ಬೆಂಗಳೂರು, (www.thenewzmirror.com) ;
ಕಳೆದ ಮೂರು ವರ್ಷಗಳಿಂದ ಭಾರೀ ವಾಹನಗಳಿಗೆ ನಿಷೇಧಿಸಲ್ಪಟ್ಟಿದ್ದ ಪೀಣ್ಯ ಫ್ಲೈಓವರ್ ಮೇಲೆ ಓಡಾಡೋಕೆ ಅವಕಾಶ ಕಲ್ಪಿಸಲಾಗಿದೆ. ಇದೇ ತಿಂಗಳ ಅಂದರೆ ಜುಲೈ 29 ರಿಂದ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ಬೆಂಗಳೂರು ನಗರ ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಮೇಲ್ಸೇತುವೆಯ ಪ್ರಸ್ತುತ ಸಾಮರ್ಥ್ಯ ಮತ್ತು ಸಂಚಾರಿ ವ್ಯವಸ್ಥೆಯ ಪರಿಸ್ಥಿತಿ ಕುರಿತ ವರದಿ NHAI ಗೆ ತಲುಪಿದ್ದು ಅದರ ಆಧಾರದ ಮೇಲೆ ಅನುಮತಿ ನೀಡಲಾಗಿದೆ.
ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿ ಪ್ರೊ. ಚಂದ್ರ ಕಿಶನ್ ಅವರು ಭಾರಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬಹುದು ವರದಿ ಕೊಟ್ಟ ಹಿನ್ನಲೆಯಲ್ಲಿ ಸಂಚಾರಿ ಪೊಲೀಸರು ಈ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಫ್ಲೈ ಓವರ್ ಗೆ ಅಳವಡಿಸಿರೋ 1,243 ಕೇಬಲ್ ಗಳಿಂದ ಯಾವುದೇ ಕಂಪನ ಉಂಟಾಗಬಾರದು ಎನ್ನುವ ಕಾರಣಕ್ಕೆ ಕೇಬಲ್ ಗಳಿಗೆ ಗ್ರೌಟಿಂಗ್ ಮಾಡಲು ವಾರದಲ್ಲಿ ಒಂದು ದಿನ ಭಾರಿ ವಾಹನಗಳ ಸಂಚಾರ ನಿಷೇಧಿಸಲು ಸಲಹೆಗಳು ಕೇಳಿ ಬಂದಿದ್ದವು. ಹೀಗಾಗಿ ವಾರದಲ್ಲಿ ಒಂದು ದಿನ ಭಾರಿ ವಾಹನಗಳ ಸಂಚಾರ ನಿಷೇಧಿಸಲು ಉದ್ದೇಶಿಸಲಾಗಿದೆ.
ಕಂಡೀಷನ್ ಅಪ್ಲೈ..!
ಮೇಲ್ಸೇತುವೆ ಮೇಲೆ ವಾಹನಗಳ ಗರಿಷ್ಠ ಮಿತಿ 40 ಕಿಮೀಗೆ ನಿಗದಿಪಡಿಸಲಾಗಿದೆ. ಸಂಚಾರಿ ಪೊಲೀಸರು ಲೇ ಬೈ ನಲ್ಲಿ ನಿಂತುಕೊಂಡು ರೆಡಾರ್ ಗನ್ ಗಳ ಸಹಾಯದದಿಂದ ವೇಗಮಿತಿಯನ್ನು ನಿಯಂತ್ರಿಸಲಿದ್ದಾರೆ. ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಶನಿವಾರ ಬೆಳಗ್ಗೆ 6 ಗಂಟೆಯ ವರೆಗೂ ಭಾರಿ ವಾಹನಗಳ ಓಡಾಟ ನಿಷೇಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.