರಿಸುತ್ತೇವೆ ಎಂದರು.
ಅನೇಕಲ್‌ನಲ್ಲಿ ತಹಸೀಲ್ದಾರ್ ನ್ಯಾಯಾಲಯ ಆಗಬೇಕು ಎಂದು ಮನವಿ ಮಾಡಿದ್ದಾರೆ, ಪ್ರತಿ ವಾರ ಇಲ್ಲಿಯೇ ಕೋರ್ಟ್ ನಡೆಸುವಂತೆ ಸೂಚನೆ ನೀಡಿದ್ದೇನೆ. 136 ಶಾಸಕರನ್ನು ಗೆಲ್ಲಿಸಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿದ್ದೀರಿ. ಅದಕ್ಕೆ ನಾವು ನಿಮ್ಮ ಋಣ ತೀರಿಸುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ತಲುಪಿಸುವ ಜವಾಬ್ದಾರಿ ಜನರ ಮೇಲಿದೆ ಎಂದು ಹೇಳಿದರು.
ರಾಜ್ಯಕ್ಕೆ ಮಳೆ ಬೀಳಲಿ ಎಂದು ಎಲ್ಲರೂ ಪ್ರಾರ್ಥನೆ ಮಾಡಿ. ಕಾವೇರಿ ಪ್ರತಿಭಟನೆ ವೇಳೆ ಯಾವುದೇ ಅಹಿತಕರ ಘಟನೆಯಲ್ಲಿ ಜನರು ಭಾಗವಹಿಸಬಾರದು, ಶಾಂತಿಯುತವಾಗಿ ತಮ್ಮ ಆಗ್ರಹವನ್ನು ತಿಳಿಸಬೇಕು ಎಂದು ಮನವಿ ಮಾಡಿದರು.
ಗೃಹಲಕ್ಷ್ಮೀ 2 ಸಾವಿರ ಸಹಾಯಧನ ಯೋಜನೆಯ ಪ್ರಯೋಜನ ಪಡೆದ ಮಹಿಳೆಯರಿಗೆ ಫಲಾನುಭವಿ ಪತ್ರ ವಿತರಣೆ ಮಾಡಲಾಯಿತು.